1969ನೇ ಇಸವಿ ಇರಬೇಕು. ನಾನಾಗ ಇನ್ನೂ
12ರ ಬಾಲಕ.
ನಾವು ವಾಸವಾಗಿದ್ದ ಬಲ್ಲಾಳ್ ಬಾಗ್
’ವೀರ ಭವನ’ದಲ್ಲಿ,
ಹೆಗ್ಗಡೆಯವರ ಮನೆಯ ಮುಂಭಾಗ ಕೆಡವಿ ಕಾಂಕ್ರೀಟ್ ಸ್ಲಾಬ್ ಹಾಕಿ ನವೀಕರಿಸಲಾಗುತಿತ್ತು. ಹಲವಾರು ಕಟ್ಟಡ
ಕಾರ್ಮಿಕರು ಕಾರ್ಯನಿರತವಾಗಿದ್ದರು. ಅದರಲ್ಲಿ ಒಬ್ಬ ಒಕ್ಕಣ್ಣ(ಒಂದು ಕಣ್ಣು ಮಾತ್ರ ಸರಿ ಇದ್ದು ಇನ್ನೊಂದು
ಬಾತುಕೊಂಡು ವಿವರ್ಣವಾಗಿತ್ತು) ನೋಡಲು ಭಯಾನಕವಾಗಿದ್ದು ಆತನ ಸ್ವರವೂ ಹಂದಿಯ ಗುಟುರಿನಂತೆ ಕೇಳಿಸುತಿತ್ತು.
ನನಗಂತೂ ಅವನನ್ನು ಸಮೀಪದಿಂದ ಕಂಡರೆ ಫಕ್ಕನೆ ಕೈಕಾಲು ಗಡಗಡ ನಡುಗುವುದು, ಬೆವರುವುದು, ಬಾಯಿಯ ಪಸೆ
ಆರುವುದು, ಮುಂತಾದ ಲಕ್ಷಣಗಳು ಕಂಡು ಬರುತ್ತಿದ್ದವು!
ಓಂದು ಮಧ್ಯಾಹ್ನ ಕಾರ್ಮಿಕರು ಊಟಕ್ಕೆಂದು
ಹೊರಗೆ ಹೋದ ಸಮಯ. ನಮ್ಮ ಮನೆಯ ನೇರ ಮುಂದೆ ಇದ್ದ ಮೂರು ತೆಂಗಿನ ಮರಗಳ ಪೈಕಿ ಮಧ್ಯದ ತೆಂಗಿನ ಮರದಿಂದ
ಧೊಪ್ಪೆಂದು ಒಂದು ಕಾಯಿ ಕೆಳಗೆ ಬಿತ್ತು. ಎರಡು ದಿನ ಮುಂಚೆ ಮೈಸೂರಿನಿಂದ ಬಂದ, ಮೆಡಿಕಲ್ ಕಲಿಯುತಿದ್ದ
ನಮ್ಮಣ್ಣ ಕೈಯಲ್ಲಿದ್ದ ಪುಸ್ತಕವನ್ನು ಬದಿಗೆ ಸರಿಸಿ ಎದ್ದು ನಿಂತು ಬಿದ್ದ ತೆಂಗಿನಕಾಯಿಯನ್ನು ಗುರುತಿಸಿ,
ನನಗೆ ಆಜ್ನಾಪಿಸಿದನು "ಏಯ್ ಹೋಗಿ ಆ ತೆಂಗಿನಕಾಯಿ ತಕ್ಕೊಂಡು ಬಾ!".
ನಾನಂದೆ "ಅದು....ಅದು....ಅವರ
ತೆಂಗಿನ ಮರದ್ದಲ್ಲವಾ! ನಾನು ತೆಗೆದ್ರೆ ನನಗೆ ಬಯ್ಯುದಿಲ್ಲವಾ?"
"ಏಯ್ ಸುಮ್ಮನೆ ಹೋಗಿ ತಾ. ಆ
ಮನೆಯಲ್ಲಿ ಈಗ ಯಾರೂ ಇಲ್ಲ. ನಾವು ತೆಗೆಯದಿದ್ದರೆ ಕೆಲಸದವರು ತಕ್ಕೊಂಡು ಹೋಗ್ತಾರೆ!. ಓಡಿ ಹೋಗಿ ತಾ
ತೆಂಗಿನಕಾಯಿ, ಯಾರಾದ್ರೂ ಬರುವುದರೊಳಗೆ!"
ನಾನು ಒಳಗೊಳಗೇ ಹೆದರಿಕೊಂಡು ಸ್ವಲ್ಪ
ಸಂಕೋಚದಿಂದ ಅತ್ತಿತ್ತ ನೋಡುತ್ತಾ ಬೆಕ್ಕಿನ ಮರಿಯಂತೆ ಓಡಿ ಹೋಗಿ ತೆಂಗಿನಕಾಯಿಯನ್ನು ಹೆಕ್ಕಿ ಕುಂಕುಳಲ್ಲಿ
ಮಗುವಿನಂತೆ ಭದ್ರವಾಗಿ ಹಿಡಿದುಕೊಂಡು ವಾಪಸ್ ಬರುವಾಗ.....
"ಏನಪ್ಪಾ! ಕೈಯಲ್ಲೇನದು...ಆಂ?"
ಮೊದಲು ಸ್ವಲ್ಪ ಗಡಸು, ಕೊನೆಗೆ ತಗಡಿನ
ಸುಣ್ಣದ ಡಬ್ಬಿಯಾಕಾರದ ’ವಿಮಾನ’ವೆಂಬ ಹೆಸರಿನ ದುರುಸುಬಾಣ ದೀಪಾವಳಿಯ ಸಮಯ
ಹೊತ್ತಿಸಿ ಮೇಲೆ ಹಾರುವಾಗ ಹೊರಡುವ ಶಿಳ್ಳು ಹೊಡೆದಂತೆ ಶಬ್ಧ ಕೆಳಿಸಿ ನನ್ನ ಜಂಘಾಬಲವೇ ಉಡುಗಿ ಹೋದಂತಾಗಿ,
ಗಡ ಗಡ ನಡುಗಿದ ನಾನು ಬಲಹೀನನಾಗಿ ಬೆವರಿ, ಕುಂಕುಳಲ್ಲಿದ್ದ ತೆಂಗಿನಕಾಯಿ ಜಾರಿ ನೆಲಕ್ಕುರುಳಿ ಮಾರು
ದೂರ ಹೊಗಿ ನಿಶ್ಚೇಷ್ಟಿತವಾಯಿತು. ಬಿದ್ದ ಕಾಯನ್ನು ಹೆಕ್ಕಿ ಪುನಃ ಪುನಃ ಎರಡು ಸಲ ಬೀಳಿಸಿ ಕೊನೆಗೆ
ಭದ್ರವಾಗಿ ಹಿಡಿದುಕೊಂಡವನೇ ಮೆಲ್ಲಗೆ ತಲೆ ಎತ್ತಿ ಒಕ್ಕಣ್ಣನನ್ನು ವಾರೆ ದೃಷ್ಟಿಯಿಂದ ನೋಡಿದೆ!
ಆತನ ಮುಖದಲ್ಲಿ ಮುಗುಳುನಗೆ ಕಂಡರೂ
ನನಗೆ ರಾಮಾಯಣದಲ್ಲಿ ಉಲ್ಲೇಖವಾದ ಕಬಂಧ ಎಂಬ ರಕ್ಕಸನ
ನೆನಪಾಗಿ ಈ ಕಡೆ ಅಳು...ಆ ಕಡೆ ದುಗುಡ ಉಂಟಾಗಿ, ತೆಂಗಿನಕಾಯಿಯನ್ನು ಆತನಿಗೆ ನೀಡಿ ಕ್ಷೀಣ
ಸ್ವರದಲ್ಲಿ "ತಗೊಳ್ಳಿ. ಈಗ ಅಲ್ಲಿ ಬಿತ್ತು!" ಎಂದೆ.
ಅವನು ಗೊಳ್ಳೆಂದು ನಕ್ಕು, ಹರಕು ಮುರುಕು
ಕೊಂಕಣಿಯಲ್ಲಿ "ವೊಡ್ನಾರೆ ಪುತಾ...ಕಾಣ್ಗೆ. ಹೋರ್ ಹೋರ್..." (ಪರ್ವಾಗಿಲ್ಲ ಮಗಾ....ತಕ್ಕೋ...
ತಕ್ಕೋ) ಎಂದು ಹೇಳಿ ಎಲೆ ಅಡಿಕೆ ಮೆಲುಕು ಹಾಕುತ್ತಾ ತನ್ನ ಪಾಡಿಗೆ ತಾನು ನಡೆದನು!
6 comments:
Hehe... tumbha chennagide..
ಧನ್ಯವಾದಗಳು, ವಿದ್ಯಾ.
ಬೊರೆ ಆಸಾ ತುಜ್ಹೆ ಹಿ ಕಾಣಿ ರಾಜ್.....ಮಾಗಿರ್ ತೆ ನಾರ್ಲಂಚೆ ಕಾಲೆ ಕೆಲೆನ್......?? Hahaha
ಬೊರೆ ಆಸಾ ತುಜಿ ಹಿ ನಾರ್ಲಾ ಚಿ ಕಾಣಿ......ರಾಜ್....ಮಾಗಿರ್ ಕಾಲೇನ್ ಕೆಲೆನ್ ತೆ ನಾರ್ಲು...?? Hahaha
ಮಾಸೋ ವಾಟುನು ಬೊಬ್ಳೆಂಚ್ಯಾ ಕಡಿ ಕೆಲಿರೇ ವಿವೇಕ್ ಬಾಬ್!
ನನಗೂ ಆಗ ಸುಮಾರು ನಿಮ್ಮದೇ ಪ್ರಾಯ (೧೦-೧೨ವರ್ಷ) ಮಡಿಕೇರಿ ಸಹಕಾರ ನಗರದ ಸ್ವಂತ ಮನೆಯಲ್ಲಿದ್ದೆವು. ಅಲ್ಲಿಂದ ಎರಡೇ ಮಿನಿಟು ಬಾಣೆ ಏರಿ ಓಡಿದರೆ ಸುವಿಸ್ತಾರ ಪೋಲಿಸ್ ಮೈದಾನ - ನಮ್ಮ ಆಟದ ನೆಲೆ. ಆ ಮೈದಾನದ ಒಂದು ಅಂಚಿನಲ್ಲಿ ಅಂದಿನ ಖ್ಯಾತ ಕಾಲ್ಚೆಂಡು ಆಟಗಾರ ಗೋವಿಂದರ ಹೊಸದಾಗಿ ಮನೆ ಮಾಡಿ ನೆಲೆಸಿದ್ದರು. ಅವರ ಹಿತ್ತಿಲಿನಲ್ಲಿ ಬೆಳೆಸಿದ್ದ ಮುಸುಕಿನ ಜೋಳ ಒಂದರ ಮೇಲೆ ನಮ್ಮ ಪಡ್ಡೆಗಳ ಕಣ್ಣು ಬಿತ್ತು, ಬೆಕ್ಕಿನ ಹೆಜ್ಜೆಯಲ್ಲಿ ದಾಳಿ ನಡೆಯಿತು. ಪೋಕರಿಬಳಗದಲ್ಲಿ ಬಹುಶಃ ನಾನು ಕಿರಿಯ ಸದಸ್ಯ. ಜೋಳವನ್ನು ದಂಟಿನಿಂದ ಮುರಿದ ಸದ್ದು ಕೇಳಿದ್ದೇ ಮನೆಯೊಳಗಿದ್ದ ಗೋವಿಂದ ದಡಬಡಿಸಿ ಹಿತ್ತಿಲ ಬಾಗಿಲು ತೆರೆದು ಬಂದರು. ತಂಡ ಪರಾರಿ, ಸಾಹಸದ ಪೂರ್ಣ ಆಯಾಮದ ಅರಿವಿಲ್ಲದ ನಾನು ಹೆಡ್ಡಣಂತೆ ಸಿಕ್ಕಿಬಿದ್ದೆ. ನನ್ನಪ್ಪನ (ಶಿಷ್ಯನೂ ಇದ್ದಿರಬಹುದು) ಒಳ್ಳೇ ಪರಿಚಯವಿದ್ದ ಗೋವಿಂದ "ನೀನ್ಯಾಕೋ ಬಂದೆ ಪೋಲಿಪಟಾಲಮ್ಮು ಜತೆ..." ಎಂದು, ಎರಡು ಬಯ್ದು ಓಡಿಸಿಬಿಟ್ಟರು!! (ಅಸ್ಪಷ್ಟ ನೆನಪಿನ ಪುನಾರಚನೆ)
Post a Comment