Showing posts with label Kannada. Show all posts
Showing posts with label Kannada. Show all posts

Thursday, March 28, 2019

ಹಾಗೇ ಒಂದು ವಿಭಿನ್ನ ಚಲನಚಿತ್ರ ’ಗಂಧದ ಕುಡಿ’ಯ ಇಣುಕುನೋಟ

ಮಿತ್ರ ಅನಂತ ನಾಯಕ್ ಸಗ್ರಿ ಅವರು 2016ರಲ್ಲಿ ನಮ್ಮನೆಗೆ ಭೇಟಿ ನೀಡಿದಾಗ ಅವರ ಕುರುಚಲು ಕೂದಲು, ನೀಳ ದಾಡಿ ಕಂಡು ಹೌಹಾರಿದೆ!

ನನ್ನ ಹಾವಭಾವವನ್ನು ಕಂಡ ಅನಂತ ನನ್ನ ಕಿವಿಯಲ್ಲಿ ಪಿಸುಗುಟ್ಟಿದರು -

"ಒಂದು  ಕನ್ನಡ ಮಕ್ಕಳ ಚಲನಚಿತ್ರದಲ್ಲಿ ಅಭಿನಯಿಸಲು ನಿರ್ಮಾಪಕ,  ನಮ್ಮೂರಿನವರೇ ಆದ ಸತ್ಯೇಂದ್ರ ಪೈ ಅವರಿಂದ ಆಹ್ವಾನ ಬಂದಿದೆ. ಕಥಾವಸ್ತು ಚೆನ್ನಾಗಿದೆ. ಒಪ್ಪಿದ್ದೇನೆ. ಚಿತ್ರದ ಹೆಸರು ’ಗಂಧದ ಕುಡಿ’. ನನ್ನದು ಒಬ್ಬ ವಿಜ್ಞಾನಿಯ ಪಾತ್ರ. ನೈಜತೆಯಿಂದ ಪಾತ್ರ ನಿಭಾಯಿಸಲೆಂದೇ ದಾಡಿ, ಕುರುಚಲು ಕೂದಲು ಬೆಳೆಸಿದ್ದೇನೆ!".

ಅನಂತ ಅವರು ಒಂದೆರಡು ಚಲನಚಿತ್ರಗಳಲ್ಲಿ ಹಾಗೂ ತಮ್ಮ ಕಾಲೇಜು ದಿನಗಳಲ್ಲಿ ನಾಟಕಗಳಲ್ಲಿ ಅಭಿನಯಿಸಿದ್ದು ನನಗೆ ಗೊತ್ತು. ಇತ್ತೀಚೆ ಬಿಡುಗಡೆಗೊಂಡ ಕೊಂಕಣಿ ಚಿತ್ರದಲ್ಲೂ ಅವರ ನಟನಾ ಕೌಶಲತೆನ್ನು  ಕಂಡಿದ್ದೇನೆ.

ಹಾಗೆ ಅವರಿಗೆ ಶುಭ ಹಾರೈಸಿದ ನಾನು, ಚಿತ್ರದ ಬಗ್ಗೆ ಒಂದಿಷ್ಟು ಮಾಹಿತಿ ಕೇಳಿ ಪಡಕೊಂಡೆ. ಕಥೆ ಕೇಳುತ್ತಾ ಕೇಳುತ್ತಾ ಇದೊಂದು ವಿಭಿನ್ನ ಕಥಾವಸ್ಥು ಹೊಂದಿರುವ ಚಿತ್ರ ಮಾತ್ರವಲ್ಲದೇ ಪರಿಸರ ಸಂರಕ್ಷಣೆಯ ಬಗ್ಯೆ ನಿರ್ಮಾಪಕರು, ನಿರ್ದೇಶಕರಿಗಿದ್ದ ಕಾಳಜಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡೆ.

ದಿನಗಳು, ತಿಂಗಳುಗಳು, ವರ್ಷಗಳು ಉರುಳಿದರೂ ಚಲನಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳುವ ಸುದ್ಧಿ ಕಾಣಲಿಲ್ಲ. ಯೂಟ್ಯೂಬ್ ಹಾಗೂ ಫೇಸ್‍ಬುಕ್ ಸಾಮಾಜಿಕ ತಾಣಗಳಲ್ಲೊಂದಿಷ್ಟು ಚಟುವಟಿಕೆಗಳು ಕಂಡು ಬಂದುವು.

ಚಲನಚಿತ್ರದ ಶೂಟಿಂಗ್ ಸಂಪೂರ್ಣಗೊಳಿಸಿ ನಂತರ ಜಾಹೀರಾತಿಗೋಸ್ಕರ ಕಳೆದ ವರ್ಷ ಜೂನ್ 1ರಂದು ಉಜಿರೆಯ ಎರ್ಮಾಯಿ ಜಲಪಾತದ ಬಳಿ ನವೀನ ಶೈಲಿಯ ಚಿತ್ರೀಕರಣ ನಡೆಸುತ್ತಿದ್ದಾಗ "ಮಂಗಲ್ ಪಾಂಡೇ", "ಜೋಧಾ ಅಕ್ಬರ್" ಚಿತ್ರದ ಕಲಾ ನಿರ್ದೇಶಕ, "ಕಣ್ಣು ತೆರೆದಾಗ" ಖ್ಯಾತಿಯ ಯುವ ನಿರ್ದೇಶಕ ಸಂತೋಷ್ ಶೆಟ್ಟಿ ಕಟೀಲ್ ಅವರು ಹಠಾತ್ ಕಾಲು ಜಾರಿ ಬಿದ್ದು ಜಲಸಮಾಧಿಯಾಗಿ ತೀರಿಕೊಂಡ ದುರಂತಮಯ ಸುದ್ಧಿಯನ್ನೂ ಓದಿದೆ.

ಪರಿಸರದ ಬಗ್ಗೆ, ಮಕ್ಕಳ ಬಗ್ಗೆ ಇಷ್ಟೊಂದು ಕಾಳಜಿ, ಉತ್ಸಾಹ ಹೊಂದಿದ ನಮ್ಮ ನೆರೆಜಿಲ್ಲೆ ಉಡುಪಿಯವರಾದ ಅದೂ ನಮ್ಮ ಕೊಂಕಣಿ ಗೌಡ ಸಾರಸ್ವತ ಸಮಾಜದ ಉದ್ಯಮಿ ಸಹೋದರರಾದ ಸತ್ಯೇಂದ್ರ ಪೈ-ಕೃಷ್ಣಮೋಹನ್ ಪೈ ಅವರ ಕನಸಿನ ಚಲನಚಿತ್ರ "ಗಂಧದ ಕುಡಿ" ಬೆಳೆದು ಮರವಾಗುವ ಮುಂಚೆಯೇ ತನ್ನದೇ ಕೈಗೂಸಿನಂತೆ ಅದರ ಆರೈಕೆ ಮಾಡುತ್ತಿದ್ದ ನಿರ್ದೇಶಕ ಸಂತೋಷ್ ಅವರು ಫಕ್ಕನೇ ಕಣ್ಮರೆಯಾಗಿ ಚಿತ್ರದ ಬಿಡುಗಡೆಗೆ ಹತ್ತು ಹಲವು ವಿಘ್ನಗಳೆದುರಾದವಲ್ಲಾ ಎಂದು ಮರುಗಿದೆ.

ಅನಂತ ಅವರಲ್ಲಿ ಚಿತ್ರದ ಭವಿಷ್ಯದ ಬಗ್ಗೆ ಪದೇಪದೇ ಕೇಳುವ ಮನಸ್ಸಾಗಲಿಲ್ಲ.

ಸ್ಥೈರ್ಯ ಬಿಡದ ನಿರ್ಮಾಪಕರು ಹಾಗೂ ತಾಂತ್ರಿಕ ವರ್ಗದವರು ಸೇರಿ ಕೊನೆಗೂ ಚಲನಚಿತ್ರ ನಿರ್ಮಾಣವನ್ನು ಯಶಸ್ವಿಯಾಗಿ ಪೂರ್ತಿಗೊಳಿಸಿದರು ಮಾತ್ರವಲ್ಲ, ಚಿತ್ರವು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ 21 ಪ್ರಶಸ್ತಿ ಪಡೆಯುವಲ್ಲಿ ಸಫಲವಾಯಿತು! ಚಿತ್ರದ ಟ್ರೈಲರ್ ಕೂಡಾ ಯೂಟ್ಯೂಬ್‍ನಲ್ಲಿ ಪ್ರತ್ಯಕ್ಷವಾಯಿತು.

ಹಾಗೇ ಒಂದು ವಾರ ಹಿಂದೆ ಅನಂತ ಅವರು ವಾಟ್ಸಪ್ ಸಂದೇಶದಲ್ಲಿ, ಮಾರ್ಚ್ 29ರಂದು ಉದ್ದೇಶಿದ ಚಲನಚಿತ್ರದ ಬಿಡುಗಡೆಗೆ ಪೂರಕವಾಗಿ ಮಾರ್ಚ್ 24ರಂದು ನಮ್ಮೂರಿನ ಕೆನರಾ ಸಿ.ಬಿ.ಎಸ್.ಇ. ಶಾಲೆಯ ಸುಕ್ರತೀಂದ್ರ ಕಲಾ ಮಂದಿರದಲ್ಲಿ ಜರುಗುವ ವೈಭವೋಪೇತ ತಾರೆಯರ ಸಮಾಗಮದಿಂದ ವಿಜ್ರಂಭಿತ "ಗಂಧದ ಕುಡಿ ಕಲರವ" ವಿಶೇಷ ಕಾರ್ಯಕ್ರಮಕ್ಕೆ ನನ್ನನ್ನು ಆಮಂತ್ರಿಸಿದ್ದರು, ಅಲ್ಲದೇ ಹಿಂದಿನ ದಿನ ಅಂದರೆ ಮಾರ್ಚ್ 23ರಂದು ಫೋನ್ ಕರೆ ಮಾಡಿ ಮಾರನೇ ದಿನ ಖಂಡಿತವಾಗಿಯೂ ಕಾರ್ಯಕ್ರಮಕ್ಕೆ ಪತ್ನಿ ಸಮೇತನಾಗಿ ಬರಬೇಕು ಎಂದು ವಿನಂತಿಸಿದರು. ಅವರೊಂದಿಗಿನ ಆತ್ಮೀಯತೆ ನನ್ನನ್ನು ಸಪತ್ನಿಕನಾಗಿ ಆ ಕಾರ್ಯಕ್ರಮವನ್ನು ವೀಕ್ಷಿಸಲು ಅಯಸ್ಕಾಂತದಂತೆ ಸೆಳೆಯಿತು!

ಭಾನುವಾರ ಮಾರ್ಚ್ 24ರಂದು ಸಾಯಂಕಾಲ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿದ ನಮ್ಮನ್ನು ಅನಂತ ಅವರು ಎದುರುಗೊಂಡು ತುಂಬುಹೃದಯದ ಸ್ವಾಗತ ನೀಡಿ, ತಂಪು ಪಾನೀಯ ಕುಡಿಸಿ, ಒಳಗೆ ಕರೆದೊಯ್ದು ನಿರ್ಮಾಪಕ ಸತ್ಯೇಂದ್ರ ಪೈ ಅವರಿಗೆ ನನ್ನನ್ನು ಪರಿಚಯಿಸಿ, ಪ್ರಶಸ್ತ ಆಸನದಲ್ಲಿ ಕುಳ್ಳಿರಿಸಿದರು. ಸಭಾಂಗಣ ಆಗಲೇ ನೂರಾರು ಸಭಿಕರಿಂದ ಕಿಕ್ಕಿರಿದಿತ್ತು!

ಸಭೆ ಸಮಾರಂಭಗಳ ಸುದ್ಧಿ ಬಿತ್ತರಿಸಿ ಅನುಭವವಿದ್ದ ನನಗೆ ಕೂತಲ್ಲಿ ಕೂರಲಾಗದೇ ಮೊಬಾಯ್ಲ್ ಕ್ಯಾಮರಾ ಕ್ಲಿಕ್ಕಿಸುತ್ತ ದೃಶ್ಯಗಳನ್ನು ಸೆರೆ ಹಿಡಿಯುತ್ತಾ ಅತ್ತಿತ್ತ ಅಡ್ದಾಡಿದೆ.
ಕನ್ನಡ ಚಿತ್ರರಂಗದ ದಿಗ್ಗಜ ನಟ ದೊಡ್ಡಣ್ಣ, ಚಿತ್ರದಲ್ಲಿ ಮುಖ್ಯ ಪಾತ್ರ ವಹಿಸಿದ ಹಿರಿಯ ನಟ ರಮೇಶ್ ಭಟ್, ಶಿವಧ್ವಜ್, ಜ್ಯೋತಿ ರೈ, ಮುಖ್ಯಪಾತ್ರ ವಹಿಸಿದ ಬಾಲ ಕಲಾವಿದೆ ನಿಧಿ ಶೆಟ್ಟಿ, ಇತರ ಕಲಾವಿದರು, ತಾಂತ್ರಿಕ ತಂಡ ಹಾಗೂ ಮಿಸಸ್ ಇಂಡಿಯಾ ಕರ್ನಾಟಕ 2017 ತೃಪ್ತಿ ರಾವ್ ಅವರನ್ನು ಅತೀ ಸಮೀಪದಿಂದ ಕಂಡು ಅವರ ಭಾವಚಿತ್ರಗಳನ್ನೂ ಸೆರೆ ಹಿಡಿಯುವ ಅವಕಾಶ ಗಿಟ್ಟಿಸಿಕೊಂಡೆ. ನಿರ್ಮಾಪಕ ಸತ್ಯೇಂದ್ರ ಪೈ, ಕೊಂಕಣಿ ಕನ್ನಡ ತುಳು ಚಿತ್ರರಂಗದ ಹಿರಿಯ ಕಲಾವಿದ ದಿನೇಶ್ ಪ್ರಭು, ಹಾಗೂ ಕೊಂಕಣಿ, ಕನ್ನಡ ಮಲಯಾಳಂ ಕಲಾವಿದ ಕಾಸರಗೋಡು ಅಶೋಕ್ ಕುಮಾರ್ ಜೊತೆ ಒಂದು ಚಿತ್ರ ಕ್ಲಿಕ್ಕಿಸಿಕೊಂಡೆ!

ವೇದಿಕೆ ಮೇಲೆ ನಿರಂತರ ಸುಂದರ ಯುವಕ ಯುವತಿಯರ ಹಾಡು ನೃತ್ಯ, ಮಿಮಿಕ್ರಿ, ನಗೆಹಬ್ಬ ನಡೆಯುತ್ತಾ ವೀಕ್ಷಕರನ್ನು ಸುಮಾರು ಎರಡು ಗಂಟೆ ಕಾಲ ಮನರಂಜಿಸಿದುವು. ನಂತರ ಎಲ್.ಇ.ಡಿ. ಪರದೆ ಮೇಲೆ ಚಲನಚಿತ್ರದ ಟ್ರೈಲರ್ ಪ್ರದರ್ಶಿಸಲು, ವೀಕ್ಷಕರು ಪ್ರಚಂಡ ಕರತಾಡನ ಮಾಡಿ ಮೆಚ್ಚುಗೆ ಸೂಸಿದರು.
ಸಮಾರಂಭದ ಒಂದು ವೀಡಿಯೋ ದೃಶ್ಯ
"ಗಂಧದ ಕುಡಿ" ಚಲನಚಿತ್ರದ ಟ್ರೈಲರ್
ವೇದಿಕೆ ಮೇಲೆ ದ.ಕ. ಜಿಲ್ಲಾಧಿಕಾರಿಗಳಾದ ಶಶಿಕಾಂತ್ ಸೆಂಥಿಲ್ ಮತ್ತವರ ತಂದೆಯವರು, ನಿರ್ಮಾಪಕರು, ನಟರು, ನಿರ್ದೇಶಕ, ತಾಂತ್ರಿಕ ವರ್ಗದವರು, ರೂಪದರ್ಶಿಗಳು, ಹಿತೈಷಿಗಳು, ಕೆನರಾ ಶಾಲಾ ಸಮಿತಿಯ ಖಜಾಂಚಿ ವಾಮನ್ ಕಾಮತ್ ಹಾಗೂ ಇತರರು ಅಪಾರ ಸಂಖ್ಯೆಯಲ್ಲಿ ಸೇರಿ, ಅಗಲಿದ ನಿರ್ದೇಶಕ ಸಂತೋಷ್ ಶೆಟ್ಟಿ ಕಟೀಲ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ, ದೀಪ ಬೆಳಗಿಸಿ ಸಭಾ ಸಮಾರಂಭ ಉದ್ಘಾಟನೆ ಮಾಡಿ, ತಂತಮ್ಮ ಅನ್ನಿಸಿಕೆ ಅನುಭವಗಳನ್ನು ಹಂಚಿಕೊಂಡರು. ಹಿತೈಷಿಗಳು ಚಲನಚಿತ್ರದ ಯಶಸ್ಸಿಗಾಗಿ ಶುಭ ಹಾರೈಕೆ ಮಾಡಿ, ಪರಿಸರ ಪ್ರಜ್ಞೆಯುಳ್ಳ ಕಥಾವಸ್ತುವಿನ ಮೇಲಾಧಾರಿತ ಈ ಮಕ್ಕಳ ಚಲನಚಿತ್ರವನ್ನು ನೋಡಿ, ಯುವಜನರಿಗೆ ನೀಡುವ ಸಂದೇಶವನ್ನು ಎಲ್ಲರೂ ಎಲ್ಲೆಡೆ ಬಿತ್ತರಿಸಿದಲ್ಲಿ, ಅದೇ ನಿರ್ಮಾಪಕ ವರ್ಗದವರಿಗೆ ಸಲ್ಲುವ ದೊಡ್ದ ಆದರ ಗೌರವ, ಪ್ರಶಸ್ತಿ ಎಂದು ಅಭಿಪ್ರಾಯ ಪಟ್ಟರು.

ಧನ್ಯವಾದ ಸಮರ್ಪಣೆಯೊಂದಿಗೆ ಕಾರ್ಯಕ್ರಮ ಸಮಾಪ್ತವಾಯಿತು.
ನಾಳೆ, ಮಾರ್ಚ್ 29ರಂದು ಕರ್ನಾಟಕ ರಾಜ್ಯದಾದ್ಯಂತ ಹಲವು ಚಿತ್ರಮಂದಿರಗಳಲ್ಲಿ ಒಮ್ಮೆಲೇ ಬಿಡುಗಡೆಯಾಗುತ್ತಿರುವ "ಗಂಧದ ಕುಡಿ" ಮಕ್ಕಳ ಚಿತ್ರವನ್ನು ನೀವೂ ಒಮ್ಮೆ ನೋಡಿ, ಇತರರನ್ನೂ ನೋಡಲು ಪ್ರೇರೇಪಿಸಿ, ಎಂದು ನನ್ನ ಕಳಕಳಿಯ ನಿವೇದನೆ, ಹಾಗೂ ಚಿತ್ರದ ಯಶಸ್ಸಿಗಾಗಿ ಹೃತ್ಪೂರ್ವಕ ಶುಭ ಹಾರೈಕೆ.

ನಾನಂತೂ ಈ ವಾರದಲ್ಲೇ ಟಿಕೆಟ್ ಖರೀದಿಸಿ "ಗಂಧದ ಕುಡಿ" ನೋಡುವ ಯೋಜನೆ ಹಾಕಿಕೊಂಡಿದ್ದೇನೆ.

ನೀವು?

ವಿಶೇಷ  ಧನ್ಯವಾದಗಳು: ಚಿತ್ರಗಳು ಪೋಸ್ಟರ್‍ಗಳು ಹಾಗೂ ಟ್ರೈಲರ್ ವಿಡಿಯೋ ಕೊಂಡಿಗಾಗಿ, "ಗಂಧದ ಕುಡಿ" ನಿರ್ಮಾಪಕ ವರ್ಗಕ್ಕೆ.

Monday, July 16, 2018

ಈಟಿ ಅಲುಗಾಡಿತು


ಚಿತ್ರ ಕೃಪೆ: https://commons.wikimedia.org/
1966ನೇ ಇಸವಿ. ನಾನಾಗ ಇನ್ನೂ ಒಂಬತ್ತು ವರ್ಷದ ಬಾಲಕ. ನಮ್ಮ ತಂದೆ ಕುಡ್ಪಿ ವಾಸುದೇವ ಶೆಣೈ ಅವರು ಮಂಗಳೂರಿನ ಹವ್ಯಾಸಿ ನಾಟಕಕರ್ತರ ಸಂಘ ಕಲಾಭವನ(ರಿ)ದ ಕಾರ್ಯದರ್ಶಿಯಾಗಿ ಜವಾಬ್ದಾರಿ ಹೊತ್ತುಕೊಂಡು ಚಳಿಗಾಲದ ರಜಾದಿನಗಳಲ್ಲಿ "ನಾಟಕ ಸಪ್ತಾಹ"ವೆಂಬ ಏಳು ದಿನದ ಕನ್ನಡ ನಾಟಕ ಸ್ಫರ್ಧೆಯನ್ನೇರ್ಪಡಿಸಿದ್ದರು. ರಾಜ್ಯದ ವಿವಿಧ ನಾಟಕ ಮಂಡಳಿಗಳು ಅದರಲ್ಲಿ ಭಾಗವಹಿಸಿ ಸಾಮಾಜಿಕ, ಐತಿಹಾಸಿಕ ಮತ್ತು ಪೌರಾಣಿಕ ನಾಟಕಗಳನ್ನು ಪ್ರದರ್ಶಿಸಿದ್ದುವು.

ಉಲ್ಲೇಖನೀಯ ನಾಟಕ ಮಂಡಳಿಗಳೆಂದರೆ, ಉಡುಪಿಯ "ರಂಗಭೂಮಿ(ರಿ)", ಕುಂದಾಪುರದ "ರೂಪರಂಗ" ಮತ್ತು ಪೆರ್ಡೂರಿನ "ಕಲಾ ಸೇವಾ ಮಂಡಳಿ". ಅದರಲ್ಲಿ ಸಾಮಾಜಿಕ ನಾಟಕದಲ್ಲಿ ರಂಗಭೂಮಿ ಮತ್ತು ರೂಪರಂಗ ನಡುವೆ ತೀವ್ರ ಪೈಪೋಟಿ ನಡೆದು ಕೊನೆಗೆ ರಂಗಭೂಮಿ ಪ್ರಥಮ ಬಹುಮಾನ, ಮತ್ತು ರೂಪರಂಗ ದ್ವಿತೀಯ ಬಹುಮಾನ ಪಡೆದವು. ರಂಗಭೂಮಿಯ ಕಲಾವಿದರಾದ ಆನಂದ ಗಾಣಿಗ ಮುಖ್ಯ ಪಾತ್ರದಲ್ಲಿ ಹಾಗೂ "ಶೋಭಾ" ಹೆಸರಿನ ಸ್ತ್ರೀಪಾತ್ರದಲ್ಲಿ ಶ್ರೀನಿವಾಸ ಶೆಟ್ಟಿಗಾರ್ ಅದ್ಭುತ ನಟನಾ ಕೌಶಲ್ಯ ಮೆರೆದು ಮಿಂಚಿದ ನೆನಪು ಇಂದಿಗೂ ಮಾಸಿಲ್ಲ. ಅಂತೂ ನಮ್ಮ ತಂದೆಯವರ ಸಾರಥ್ಯದಲ್ಲಿ ನಾಟಕ ಸಪ್ತಾಹ ಯಶಸ್ವಿಯಾಗಿ ನೆರವೇರಿತು.

ನಾನು ಮತ್ತು ನಮ್ಮ ನೆರೆಮನೆಯ ಆಪ್ತಮಿತ್ರ ಮಹಾವೀರ ಎಲ್ಲಾ ಏಳು ನಾಟಕಗಳನ್ನು, ನಮ್ಮಮ್ಮ, ನಮ್ಮಣ್ಣಂದಿರಾದ ಕಮಲಾಕಾಂತ ಮತ್ತು  ರಾಧಾಕಾಂತ ಹೆಚ್ಚಿನ ನಾಟಕಗಳನ್ನು ವೀಕ್ಷಿಸಿದೆವು. ತಂದೆಯವರ ಸ್ಥಾನಮಾನಗಳಿಂದಾಗಿ ನಮಗೆ ಗಣ್ಯ ವ್ಯಕ್ತಿಗಳೊಂದಿಗೆ ಕುಳಿತು ನಾಟಕ ವೀಕ್ಷಿಸಲು ಉಚಿತ ಪಾಸ್ ಇತ್ತು. ಸಾಯಂಕಾಲ ಸುಮಾರು ಆರೂವರೆ ಗಂಟೆಗೆ ಪ್ರಾರಂಭವಾದ ನಾಟಕಗಳು ಒಂಬತ್ತೂವರೆ ಗಂಟೆಗೆ ಮುಕ್ತಾಯಗೊಳ್ಳುತ್ತಿದ್ದುವು. ನಡುವಿರಾಮ ವೇಳೆ ತಂದೆಯವರು ನಮ್ಮನ್ನು ಹೊರಗೆ ಅಡ್ಡರಸ್ತೆಯಲ್ಲಿದ್ದ ಅಂಗಡಿಗೆ ಕರೆದುಕೊಂಡು ಹೋಗಿ ತಿನ್ನಲು ಚಕ್ಕುಲಿ, ಮಸಾಲೆ ಕಡಲೆ, ಪೆಪ್ಪರ್‍ಮಿಂಟ್ ಇತ್ಯಾದಿ, ಮತ್ತು ಕುಡಿಯಲು ವಿಮ್ಟೋ, ಗೋಲ್ಡ್‍ಸ್ಪಾಟ್ ಅಥವಾ ಬಿಕ್ಕೋಲಾ ಕೊಡಿಸುತ್ತಿದ್ದರು.

ಆ ನಾಟಕ ಸಪ್ತಾಹದಲ್ಲಿ ನಡೆದ ವಿನೋದಮಯ, ಸ್ವಾರಸ್ಯಕರ ಘಟನೆಗಳು ನನ್ನ ನೆನಪಿಗೆ ಬರುತ್ತಿವೆ. ಉತ್ತರ ಕರ್ನಾಟಕದ ಯಾವುದೋ ಒಂದು ಹೊಸ ನಾಟಕ ಕಂಪನಿ ಅದರಲ್ಲಿ ಭಾಗವಹಿಸಿ ಐತಿಹಾಸಿಕ ನಾಟಕವೊಂದನ್ನು ಪ್ರಸ್ತುತ ಪಡಿಸಿತ್ತು. ನಾಟಕದ ಮಧ್ಯೆ ಯುದ್ಧ ದೃಶ್ಯವೊಂದಿತ್ತು. ಎರಡು ಪ್ರಾಂತ್ಯದ ಅರಸರು ಮತ್ತವರ ಸೈನ್ಯ ಕಾದಾಡಿ ಕಾದಾಡಿ ಸೇನಾಪತಿಯೊಬ್ಬ ಈಟಿ ಎದೆಯೊಳಗೆ ಹೊಕ್ಕು ಸತ್ತು ಬಿದ್ದ. ಆತ ಅಂಗಾತ ಬಿದ್ದುಕೊಂಡಿದ್ದು, ಈಟಿ ಆತನ ಎದೆಯ ಮೇಲೆ ಒರಗಿತ್ತು. ಸತ್ತಂತೆ ಬಿದ್ದುಕೊಂಡಿದ್ದರೂ ಆ ನಟ ಉಸಿರಾಡುವಾಗ ಈಟಿ ಮೇಲೆ ಕೆಳಗೆ ಹೋಗುತ್ತಿದ್ದ ದೃಶ್ಯ ನನ್ನ ಕಣ್ಣಿಗೆ ಬೀಳದೇ ಹೋಗಲಿಲ್ಲ! ನಾನು ಪಕ್ಕ ಕೂತ ಮಹಾವೀರನ ಕಿವಿಯಲ್ಲಿ ಪಿಸುಮಾತಿನಲ್ಲಿ ಹೇಳಿದೆ, "ನೋಡು ಮಹಾವೀರಾ, ಅವ ಸತ್ತ ಹಾಗೆ ನಟನೆ ಮಾಡಿದ್ರೂ ಈಟಿ ಮೇಲೆ ಕೆಳಗೆ ಹೋಗ್ತಾ  ಉಂಟು! ದಮ್ಮು ಕಟ್ಟಿ ಬಿದ್ದುಕೊಳ್ಳಲಿಕ್ಕೆ ಕಷ್ಟ ಪಡ್ತಾ ಇದ್ದಾನೆ ಪಾಪ!"

ಅಂತಹ ಸನ್ನಿವೇಶಗಳನ್ನು ಸೂಕ್ಷ್ಮವಾಗಿ ಗಮನಿಸುವ ಅಭ್ಯಾಸ ನನಗಿದ್ದ ಕಾರಣ ಅದು ಕೂಡಲೇ ನನ್ನ ಕಣ್ಣಿಗೆ ಬಿದ್ದು, ಮಹಾವೀರನೂ ಅದನ್ನು ಗಮನಿಸಿದ. ಇಬ್ಬರೂ ಮುಸಿಮುಸಿ ನಗಲು, ನನ್ನ ಪಕ್ಕ ಕುಳಿತ ಕನ್ನಡ ವಿಧ್ವಾಂಸ ಎಸ್.ವಿ. ಪರಮೇಶ್ವರ ಭಟ್ಟರು ನಮ್ಮ ನಗು ಕಂಡು ಕುತೂಹಲದಿಂದ ರಂಗಮಂಚದತ್ತ ಗಮನಿಸಿದರು. ಅವರಿಗೂ ಗೊತ್ತಾಯ್ತು ನಾವ್ಯಾಕೆ ನಕ್ಕೆವೆಂದು!

ಅವರು ನಸುನಗುತ್ತಾ ಪ್ರತಿಕ್ರಿಯೆ ವ್ಯಕ್ತಪಡಿಸಿದರು, "ಓ ಈಟಿ ಅಲುಗಾಡತ್ತಲ್ವಾ! ಪಾಪ ಅವ್ನಿಗೇನು ಗೊತ್ತು, ಮಕ್ಕಳಿಗೂ ನಟನೆಯ ಬಗ್ಗೆ ಇರುವ ಕಾಳಜಿ ಬಗ್ಗೆ! ಪರವಾಗಿಲ್ಲ ನೀವಿಬ್ರು. ಇಷ್ಟು ಚಿಕ್ಕ ವಯಸ್ಸಿನಲ್ಲೇ ಅಷ್ಟೊಂದು ಒಳ್ಳೆಯ ನಾಟಕ ವಿಮರ್ಶಕರಾಗಿದ್ದೀರಾ!"

ಪರಮೇಶ್ವರ ಭಟ್ಟರಂತಹ ಮಹಾನ್ ವಿಧ್ವಾಂಸರು ನಮ್ಮ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ನನಗೆ ಜೀವನದಲ್ಲಿ ಅತೀವ ಹೆಮ್ಮೆ ಹಾಗೂ ತೃಪ್ತಿ ತಂದು ಕೊಟ್ಟ ವಿಷಯವೂ ಹೌದು.

ಆದರೆ, ವಿಷಯ ಅಲ್ಲಿಗೆ ನಿಲ್ಲಲಿಲ್ಲ. ಕೊನೇಯದಕ್ಕಿಂತ ಮುಂಚಿನ ದೃಶ್ಯ. ಸುಮಾರು 10 ನಿಮಿಷಗಳ ದೀರ್ಘ ಕಾದಾಟ ನಡೆದು ಒಬ್ಬ ಅರಸ ಸಾಯುತ್ತಾನೆ, ಮತ್ತು ವಿಜಯೀ ಪಡೆ ಜೈಜೈಕಾರ ಹಾಕುತ್ತಾ ರಣರಂಗದಿಂದ ಸಾಗುವಾಗ ಪರದೆ ಕೆಳೆಗಿಳಿಯುತ್ತದೆ.

ಪರದೆ ಕೆಳೆಗಿಳಿಯಿತೇನೋ ಸರಿ, ಆದರೆ ಸತ್ತು ಬಿದ್ದ ಅರಸ ಅರ್ಧ ಪರದೆಯ ಒಳಗೆ, ಅರ್ಧ ಹೊರಗುಳಿದು, ಮುಜುಗರ ಸೃಷ್ಟಿಸಿ, ಮುಂದಿನ ದೃಶ್ಯ ಹೇಗೆ ಪ್ರಾರಂಭಿಸಬೇಕೆಂಬುದೇ ದಿಗ್ದರ್ಶಕರಿಗೊಂದು ದೊಡ್ದ ತಲೆನೋವಾಗಿ ಪರಿಣಿಮಿಸಿರಬಹುದು!

ಎರಡು ನಿಮಿಷ ಏನೂ ಆಗಲಿಲ್ಲ. ಅರಸ ಬಿದ್ದುಕೊಂಡಲ್ಲೇ ಇದ್ದ, ಪರದೆಯೂ ಆತನ ಮೇಲೊರಗಿ ಮುಚ್ಚಿದಂತೆಯೇ ಇತ್ತು. ಸಂಗೀತಗಾರರು ಒಂದೇ ಸವನೆ ಜೋರಾಗಿ ಹಾರ್ಮೋನಿಯಮ್ ತಬಲಾ ಬಾರಿಸುತ್ತಾ ಇದ್ದರು. ಸತ್ತವನು ಎದ್ದು ಬದಿಗೆ ಹೋಗಲು ಸಾಧ್ಯವೇ? ಪರದೆಯನ್ನು ಈಚೆ ಸರಿಸಲೂ ಸಾಧ್ಯವಿಲ್ಲವೆಂಬ ಸಂದಿಗ್ಧ ಪರಿಸ್ಥಿತಿ! ಕೊನೆಗೆ ಯಾರೋ ನೆಪಥ್ಯ ಪಿಸುಮಾತಾಡಿದ್ದು ಮೈಕ್‍ನಲ್ಲಿ ಅಸ್ಪಷ್ಟವಾಗಿ ಕೇಳಿಸಿತು. ಪರದೆ ತುಸು ಮೇಲೆ ಸರಿಯಿತು.

ನಮಗೆಲ್ಲಾ ಕುತೂಹಲ, ಆತ ಆಚೆ ಬದಿ ಹೇಗೆ ಸರಿಯುತ್ತಾನೆಂದು. ನಾವಿಬ್ಬರೂ ಎದ್ದು ನಿಂತು ಆತನನ್ನೇ ದೃಷ್ಟಿಸಿದೆವು. ಹಲವಾರು ಸಭಿಕರೂ ಆಸನದ ಅಂಚಿನಲ್ಲಿ ಕುಳಿತು ತದೇಕಚಿತ್ತದಿಂದ ನೋಡುತ್ತಾ ಇದ್ದರು.

ಸತ್ತ ಅರಸನು ಫಕ್ಕನೇ ಚಲಿಸಿ, ಮೆಲ್ಲನೇ ಗುಡುಗುಡುಸಿ ಉರುಳಿಕೊಂಡು, ಪರದೆಯಡಿಯಿಂದ ತೂರಿಕೊಂಡು ಆಚೆ ಬದಿ ಸೇರುವಾಗ ಪರದೆ ಪೂರ್ತಿ ಕೆಳಗಿಳಿದು ಸಭಿಕರೆಲ್ಲಾ ಜೋರಾಗಿ ಚಪ್ಪಾಳೆ ತಟ್ಟುತ್ತಾ ಕೇಕೆ ಹಾಕಿ ಬಿದ್ದು ಬಿದ್ದು ನಕ್ಕರು!

Wednesday, December 9, 2015

ಮಣ್ಣಗುಡ್ದೆ ದಿಡುಂ

ಎಪ್ಪತ್ತರ ದಶಕದ ಡಿಸೆಂಬರ್ ತಿಂಗಳ ಒಂದು ಬೆಳಿಗ್ಯೆ ನವಭಾರತ ದಿನಪತ್ರಿಕೆಯನ್ನು ಓದುತ್ತಿದ್ದ ನಾನು, ಕೊನೇಯ ಪುಟದಲ್ಲಿ 'ನಾಳೆ ಮಣ್ಣಗುಡ್ದೆಯಲ್ಲಿ ದಿಡುಂ' ಎಂಬ ಶೀರ್ಷಿಕೆಯನ್ನೋದಿ ಹೌಹಾರಿದೆನು!

ಹೌದು. ಪ್ರೊಫ್ ರೀಡರ್‍ಗಳ ಅಲಕ್ಷ್ಯದಿಂದಾಗಿಯೋ ಅಥವಾ ಹೆಚ್ಚಿನ ಹಳೇ ಕೈಗಳು ಮಣಿಪಾಲದಲ್ಲಿ ಹೊಸದಾಗಿ ಪ್ರಾರಂಭವಾದ ಉದಯವಾಣಿ ದಿನಪತ್ರಿಕೆಯತ್ತ ಆಕರ್ಷಿತರಾಗಿ ಅತ್ತ ನೆಗೆದ ಕಾರಣ ಅನುಭವಿಗಳ ಕೊರತೆಯಿಂದಾಗಿಯೋ ಅಂದಿನ ದಿನಗಳಲ್ಲಿ ನವಭಾರತ ಹಲವಾರು ತಪ್ಪುಗಳನ್ನು ಹೊತ್ತುಕೊಂಡು, ಸೋತು ಬಳಲಿ ನಮ್ಮ ಕೈಸೇರುತ್ತಿದ್ದುದಂತೂ ಹೌದು! ನಮಗಂತೂ ನವಭಾರತದಲ್ಲಿ ಪ್ರಕಟವಾಗುತ್ತಿದ್ದ  'ಶಿಂಗಣ್ಣಾ' ವ್ಯಂಗ್ಯಚಿತ್ರ, 'ಅರ್ಥಗರ್ಭಿತ ವಾರ್ತೆಗಳು' ಮತ್ತು ಸಿನೆಮಾ ಟಾಕೀಸುಗಳ ಜಾಹೀರಾತುಗಳನ್ನು ನೋಡದೇ ಬೆಳಗಾಗುತ್ತಿರಲಿಲ್ಲ! ಕ್ರೀಡಾಪುಟದಲ್ಲಿ ಚಂದ್ರಶೇಖರ್ ಚಿತ್ರಕ್ಕೆ ವೆಂಕಟರಾಘವನ್ ಹೆಸರು, 'ಜೋ ಡಾನ್ ಬೇಕರ್ ಆಸ್ ಮಿಚೆಲ್' ಎಂದು ಹಾಕಲು 'ಜೋ ಡಾನ್ ಮಿಚೆಲ್ ಬೇಕರೀಸ್' ಇತ್ಯಾದಿ ತಪ್ಪುಗಳನ್ನು ಕಾಸಿಗೊಂದು ಕೊಸರಿಗೊಂದರಂತೆ ನೀಡಿ, ಪುಕ್ಕಟೆ ಮನೋರಂಜನೆ ನೀಡುವ ದಿನಪತ್ರಿಕೆಯನ್ನು ನಾವು ಅದು ಹೇಗೆ ಓದದೇ ಇರಲು ಸಾಧ್ಯ....ಹೇಳಿ!

ಅಂದ ಹಾಗೆ, ಇದು ಕೇವಲ ನವಭಾರತದ ಬಗ್ಗೆ ಬರೆಯಲು ಉದ್ದೇಶಿಸಿದ ಲೇಖನವೆಂದು ಅನ್ಯಥಾ ಭಾವಿಸಬಾರದು. 'ಮಣ್ಣಗುಡ್ದೆಯಲ್ಲಿ ದಿಡುಂ' ಒಂದು ಉಲ್ಲೇಖ ಅಷ್ಟೇ! ಮಣ್ಣಗುಡ್ದೆ ದಿಂಡು ನಾಳೆ ಅನ್ನುವಾಗ ಇಂದು 'ದಿಡುಂ' ಎಂದು ಗರ್ನಾಲ್ ಸ್ಫೋಟಿಸಿ ನಮ್ಮನ್ನು ಹೌಹಾರಿಸಿದ್ದಕ್ಕಾಗಿ ನಾನು ನವಭಾರತವನ್ನು ಉಲ್ಲೇಖಿಸಬೇಕಾಯಿತು.

ಮಣ್ಣಗುಡ್ದೆ ದಿಂಡಿನ ಸಂದರ್ಭದಲ್ಲಿ ಗರ್ನಾಲು ಸಿಡಿಸುವುದು ಸಾಮಾನ್ಯ. ಸಾಯಂಕಾಲದಿಂದ ರಾತ್ರಿ ವರೇಗೆ ಗಿರ್‍ಗಿಟ್ಲಿಯಂತೆ ಬಲ್ಲಾಳ್‍ಬಾಗ್‍ನಿಂದ ಮಣ್ಣಗುಡ್ದೆಗೆ ಹಾಗೂ ಹಿಂದೆ ಬಂದು ಆಯಾಸವಾಗಿ ನಾವು ಗಾಢ ನಿದ್ರೆಯಲ್ಲಿದ್ದಾಗ ಗರ್ನಾಲಿನ ಶಬ್ಧಕ್ಕೆ ಎಚ್ಚೆತ್ತು ಗಡಿಬಿಡಿಯಿಂದ ಎದ್ದು ಮುಖಕ್ಕೊಂದಿಷ್ಟು ತಣ್ಣೀರೆರಚಿ, ಬೈರಾಸಿನಿಂದ ಒರೆಸಿ, ಹೊರಗೋಡಿ ಕಂಪೌಂಡ್ ಗೋಡೆಯನ್ನೇರಿ ಕುಳಿತು, ಝೈಂ ಝೈಂ ಬ್ಯಾಂಡ್ ವಾದನದ ತಾಳಕ್ಕೆ ತಕ್ಕಂತೆ ಕುಣಿಯುತ್ತಾ ವೈಯ್ಯಾರದಿಂದ ಮೈ ತಿರುಗಿಸುತ್ತಾ ಗಂಭೀರತೆಯ ಮುಖಮುದ್ರೆಯೊಂದಿಗೆ ಸಾಗಿ ಬರುವ ತಟ್ಟಿರಾಯ, ರಾಣಿಯರನ್ನು ಕಂಪೌಂಡ್ ಪಕ್ಕದಿಂದ ಸಾಗುವ ದೃಶ್ಯವನ್ನು ಕಣ್ತುಂಬಾ ಕಾಣುವುದೇ ಒಂದು ಖುಷಿ! ನಂತರ ಬಂಡಿಯನ್ನೇರಿ ವಾಲಗದ ಧ್ವನಿಗೆ ಹಿಂಬಾಲಿಸಿ ಬರುವ ಗ್ರಾಮ ದೇವರ ಮೂರ್ತಿ ಗುರ್ಜಿಯನ್ನೇರಿ ಪೂಜೆಯನ್ನು ಸ್ವೀಕರಿಸುವಾಗ ಮೊಳಗುವ ಕೊಂಬು, ಭಗವತಿ ಕ್ಷೇತ್ರದ  ಗೂನುಬೆನ್ನಿನ ರಾಮ, ಮತ್ತವನ ಮೇಳದ ಚಂಡೆವಾದ್ಯ, ಸಿಡಿಸುವ ಮತಾಪು, ಪಟಾಕಿ ಎಲ್ಲವೂ ಕಣ್ಮುಂದೆ ಇಂದಿಗೂ ಮಾಸದೇ ಉಳಿದಿದೆ, ಕಿವಿಯಲ್ಲಿನ್ನೂ ಮೊಳಗುತ್ತಿದೆ!


ಇನ್ನು 'ಮಣ್ಣಗುಡ್ದೆ ದಿಂಡು' ಅಂದರೇನು, ಎಂದು ತಿಳಿದುಕೊಳ್ಳೋಣ. ಈ 'ಮಣ್ಣಗುಡ್ದೆ ದಿಂಡು' ಅನ್ನುವಂತಹದು ಪ್ರತಿ ವರ್ಷ ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ನಡೆಯುವ ಉತ್ಸವ. ಕನ್ನಡ ಭಾಷೆಯಲ್ಲಿ ದಿಂಡು ಅಂದರೆ ಉತ್ಸವ ಎಂದು ಅರ್ಥವಿದೆ. ಇಲ್ಲಿ ದಿಂಡು ಎಂದರೆ ಗುರ್ಜಿ ಉತ್ಸವ. ಗುರ್ಜಿ ಅನ್ನುವುದು 'ಗುಜ್ಜು' ಅಥವಾ ಮರದ ಕಂಬಗಳನ್ನು ನೆಟ್ಟು ಬಿದಿರಿನ ಮುಕುಟ ಕಟ್ಟಿ ಕೆಂಪು ಬಿಳಿ ಪತಾಕೆಗಳನ್ನು ಸುತ್ತಲೂ ನೇತಾಡಿಸಿ, ಭುಜಕ್ಕಿಷ್ಟು, ಸೊಂಟಕ್ಕಿಷ್ಟು ತರಕಾರಿ ಹಣ್ಣು ಹಂಪಲು ವೈವಿಧ್ಯಗಳನ್ನು ಕಟ್ಟಿ, ಕಂಬಗಳಿಗೆ ಅಡಿಕೆಯ ಮಾಲೆಯನ್ನು ಸುತ್ತಿ, ನಲಿದಾಡುವ, ಓಡಾಡುವ ಬಣ್ಣಬಣ್ಣದ ವಿದ್ಯುದ್ದೀಪಗಳಿಂದ ಅಲಂಕರಿಸಿ ಝಿಗ್ಗನೆ ಮಾರು ದೂರ 'ಮಾರನ ಅರಮನೆಯಂತೆ' ಎದ್ದು ಕಾಣುವಂತೆ ಮಾಡುವ ಮೋಡಿ ನಮ್ಮ ಚಿಕ್ಕಂದಿನಿಂದ ಇಂದಿನ ವರೇಗೆ ವರ್ಷಂಪ್ರತಿ ಬೆಳೆದು ಬಂದು ಇಂದಿಗೂ ಸಾವಿರಾರು ಜನರನ್ನು ಆಕರ್ಷಿಸುತ್ತಿದೆ. ನಮ್ಮ ವಾಸಸ್ಥಾನ ಬಲ್ಲಾಳ್‍ಬಾಗ್ ಹಾಗೂ ಸಮೀಪದ ಮಣ್ಣಗುಡ್ದೆಯಲ್ಲಿ ಮುಖ್ಯವಾಗಿ ನಿರ್ಮಿಸುವ ಗುರ್ಜಿಗಳಲ್ಲದೇ ಮಣ್ಣಗುಡ್ದೆಯಿಂದ ಅಳಕೆಗೆ ಹೋಗುವ ದಾರಿಯಲ್ಲಿ ಕೃಷ್ಣ ಮಠದಲ್ಲಿ, ಒಂದು ಚಿಕ್ಕ ಕಡಲೆಕಾಳಿನ ಗುರ್ಜಿಯನ್ನೂ ನಿರ್ಮಿಸುತ್ತಿದ್ದರು. ಅದರ ವೈಶಿಷ್ಟ್ಯ ಏನೆಂದರೆ, ಅಡಿಕೆಯ ಬದಲು ನೀರಲ್ಲಿ ನೆನೆಸಿದ ಕಡಲೆ ಕಾಳಿನ ಮಾಲೆಯನ್ನು ಗುರ್ಜಿಯ ಕಂಬಗಳಿಗೆ ಸುತ್ತುವುದು. ಉತ್ಸವದ ಮಾರನೇ ದಿನ ಗುರ್ಜಿಗೆ ಕಟ್ಟಿದ ತರಕಾರಿ ಹಣ್ಣುಹಂಪಲುಗಳನ್ನು ಏಲಂ ಹಾಕಿ ಮೂರು ಅಥವಾ ನಾಲ್ಕು ಪಟ್ಟು ಬೆಲೆ ಸಂಗ್ರಹಿಸುತ್ತಾ ಇದ್ದರು. ಆ ಏಲಂ ನೋಡುವುದು ಮತ್ತೊಂದು ಕುತೂಹಲ ನನಗೆ! ವಿಕ್ರತ ಕಾಡು ಅನನಾಸು ತಿನ್ನಲು ಯೋಗ್ಯವೇ ಎಂಬ ಯೋಚನೆ. ಗೇರುಹಣ್ಣಿನಂತೆ ಕಾಣುವ ಸೇಬು ಹಾಗೂ ಅದಕ್ಕೆ ಪೋಣಿಸಿದ ಗೇರುಬೀಜ ಯಾರು ಕೊಳ್ಳುವರೆಂಬ ಕೌತುಕ! 

ಶಾಲೆಗೆ ಹೋಗಲು ಪ್ರಾರಂಭಿಸಿದ ನಂತರ ಮೊದಲು ಅಮ್ಮ ಅಥವಾ ಅಣ್ಣಂದಿರ ಕೈ ಹಿಡಿದು ಮೆಲ್ಲನೆ ಹೆಜ್ಜೆ ಹಾಕುತ್ತಾ ಮಣ್ಣಗುಡ್ದೆಯತ್ತ ನಡೆದು ದಾರಿಯಲ್ಲಿ ಅಲ್ಲಲ್ಲಿ ಐಸ್‍ಕ್ಯಾಂಡಿ ಮಾರುವವರನ್ನು, ಪುಗ್ಗೆ, ಪೀಪಿ, ಟಾಂಟಾಂ, ಬೊಂಬೆಗಳನ್ನು ಮಾರುವವರನ್ನು, ಬೊಂಬಾಯಿ ಮಿಠಾಯಿ, ಬೊಂಬಾಯಿ ಖಿಲೋನಾಗಳನ್ನು, ಚಕ್ರ ತಿರುಗಿಸಿ ಒಂದು ಮುಷ್ಟಿ ನೆಲಕಡಲೆ ಗೆಲ್ಲಬಹುದಾದಂತಹ 'ರಷ್ಯನ್ ರೂಲೇ' ಮಾದರಿಯ ಜೂಜಿನ ಚಕ್ರಗಳನ್ನು, ರಟ್ಟಿನ ದೊಡ್ದ ಬೋರ್ಡಿಗೆ ಬಣ್ಣದ ಕಾಗದ ಸುತ್ತಿದ ಚಿಕ್ಕ ಚಿಕ್ಕ ಪೊಟ್ಟಣಗಳನ್ನು ಅಂಟಿಸಿ ಅವುಗಳೊಳಗೆ ಅದೃಷ್ಟದ ಸಂಖ್ಯೆ ಇರಿಸಿ ಬಹುಮಾನ ಗೆಲ್ಲಿಸುವ ಮಂದಿ, ರಿಂಗ್ ಬಿಸಾಡಿ ಸಾಬೂನು, ಸ್ನೋ, ಆಟಿಕೆ, ಬಿಸ್ಕತ್ತಿನ ಪೊಟ್ಟಣ ಇತ್ಯಾದಿಗಳನ್ನು ಗೆಲ್ಲಬಹುದಾದ ಸ್ಟಾಲು,  ಚರುಮುರಿ, ಮುಳ್ಳುಸೌತೆ, ವಿಮ್‍ಟೋ, ಗೋಲಿ ಸೋಡಾ, ಖರ್ಜೂರ ಮಾರುವವರನ್ನು ತದೇಕಚಿತ್ತನಾಗಿ ದೃಷ್ಟಿಸಿ, ಒಂದು ದಿನ ನಾನೂ ಇವರಂತೆ ರಸ್ತೆ ಬದಿ ಸ್ಟಾಲ್ ಇಟ್ಟು ಒಬ್ಬ ದೊಡ್ದ ವ್ಯಾಪಾರಿ ಆಗುವ ಕನಸು ಕಾಣುತ್ತಿದ್ದೆ!

ನನಗೆ ನೆನಪಿದ್ದಂತೆ, ನಾನು 1962ರಿಂದ ಬಲ್ಲಾಳ್‍ಬಾಗ್ ವೀರ ಭವನದಲ್ಲಿನ ನಮ್ಮ ವಾಸದ ಮನೆಯ ಕಂಪೌಂಡ್ ಗೋಡೆಯ ಮೇಲೇರಿ  ಕುಳಿತು ಬಲ್ಲಾಳ್‍ಬಾಗ್ ವೃತ್ತದಲ್ಲಿ ಹತ್ತು ಸಮಸ್ತರು ಸೇರಿ ನಿರ್ಮಿಸಿ ಪೂಜಿಸುತ್ತಿದ್ದ ಗುರ್ಜಿಯನ್ನು ಕಾಣುತ್ತಿದ್ದೇನೆ. ಈ ಗುರ್ಜಿಯ ಮರಮಟ್ಟುಗಳನ್ನು ಲಾಲ್‍ಬಾಗ್ ಸ್ಟೋರ್ ಮಾಲಿಕ ನಾರಾಯಣ ಶೆಟ್ಟಿಯವರ ಕಟ್ಟಿಗೆ ಡಿಪೋ‍ದ ಅಟ್ಟದಲ್ಲಿ ಕೂಡಿಡುತ್ತಿದ್ದರು. 

ಬಲ್ಲಾಳ್‍ಬಾಗ್‍ನಲ್ಲಿ ಅರುವತ್ತರ ದಶಕದ ಕೊನೇಗೆ ಪ್ರಾರಂಭವಾದ 'ಕೊಡಿಯಾಲ್‍ಬೈಲ್ ಯೂತ್ ಕ್ಲಬ್' ದಿಂಡಿನ ವೇಳೆ ಸಕ್ರಿಯವಾಗಿ ಮನೋರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಿ ಸ್ಥಬ್ದಚಿತ್ರವನ್ನು ಸಜ್ಜುಗೊಳಿಸಿ ಭಾರತ ಮಾತೆಯಂತೆ ವೇಷ ಧರಿಸುವ, ಆರ್ಕೆಸ್ಟ್ರಾ ಜೊತೆ ಮೈಕ್‍ನಲ್ಲಿ ಜೋರಾಗಿ "ಅಜ್ಜಾ ಅಜ್ಜಾ....ಈರೆಗ್ ಕೆಬಿ ಕೇಣುಜ್ಜಾ....." ಎಂದು ತೀಸ್ರಿ ಮಂಜಿಲ್ ಸಿನೆಮಾ ಹಾಡಿನ ರಾಗಕ್ಕೆತುಳುವಿನಲ್ಲಿ ಇಂಪಾಗಿ ಹಾಡುವ ರಾಜ್ ನರೇಶ್, 'ಇಸ್ಕ್ ಇಸ್ಕ್....' ಎಂದು ಕೂಗುತ್ತಾ ಡ್ಯಾನ್ಸ್ ಮಾಡುವ ಪೈಲ್ವಾನ್ ಲೂಯಿಸ್, ಪ್ರಕಾಶ, ರಮೇಶ್ ಆಚಾರಿ, ಜಯ, ಕಾಶಿನಾಥ, ಏಕನಾಥ, ರವಿ ಕುಮಾರ, ಗಣೇಶ ಮತ್ತು ಇತರ ಮಿತ್ರರು ನೀಡಿದ ಪುಕ್ಕಟೆ ಮನರಂಜನೆ ಇಂದಿಗೂ ಮರೆತಿಲ್ಲ ನಾನು.

ಮಣ್ಣಗುಡ್ದೆ ಗುರ್ಜಿಯ ಹಿಂಭಾಗದ ಖಾಲಿ ಸ್ಥಳದಲ್ಲಿ ಮರದ ಕುದುರೆ ಮತ್ತು ತಿರುಗು ತೊಟ್ಟಿಲು ಆಟದ ಸಂತೆ ಒಂದು ವಾರ ಮುಂಚಿತವಾಗಿ ಸ್ಥಾಪನೆಯಾಗಿ, ತೆಂಗಿನ ನಾರು ಸಿಕ್ಕಿಸಿ ತೊಟ್ಟಿಲು ತಿರುಗುವಾಗ ಮಾಡುವ ಕುಯ್ಂ.... ಕುಯ್ಂ.... ಕಿರ್ರ್.... ಕಿರ್ರ್.... ಶಬ್ಧವನ್ನು ಕೇಳಿ, ಎಲ್ಲೋ ಅಪರೂಪಕ್ಕೆ ಜೋಕಾಲಿ ಕಂಬ ಮುರಿದು ಬಿದ್ದು ಕೆಲವರು ಆಸ್ಪತ್ರೆ ಸೇರಿದ ಬಗ್ಗೆ ಕೇಳಿ ತಿಳಿದು ಭಯವಿಹ್ವಲನಾಗಿ ಗಡ ಗಡ ನಡುಗಿ, ನಾನಂತೂ ಜನ್ಮದಲ್ಲಿ ತೊಟ್ಟಿಲಿನಲ್ಲಿ ಕೂತುಕೊಳ್ಳುದಿಲ್ಲ ಎಂದು ಶಪಥ ಹಾಕಿದರೂ, ಎರಡೇ ವರ್ಷದಲ್ಲಿ ಆ ಶಪಥವನ್ನು ಮುರಿದು ಧೈರ್ಯ ತುಂಬಿದ ಅನಂತ, ನವೀನ, ರವಿ ಕುಮಾರ ಅವರೊಂದಿಗೆ ಕೂತು, ನಾಲ್ಕು ಸುತ್ತು ಮೇಲೆ ಕೆಳಗೆ ತಿರುಗಿದಾಗ ತಲೆ ಗಿರ್ರನೆ ತಿರುಗಿ, ಮೂರು ಲೋಕ ಕಂಡಂತಾಗಿ, ಹೊಟ್ಟೆ ತೊಳಸಿ ಬಂದರೂ ನಸು ನಕ್ಕು ನಾನು ಸರಿ ಇದ್ದೇನೆಂದು ತೋರಿಸಲು ಜಂಗ್ಲೀ ಸಿನೆಮದ ಶಮ್ಮಿಕಪೂರ್‍ನಂತೆ ಕುಣಿದು ಕುಪ್ಪಳಿಸಿ, ದೇವ್ ಆನಂದ್  ಶೈಲಿಯಲ್ಲಿ ಅತ್ತಿತ್ತ ಓಲಾಡುತ್ತಾ ನಾಲ್ಕು ಹೆಜ್ಜೆ ಓಡಿ, ತೋಡಿಗೆ ಬೀಳುವುದರಿಂದ ಸ್ವಲ್ಪದರಲ್ಲಿ ಪಾರಾದದ್ದೂ ಇದೆ!

ಸಂತೆಗಳ ಪೈಕಿ,  ಚರುಮುರಿ ಸ್ಟಾಲ್ ನನಗೆ ಮತ್ತು ನನ್ನ ಮಿತ್ರರಿಗೆ ಅತ್ಯಂತ ಇಷ್ಟ. ಹಾಗೇ 1971ರಲ್ಲಿ ಒಂದು ದಿನ ನಾವು ಶ್ರೀನಿವಾಸ ಬಲ್ಲಾಳರ ಮನೆಯಲ್ಲಿ ಸೇರಿ  ನಮ್ಮ ಬ್ಲುಮೂನ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದಿಂಡಿನ ದಿನ ಬಲ್ಲಾಳ್‍ಬಾಗ್ ಸರ್ಕಲ್ ಬಳಿ ಒಂದು ಚರುಮುರಿ, ತಂಪು ಪಾನೀಯ ಸ್ಟಾಲ್ ಹಾಕುವುದು, ಎಂದು ನಿರ್ಧಾರ ಕೈಗೊಂಡೆವು. ಅದಕ್ಕಾಗಿ ಹತ್ತು ಪೈಸೆ ಮುಖ ಬೆಲೆಯ ಲಕ್ಕಿಡಿಪ್ ಟಿಕೆಟ್ ಪ್ರಿಂಟ್ ಮಾಡಿಸಿ ಮಾರಿ 60 ರುಪಾಯಿ ಗಳಿಕೆ ಮಾಡಿದೆವು. ಸ್ಟಾಲ್ ಹೇಗಿರಬೇಕು, ಅದರಲ್ಲಿ ಏನೇನು ಮಾರಬೇಕು, ಯಾರ್ಯಾರು ಸಕ್ರಿಯವಾಗಿ ಪಾಲುಗೊಳ್ಳಬೇಕು, ಹಣ ಸ್ವೀಕರಿಸಲು ಯಾರ್ಯಾರು ಪಾಳಿಯಂತೆ ಕುಳಿತುಕೊಳ್ಳಬೇಕು, ಯಾರ್ಯಾರು ದಾರಿಹೋಕರನ್ನು ಪುಸಲಾಯಿಸಿ ನಮ್ಮಲ್ಲಿ ವ್ಯಾಪಾರ ಮಾಡುವಂತೆ ಕರೆತರಬೇಕು, ಮುಂತಾಗಿ ವಿಚಾರ ವಿಮರ್ಷೆ ಮಾಡಿದೆವು.

ನಮ್ಮ ತಂದೆಯವರಿಗೆ 'ಎಸ್ಸೋ ಗ್ಯಾಸ್' ಭಂಡಾರಿಯವರು ನಿಕಟರಾಗಿದ್ದರು. ಹಾಗೇ ಅವರ ಏಜನ್ಸಿಯಲ್ಲಿ ವಿತರಣೆಗೊಳ್ಳುತ್ತಿದ್ದ ಮಣಿಪಾಲದ ತಂಪು ಪಾನೀಯ 'ಬಾಜಲ್' ರಖಂ ಆಗಿ ತರುವುದೆಂದು ನಿರ್ಧಾರವಾಗಿ, ನನ್ನನ್ನು ಆ ಜವಾಬ್ದಾರಿಯಲ್ಲಿ ನಿಯುಕ್ತಿಗೊಳಿಸಿದರು. ನಾನು ದಿಂಡಿನ ಮುಂಚಿನ ದಿನ ಸಂಪತ್ ಬಲ್ಲಾಳ್ ಜೊತೆಗೆ ಕಾರ್‍ನಲ್ಲಿ ಹೋಗಿ 192 ಬಾಜಲ್ ಬಾಟ್ಲಿಗಳ 8 ಪೆಟ್ಟಿಗೆಗಳನ್ನು ತಂದು ನಮ್ಮ ಕಂಪೌಂಡ್‍ನಲ್ಲಿರಿಸಿದೆನು. ಮಿತ್ರ ರಮೇಶ್ ಕಾಮತ್ ಅಂದ, "ಸೆಂಟ್ರಲ್ ವೇರ್‍ಹೌಸ್ ಸಮೀಪ ಒಂದು ಹೊಸ ಮನೆ ಕೆಲಸ ನಡೆಯುತ್ತಿದೆ. ಅಲ್ಲಿಂದ ಮರದ 'ಗುಜ್ಜು'(ಕಂಬ) ತರುವಾ. ನನಗೆ ಮೇಸ್ತ್ರಿಗಳ ಪರಿಚಯ ಉಂಟು". ಹಾಗೇ ನಾವು ನಾಲ್ಕೈದು ಮಿತ್ರರು ಅಲ್ಲಿಗೆ ನಡೆದು ಒಬ್ಬೊಬ್ಬರು ಎರಡೆರಡು ಗುಜ್ಜುಗಳನ್ನು ಎರಡು ಸಲ ಹೋಗಿ ಹೊತ್ತು ತಂದು ಸ್ಟಾಲ್ ನಿರ್ಮಿಸಿ, ಮೇಲೆ ಹೊದಿಸಲು  ಬಾಲಚಂದ್ರನ  ಮುಖಾಂತರ, ನಾರಾಯಣ ಶೆಟ್ಟರ ಲಾರಿಯ ಟಾರ್ಪಾಲು ತರಿಸಿ ಹಾಕಿ ಕಟ್ಟಿ ಭದ್ರಗೊಳಿಸಿದೆವು. 'ಬ್ಲುಮೂನ್ ಸ್ಟಾಲ್' ಎಂದು ಬರೆದ ಒಂದು ಬಟ್ಟೆಯ ಬ್ಯಾನರ್ ಪೈಂಟ್ ಮಾಡಿಸಿ ತಂದು ಕಟ್ಟಿದೆವು. ನಾಲ್ಕು ಟ್ಯೂಬ್‍ಲೈಟ್ ಹಾಗೂ ಗ್ರಾಮೋಫೋನ್, ಮಣ್ಣಗುಡ್ದೆಯಲ್ಲಿನ 'ಸುವರ್ಣ ಸೌಂಡ್ ಸಿಸ್ಟಮ್'ನಿಂದ ಬಾಡಿಗೆಗೆ ಪಡೆದೆವು. ಎಲ್ಲಿಂದಲೋ ಒಂದು ಐಸ್ ಬಾಕ್ಸ್ ತರಿಸಿ ಮಂಜುಗೆಡ್ದೆ ಹಾಕಿ ಬಾಜಲ್ ಬಾಟ್ಲಿಗಳನ್ನು ಅದರಲ್ಲಿರಿಸಿದೆವು.

ದಿಂಡಿನ ದಿನ ಸಾಯಂಕಾಲ ನಾಲ್ಕು ಗಂಟೆಗೆ ಶುರುವಾಯಿತು, ನಮ್ಮ ಚರುಮುರಿ, ಸೌತೆಕಾಯಿ, ಮಿಕ್ಶ್ಚರ್, ನೆಲಕಡಲೆ, ಬಾಜಲ್ ಸ್ಟಾಲ್! ಸಂಪತ್, ವಿಶ್ವನಾಥ, ಮಹಾವೀರ ಕ್ಯಾಶ್ ಜವಾಬ್ದಾರಿ ತಗೊಂಡು, ನಾನು, ಅನಂತ, ರಮೇಶ, ದೇವೇಂದ್ರ ಚರುಮುರಿ, ಸೌತೆಕಾಯಿ, ತಯಾರಿಸುವ ಕೆಲಸ ವಹಿಸಿಕೊಂಡು, ರಾಜಾರಾಮ, ತಾರಾನಾಥ, ಪ್ರೇಮ್‍ನಾಥ, ಬಾಲಚಂದ್ರ ಮತ್ತಿತರರು ಗಿರಾಕಿಗಳನ್ನು ಓಲೈಸಿ, ಆರ್ಡರ್ ಪಡೆದು ಸಪ್ಲೈ ಮಾಡುವ ಮುತ್ತುವರ್ಜಿಯನ್ನು ವಹಿಸಿಕೊಂಡರು. ಅಂತೂ ನಮ್ಮ ಬ್ಲುಮೂನ್ ಸ್ಟಾಲ್ ಅಂದು ಸಾಯಂಕಾಲದಿಂದ ಮಧ್ಯ ರಾತ್ರಿ ವರೆಗೆ ಚೆನ್ನಾಗಿ ವ್ಯಾಪಾರ ಮಾಡಿತು. ನಮ್ಮ ಮನೆಯವರು ಕಂಪೌಂಡ್ ಗೋಡೆ ಬಳಿ ನಿಂತು ನನ್ನನ್ನು ಸನ್ನೆ ಮಾಡಿ ಕರೆದು ಏನೆಲ್ಲಾ ಐಟಂ ಉಂಟೆಂದು ಕೇಳಿ ಚರುಮುರಿ ಆರ್ಡರ್ ಮಾಡಿದ್ದು, ನಮ್ಮಮ್ಮ "ಸ್ವಲ್ಪ ಉಪ್ಪು ಜಾಸ್ತಿಯಾಯಿತು, ಆದರೂ ಪರವಾಗಿಲ್ಲ" ಎಂದು ಸಮಾಧಾನ ಪಡಿಸಿದ್ದು, 8:00 ಗಂಟೆ ಹೊತ್ತಿಗೆ ಬಾಜಲ್ ಎಲ್ಲಾ ಖಾಲಿ ಆಗಿ ನಾನು ಮತ್ತು ಸಂಪತ್ ಪುನಃ ಭಂಡಾರಿಯವರಲ್ಲಿಗೆ ಹೋಗಿ ಸ್ಟಾಕ್ ತಂದದ್ದು, ಮರೆಯುವಂತಿಲ್ಲ!

ಮಾರನೇ ದಿನ ಎಲ್ಲಾ ಮಿತ್ರರು ಸೇರಿ, ವ್ಯಾಪಾರ ಮಾಡುವ ಪ್ರಥಮ ಅನುಭವದೊಂದಿಗೆ, ಖರ್ಚು ಮತ್ತು ಲಾಭಾಂಶ ಲೆಕ್ಕ ಹಾಕಿದಾಗಲೇ ತಿಳಿದದ್ದು, ನಾವು ಒಂದು ನಯಾಪೈಸೆ ಲಾಭ ಮಾಡಿಲ್ಲವೆಂದು! ಕಾರಣ, ನಮ್ಮ ಆದಾಯ ಅಂದು 90 ರುಪಾಯಿ, ಖರ್ಚು 60 ರುಪಾಯಿ ಮತ್ತು ಬಂದ ಲಾಭಾಂಶ 30 ರುಪಾಯಿ ಎಲ್ಲೋ ಸೋರಿ ಹೋಗಿ ಲೆಕ್ಕ ಸಿಗದೇ ಆದ ಲಾಭ ಅಥವಾ ನಷ್ಟ ಶೂನ್ಯ! ಕ್ಯಾಶ್ ಜವಾಬ್ದಾರಿ ಹೊತ್ತ ಸಂಪತ್, ವಿಶ್ವನಾಥ, ಮಹಾವೀರ ಅಲ್ಲದೇ ರಾತ್ರಿ ಪಾಳಿಯಲ್ಲಿ ಜನಜಂಗುಳಿ ಸೇರಿದಾಗ ಆದ ಗೊಂದಲದಲ್ಲಿ, ಕ್ಯಾಶ್‍ಬಾಕ್ಸ್ ನೋಡಿಕೊಳ್ಳಲು ಕುಳಿತವರು ಇನ್ನ್ಯಾರೋ ಇಬ್ಬರು. ಅವರಿಬ್ಬರ ಹೆಸರು ಇಲ್ಲಿ ಉಲ್ಲೇಖಿಸುವುದು ತರವಲ್ಲ. ಆ ಇಬ್ಬರಲ್ಲಿ ಯಾರು ಆ 30 ರುಪಾಯಿ ಜೇಬಿಗಿಳಿಸಿದ್ದರೆಂಬುದನ್ನು ಕಂಡು ಹಿಡಿಯಲು ಅಂದು ಅವರು ದೇವರಾಣೆಯಿಟ್ಟು ಅಲ್ಲಗೆಳೆದ ಕಾರಣ, ನಂತರ ಅವರಲ್ಲೊಬ್ಬನು ಹಲವು ದಿನ ಸ್ವೇಚ್ಛೆಯಾಗಿ ರಾಜನಂತೆ ದುಡ್ದು ಖರ್ಚು ಮಾಡಿ ಐಷಾರಾಮ ಜೀವನ ನಡೆಸಿದರೂ, ಅವನ ಮೇಲೆ ಆಪಾದನೆ ಹೊರಿಸಲು ಇಂದಿಗೂ ಸಾಧ್ಯವಾಗಿಲ್ಲ! ಆ ನಂತರ ಚರುಮುರಿ ಮಾರುವ, ಅಥವಾ ಇತರ ಯಾವುದೇ ಸ್ಟಾಲ್ ಹಾಕುವ ಪ್ರಯತ್ನವನ್ನು ಬ್ಲುಮೂನ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ನಾವು ಮಾಡಿಲ್ಲ. 14 ವರ್ಷ ಪ್ರಾಯದಲ್ಲಿ,  ಜೀವನದಲ್ಲಿ ಪ್ರಥಮ ಸ್ಟಾಲ್ ಇಟ್ಟು ಚರುಮುರಿ ತಯಾರಿಸಿ, ಸೌತೆಕಾಯಿ ಹೋಳು ಮಾಡಿ ಉಪ್ಪು ಖಾರ ಲಿಂಬೆರಸ ಹಚ್ಚಿ ಕೊಟ್ಟು, ಮಿಕ್ಸ್ಚರ್, ನೆಲಕಡಲೆ ಬಾಜಲ್ ಮಾರುವ ವ್ಯಾಪಾರ ನಡೆಸಿದ ಉಲ್ಲಾಸ, ಹೆಗ್ಗಳಿಕೆ, ಅಭಿಮಾನ, ಹೆಮ್ಮೆ ನನ್ನಲ್ಲಿ ಇಂದಿಗೂ ಬತ್ತಿಲ್ಲ!

Sunday, November 1, 2015

ಐ ವಾಂಟ್ ಕನ್ನಡಾ

ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ನನ್ನ ನೆನಪಿನ ಪುಟಗಳನ್ನು ಕೆದಕಿ ಈ ಒಂದು ನೈಜ ಅನುಭವವನ್ನು, ಒಂದು ಹಾಸ್ಯಮಯ ಸನ್ನಿವೇಶವನ್ನು ತಮ್ಮೆಲ್ಲರ ಮುಂದಿಡುತ್ತಿದ್ದೇನೆ. ವಿಚಿತ್ರ ಸನ್ನಿವೇಶದಲ್ಲಿ ನಡೆದ ಈ ನೈಜ ಕಥೆಯಲ್ಲಿ ಬರುವ ಸಂಭಾಷಣೆಗಳನ್ನು ಒದಿ ಯಾರೂ ಕನ್ನಡ ಭಾಷೆಯ ಅವಹೇಳನವೆಂದು ಪರಿಗಣಿಸಬಾರದು. ಸ್ವತಃ ಕನ್ನಡಾಭಿಮಾನಿಯಾದ ನಾನು, ಕುಡಿದ ಅಮಲಿನಲ್ಲಿ ಒಬ್ಬರು ಮಾಡಿದ ತಪ್ಪನ್ನು ತಿದ್ದಿ ಅವರನ್ನು ಸರಿದಾರಿಗೆ ತಂದ ಬಗೆಯನ್ನು, ಹಾಗೂ ಎರಡು ಭಾಷೆ, ಎರಡು ಸಂಸ್ಕೃತಿಯಲ್ಲಿ ಬೆಳೆದ ಜನರಲ್ಲಿ ಭಾಷೆಯ ಅಂತರದಿಂದ ದೊಡ್ದ ಅವಾಂತರವಾಗುವುದನ್ನು  ಜಾಣ್ಮೆಯಿಂದ ತಪ್ಪಿಸಿದ ಬಗ್ಗೆ ವಿವರಿಸಿದ್ದೇನೆ. ಕನ್ನಡ ಭಾಷೆಯ ಅಂಧಾಭಿಮಾನ ಸಲ್ಲದು, ವಿಷ್ಲೇಶಣೆ ಅವಶ್ಯ ಎಂದು ಈ ಮೂಲಕ ತಿಳಿಯಪಡಿಸುತ್ತಿದ್ದೇನೆ.
------------------------------------------------------------------------------------------------------------------------------
Pic source: pixabay.com
1979 ಅಕ್ಟೋಬರ್ ಅಥವಾ ನವೆಂಬರ್ ಸಮಯ ಇರಬೇಕು. ದೀಪಾವಳಿ ರಜೆಯಲ್ಲಿ ಮೈಸೂರು ಸುತ್ತಾಡಲು ಪ್ರವಾಸಿಗಳ ಪ್ರವಾಹವೇ ಪ್ರವಾಹ! ನಾನು ಮತ್ತು ನನ್ನ ಇಬ್ಬರು ಆತ್ಮೀಯ ಮಿತ್ರರು ಸುರೇಶ್ ಮತ್ತು ದಯಾನಂದ್ ಇಷ್ಟಪಟ್ಟ ’ಆಶಿರ್ವಾದ್ ಹೋಟಲ್ - ಮೇನಕಾ ಬಾರ್’ ಅದೊಂದು ಶನಿವಾರ ರಾತ್ರಿ 8:00 ಘಂಟೆಗೇ ತುಂಬಿ ತುಳುಕುತ್ತಿತ್ತು.  ದಿನಾ ಕನ್ನಡ ಚಿತ್ರದ ಹಾಡುಗಳನ್ನು ಪದೇ ಪದೇ ಕೇಳಿ ಬೇಸತ್ತ ನಮಗೆ ರೋಸಿ ಹೋಗಿ, ನಾನು ನನ್ನ ಎರಡು ಇಂಗ್ಲಿಷ್ ಹಾಡಿನ ಕ್ಯಾಸೆಟ್‍ಗಳನ್ನು ಮ್ಯಾನೇಜರ್ ಕೈಲಿ ಕೊಟ್ಟೆ.

ನಮಗಂತೂ ಮಾಮೂಲಿ ಗಿರಾಕಿಗಳು ಎಂದು ಬಾರ್ ಕೌಂಟರ್ ಮೂಲೆಯಲ್ಲಿ ಜಾಗ ಕಾದಿರಿಸಿದ ಮ್ಯಾನೇಜರ್ ಶ್ರೀನಿವಾಸ್ ಕನ್ನಡ ಹಾಡು ನಿಲ್ಲಿಸಿ ನನ್ನ ಇಂಗ್ಲಿಷ್ ಹಾಡುಗಳ ಕ್ಯಾಸೆಟ್ ಹಾಕಿ ದೊಡ್ಡ ಧ್ವನಿಯಲ್ಲಿ ’ಡೋನಾ ಸಮ್ಮರ್’ ಹಾಡು ನುಡಿಸಿದ!

ಕೂಡಲೇ ನನ್ನ ಬಲಕ್ಕೆ ಕೂತ ಆಸಾಮಿ ತಟ್ಟನೆ ಎದ್ದು ನಿಂತು ಜೋರಾಗಿ ಕೂಗಿದ "ಐ ವಾಂಟ್ ಕನ್ನಡಾ ಸಾಂಗ್ಸ್! ಐ ವಾಂಟ್ ಕನ್ನಡಾ...!"

"ಅಬೇ ಚುಪ್ ಬೈಟ್ ಬೇ! ಕೌನ್ ಸುನೇಗಾ ತೇರಾ ಕನ್ನಡಾ!" ಮಧ್ಯದ ಟೇಬಲ್ ನಲ್ಲಿ ಕುಳಿತ ಇಬ್ಬರು ಉತ್ತರ ಭಾರತೀಯರು ಗದರಿಸಿದರು!

ನಮ್ಮ ಕನ್ನಡಪ್ರಿಯ ಮಹಾರಾಯ ಅದಾಗಲೇ ಐದನೇ ಪೆಗ್ ಗುಳುಂಕರಿಸಿ ಸರಿಯಾಗಿ ನಿಲ್ಲಲೂ ಮಾತಾಡಲೂ ಆಗದೇ ಮತ್ತೊಮ್ಮೆ ಕ್ಷೀಣ ಸ್ವರದಲ್ಲಿ ಬಡಬಡಿಸಿದ "ಶಟ್ ಅಪ್! ಐ ವಾಂಟ್ ಕನ್ನಡಾ ಮೀನ್ಸ್ ಅರ್ಥಾಗಲ್ವಾ ಅವ್ನಿಗೇ.... ಬೋಸುಡಿ ನನ್ ಮಗ್ನಿಗೇ! ಸುಮ್ಕಿರೋ ಲೋಫರ್ ನನ್ ಮಗ್ನೇ! ಐ ವಾಂಟ್ ಕನ್ನಡಾ..... ಅಣ್ಣಾ... ಶ್ರೀನಿವಾಸಾ.... ಹಾಕಲೋ ಕನ್ನಡಾ ಹಾಡು!"

ನಾರ್ತ್ ಇಂಡಿಯನ್ಸ್ ಜೋರಾಗಿ ಅರಚಿದ್ರು "ಬಾಸ್.... ಲೆಟ್ ಇಟ್ ಪ್ಲೇ. ಡೋಂಟ್ ಲಿಸನ್ ಟು ದೇಟ್ ಈಡಿಯಟ್!"

"ಥ್ಯಾಂಕ್ ಯು ಸರ್. ವೆರಿ ಗುಡ್ ಸೋಂಗ್ಸ್! ಬಿಕೋಸ್ ಓಫ್ ಯೂ, ವೀ ಆರ್ ಸೇವ್ಡ್ ಫ್ರೋಮ್ ಬೋರಿಂಗ್ ಕನ್ನಡಾ ಸೊಂಗ್ಸ್!" ಎಂದು ನನಗೂ ಅಭಿನಂದನೆ ಸಲ್ಲಿಸಿದರು!

ನಮ್ಮ ಪಕ್ಕ ಕುಳಿತ ಆಸಾಮಿ ಹೂಂಕಾರ ಠೇಂಕಾರ ಹಾಕುತ್ತಾ ಬಾಯೊಳಗೇ "ಕನ್ನಡಾ ಕನ್ನಡಾ...." ಎಂದು ಮಣಮಣಿಸುತಿದ್ದ!

ಯಾವುದೋ ದೊಡ್ದ ಕಾಲೇಜ್ ಪ್ರೊಫೆಸರ್ ಉದಯವರ್ಮ ಅಂತೆ. ದಿನಾ ಮೂಗಿನ ವರೇಗೆ ಏರಿಸಿ ನಡೆಯಲೂ ಕಷ್ಟಪಟ್ಟು ಇಬ್ಬರು ಹೊತ್ತುಕೊಂಡು ಹೋಗಿ ಆಟೋರಿಕ್ಶಾದಲ್ಲಿ ಕುಳ್ಳಿರಿಸಿ ಬರುವುದು ಮಾಮೂಲಿ ಕಥೆಯಂತೆ... ಹಾಗಂದ ಶ್ರೀನಿವಾಸ್!

ಹಾಗೇ ನಾನು ಮೆಲ್ಲನೆ ಶ್ರೀನಿವಾಸ್ ಬಳಿ ನಡೆದು ಹೇಳಿದೆ "ಆಣ್ಣಾ....  ಶ್ರೀನಿವಾಸಾ.... ಸಧ್ಯಕ್ಕೆ ಒಂದು ಕನ್ನಡ ಹಾಡು ಹಾಕಪ್ಪಾ... ಅವ್ನಿಗೆ ಸಮಾಧಾನಾ ಆಗ್ಲಿ. ಆ ಮೇಲೆ ತಿರ್ಗಾ ನನ್  ಕ್ಯಾಸೆಟ್ ಹಾಕುವಿಯಂತೆ!"

’ನೂರೀ’ ಫಿಲಮ್ ಹೀರೋ ತರಹ ಕಾಣ್ಬೇಕೆಂದು ಸ್ವಲ್ಪ ದಿನ ಮುಂಚಿತವಾಗಿ ಶೇರ್ವಾನಿ ಸೂಟ್ ಹೊಲಿಸಿ ಮೆರೆಯುತ್ತಿದ್ದ 95 ಕೇಜಿ ತೂಕದ ಟೊಣಪ ಶ್ರೀನಿವಾಸ್ ಮೀಸೆ ತಿರುವುತ್ತ ಅಂದ, "ಡೆಲಿಕೇಟ್ ಸಿಚುವೇಶನ್ ಗುರು! ಎಲ್ಲಾದ್ರೂ ನಿನ್  ಕ್ಯಾಸೆಟ್ ನಿಲ್ಸಿ ಕನ್ನಡಾ ಹಾಡು ಹಾಕಿದ್ರೆ.... ಆ ನಾರ್ತ್ ಇಂಡಿಯನ್ಸ್ ಅಂತೂ ನನ್ನನ್ನಾ ಸೀಳಿ ಕಬಾಬ್ ಮಾಡಿ ಬಿಡ್ತಾರಷ್ಟೆ!"

ನನಗಂತೂ ನುಂಗಲಾರದ ತುತ್ತು! ’ಇತ್ತ ಪುಲಿ ಅತ್ತ ದರಿ’ ಎಂಬಂತಾಯಿತು ಪರಿಸ್ಥಿತಿ. ನಮಗೂ ನನ್ನ ಹಾಡುಗಳನ್ನೇ ಕೇಳಬೇಕೆಂಬ ಹಂಬಲ. ನಾರ್ತ್ ಇಂಡಿಯನ್ಸ್ ನಮ್ಮ ಕಡೆ ಇದ್ದರೂ ಅವರನ್ನು ನಾವಾಗಿ ಸಪೋರ್ಟ್ ಮಾಡೋ ಹಾಗಿಲ್ಲ!

ಫಕ್ಕನೆ ಒಂದು ಐಡಿಯಾ ಫ್ಲೇಶ್ ಆಗಿ, ನಾನು ಪಕ್ಕದವನ ಹೆಗಲಿನ ಮೇಲೆ ಕೈ ಇಟ್ಟು, ಕೂತ್‍ಕೊಂಡು ತಲೆ ಎತ್ತಲು ಕಷ್ಟ ಪಟ್ಟರೂ, ಕೆಂಗಣ್ಣುಗಳಿಂದ ಅತ್ತಿತ್ತ ನೋಡುತ್ತಿದ್ದ ಅವನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿ ಮೆಲ್ಲಗೆ ಹೇಳಿದೆ "ನೋಡಿ ಸ್ವಾಮಿ, ನಿಮಗೆ ಕನ್ನಡ ಹಾಡು ಕೇಳಲು ಇಷ್ಟ ತಾನೇ! ಅದನ್ನು ಸ್ಪಷ್ಟವಾಗಿ, ನನ್ಗೆ ಕನ್ನಡ ಹಾಡು ಬೇಕು ಎಂದು ಹೇಳೋದು ಬಿಟ್ಟು ಇಂಗ್ಲಿಷ್‍ನಲ್ಲಿ ಐ ವಾಂಟ್ ಕನ್ನಡಾ ಸಾಂಗ್ಸ್ ಅಂದ್ರೆ ಕೇಳ್ತಾರಾ ಯಾರಾದ್ರೂ! ನಿಮ್ಗೆ ತಲೆ ಗಿಲೆ ಸರೀಗಿದೆಯೇನ್ರೀ?"

ಅವನು ಒಂದು ಕ್ಷಣ ಬೆಕ್ಕಸ ಬೆರಗಾಗಿ ನನ್ನನ್ನೇ ದೃಷ್ಟಿಸಿ ನೋಡಿ ಗೋಳೋ ಎಂದು ಅಳುತ್ತಾ ಅಂದ, "ಕ್ಷಮಿಸಿ ಸಾರ್....ತಪ್ಪು ಮಾಡಿದೆ! ತಮ್ಮ ಕಾಲಿಗೆ ಬೀಳ್ತೀನಿ ಸಾರ್! ಬೇಜಾರ್ ಮಾಡ್ಕೋಬೇಡಿ ಸಾರ್! ತಾವು ಮಹಾಜ್ಞಾನಿಗಳು! ನನ್ನ ಕಣ್ಣು ತೆರೆಸಿದ ಅಧ್ಬುತ ವ್ಯಕ್ತಿ ಸಾರ್ ನೀವು! ಇಷ್ಟೊಂದು ಮೂರ್ಖನಂತೆ ನಾನು ’ಐ ವಾಂಟ್ ಕನ್ನಡಾ” ಎಂದು ಬಡಬಡಿಸ್ತಿದೀನಲ್ಲಾ.... ಎಕ್ಕಡಾ ತಕ್ಕೊಂಡು ಹೊಡೀರಿ ಸಾರ್ ನಂಗೆ! ತಪ್ಪು ಮಾಡಿದೆ ಸಾರ್... ತಪ್ಪು ಮಾಡಿದೆ! ಈವಾಗ ನೀವು ಏನಂದ್ರೂ ಕೇಳ್ತೀನಿ ಸಾರ್ ನಾನು!".

ನಾನಂದೆ "ನೋಡಿ ಸಾರ್, ಒಂದು ಸಣ್ಣ ತಪ್ಪು ಮಾಡಿದ್ರಿ. ಅದ್ಕೇ ಯಾರೂ ನಿಮ್ಮನ್ನ ಗಣನೆಗೆ ತಕ್ಕೊಳ್ಳಿಲ್ಲಾ. ಇನ್ನಾದ್ರೂ ಕನ್ನಡ ಭಾಷೆಯ ಮೇಲೆ ಅಭಿಮಾನ ಇಟ್ಕೊಂಡು ಶುದ್ಧ ಕನ್ನಡದಲ್ಲೇ ಮಾತನಾಡಿ. ಆವಾಗ ನಿಮಗೆ ಮರ್ಯಾದೆನೂ ಸಿಗುತ್ತೆ, ನಿಮ್ಮ ಮಾತೂ ನಡಿಯುತ್ತೆ!"

ಮುಂದಿನ ಒಂದು ಘಂಟೆ ಇಂಗ್ಲಿಷ್ ಹಾಡುಗಳನ್ನು ಕೇಳಿ ಆನಂದಿಸಿದೆವು ನಾವು. ಕುಡಿದ ಅಮಲಿನಲ್ಲಿ ತೊದಲುತ್ತಾ ಮಾಲುತ್ತಾ ಇಬ್ಬರು ಹುಡುಗರ ಸಪೋರ್ಟ್‍ನಿಂದ ಹೊರ ನಡೆದ ಗ್ರಾಚಾರ್ಯ... ಅಲ್ಲ ಕ್ಷಮಿಸಿ ಪ್ರಾಚಾರ್ಯ ಉದಯವರ್ಮನನ್ನು ನೋಡಿ ಮುಖ ಮುಖ ನೋಡಿ ಹೊಟ್ಟೆ ತುಂಬಾ ನಕ್ಕೆವು!  ಕೊನೆಗೂ ಆತನಿಗೆ ಇಂಗ್ಲಿಷ್ ಹಾಡುಗಳ ಕ್ಯಾಸೆಟ್ ನನ್ನದೆಂದು ಗೊತ್ತೇ ಆಗಲಿಲ್ಲ!

Monday, October 12, 2015

ಮಹಾಲಯ, ಪಿತೃಪಕ್ಷ ಮತ್ತು ಹಸಿ ಶುಂಠಿ

Pic source:   www.pixabay.com
ತಲೆ ಬರಹ ನೋಡಿ,  "ಮಹಾಲಯಕ್ಕೂ, ಪಿತೃಪಕ್ಷಕ್ಕೂ, ಹಸಿ ಶುಂಠಿಗೂ ಅದೆತ್ತಣ ಸಂಬಂಧವೈಯ್ಯಾ?" ಎಂದು ಯೋಚಿಸಿ ತಲೆ ಸ್ವಲ್ಪ ಗಿರ್ರೆನ್ನಬಹುದು. ಆದರೆ ಮಹಾಲಯ, ಪಿತೃಪಕ್ಷ ಮತ್ತು ಅವಲಕ್ಕಿ ತಿನ್ನೋಣ, ಇವು ಮೂರು ನಮ್ಮ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದಲ್ಲಿ ಒಂದರೊಂದಿಗೊಂದು ಬೆಸೆದು, ಆ ಆಚರಣೆಗಳು ಅನಾದಿ ಕಾಲದಿಂದ ಆಸ್ತಿಕರ ದೃಷ್ಟಿಯಲ್ಲಿ ಅಪ್ಯಾಯಮಾನವಾಗಿವೆ. ಹಸಿಶುಂಠಿ ಯಾಕೆ ಇಲ್ಲಿ ಸೇರಿಕೊಂಡಿತು ಅನ್ನುವ ಬಗ್ಗೆ ಚಿಕ್ಕಂದಿನಲ್ಲಿ ನಡೆದ ವಿಷಯವನ್ನು ಹೇಳಿದರೆ ಆಗದೇ?

ಸರಿ, ಓದಿ.

ಮಹಾಲಯ, ಪಿತೃಪಕ್ಷಾಚರಣೆಗಳು ಗೊತ್ತಿಲ್ಲದ ನನಗೆ ಚಿಕ್ಕಂದಿನಲ್ಲಿ ಅವಲಕ್ಕಿ ತಿನ್ನುವುದರಲ್ಲಿ ಆಸಕ್ತಿ ತುಸು ಜಾಸ್ತಿ. ಯಾಕಂದರೆ ಕಂಠಪೂರ್ತಿ ತಿಂಡಿ ತಿಂದ ಅನುಭವ ಸಿಗಲು ಅವಲಕ್ಕಿಯಂತಹ ಉಪಹಾರ ಬೇರೊಂದಿಲ್ಲ. ನಡೆದಾಡಿ ಊರಿಡೀ ಸುತ್ತುವ, ಆಟವಾಡಿ ದಣಿದು ಬಳಲಿ ಹಸಿವ ಜೀವಕ್ಕೆ ಬೆಲ್ಲ, ತೆಂಗಿನ ತುರಿಯೊಂದಿಗೆ ಚಿಟಿಕೆ ಏಲಕ್ಕಿ ಪುಡಿ ಸೇರಿಸಿ ಅವಲಕ್ಕಿಯೊಂದಿಗೆ ಬೆರೆಸಿ ತಿನ್ನಲು ಅತೀವ ಆನಂದ. 'ಸಿಹಿ' ಎಂದರೆ 'ಅವಲಕ್ಕಿ' ಅನ್ನುವುದು ಗೌಡ ಸಾರಸ್ವತ ಬ್ರಾಹ್ಮಣ ಕುಟುಂಬಗಳಲ್ಲಿ ಸಾಮಾನ್ಯ, ಆ ದಿನಗಳಲ್ಲಿ!

ನಮ್ಮ ನೆರೆಕರೆಯ ವಾಸುದೇವ ಪೈಗಳ ಮಕ್ಕಳು, ಮಿತ್ರರಾದ ವೇಣುಗೋಪಾಲ, ವೆಂಕಟೇಶ ಮತ್ತು ಅನಂತ ನಮ್ಮ ಮನೆಗೆ ಆಟವಾಡಲು ಬರುತ್ತಿದ್ದರು. ಹಾಗೇ  ಅವರ ಮನೆಗೆ ನಾವೂ ಆಡಲು ಹೋಗುತ್ತಿದ್ದೆವು. ಆ ಸಂಬಂಧದಿಂದಾಗಿ ನಮ್ಮ ಕುಟುಂಬಕ್ಕೆ ಅವರ ಕುಟುಂಬ ಸಮೀಪವಾಗಿ, ಮಹಾಲಯದ ಪಿತೃಪಕ್ಷದಲ್ಲಿ ಅವರ ಹಿರಿಯರ ಪ್ರೇತಾತ್ಮವನ್ನು ಸಂತುಷ್ಟಿಗೊಳಿಸಲು ಚಿಕ್ಕ ಮಕ್ಕಳನ್ನು ಮನೆಗೆ ಆಹ್ವಾನಿಸಿ ಸಿಹಿ ಅವಲಕ್ಕಿ ಹಾಗೂ ಇತರ ಭಕ್ಷ್ಯಗಳನ್ನು ಬೇಕೆನಿಸುವಷ್ಟು ತಿನಿಸಿ ಕಳಿಸುವ ಸಂಪ್ರದಾಯವನ್ನು, ಅಷ್ಟೇನೂ ಸ್ಥಿತಿವಂತರಲ್ಲದಿದ್ದರೂ ಅವರು ನಡೆಸಿಕೊಂಡು ಬಂದಿದ್ದರು.

ನಾನಂತೂ ತುದಿಗಾಲಲ್ಲಿ ಆ ದಿನದ ನಿರೀಕ್ಷೆ ಮಾಡಿ ಕಾದಿರುತ್ತಿದ್ದೆನು, ಬರೇ ಆ ತಿಂಡಿಗಾಗಿ ಮಾತ್ರವಲ್ಲ, ಪೈಗಳ ಮನೆಯಲ್ಲಿ ನನಗೆ ಸಿಗುತ್ತಿದ್ದ ಆದರ, ಮಮತೆಗಳಿಗಾಗಿಯೂ ಹೌದು! ಅವರ ಮಾತುಗಳಲ್ಲಿ ಕಪಟವಿರುತ್ತಿರಲಿಲ್ಲ. ನೇರವಾದ ನಡೆ ನುಡಿ ಹೊಂದಿದ್ದ ತಂದೆ, ತಾಯಿ ಮತ್ತು 6 ಮಂದಿ ಮಕ್ಕಳು ನನ್ನನ್ನು ತಮ್ಮ ಕುಟುಂಬದವನಂತೇ ಪ್ರೀತಿಸುತ್ತಿದ್ದರು. ಅವಲಕ್ಕಿ ತಿನ್ನುವ ದಿನ ಹತ್ತಿರ ಬಂದಂತೆ ಅನಂತ, ವೆಂಕಟೇಶ, ವಿಜಯಾ, ಶ್ಯಾಮಲ, ಶಾಲಿನಿ ಶಾಲೆಯಲ್ಲಿ,  ದಾರಿಯಲ್ಲಿ ಭೇಟಿಯಾದಾಗ, ಆಡುವಾಗ, ಪದೇ ಪದೇ ನನ್ನನ್ನು ನೆನಪಿಸಿ "ಖಂಡಿತ ಬರ್ತಿಯಲ್ಲ! ಮರಿಬೇಡಾ....!" ಎನ್ನುತ್ತಿದ್ದರು. ಎರಡು ದಿನ ಮುಂಚೆ ಅವರಮ್ಮ ನಮ್ಮಲ್ಲಿಗೆ ಬಂದು, ನಮ್ಮಮ್ಮನನ್ನು ಮುಖತಃ ಭೇಟಿಯಾಗಿ, ನಮ್ಮನ್ನು ಮಕ್ಕಳನ್ನು ಅವಲಕ್ಕಿ ತಿನ್ನುವ ಕಾರ್ಯಕ್ರಮಕ್ಕೆ ಕಳುಹಿಸಿ ಕೊಡಲು ವಿನಂತಿಸುತ್ತಿದ್ದರು.

ಯಾವತ್ತೂ ಬೆಳಿಗ್ಯೆ ಬೇಗ ಎದ್ದು ಅಭ್ಯಾಸವಿರದ ನನಗೆ, ಬೇಗ ಏಳಬೇಕೆಂಬ ಕಾಳಜಿಯಿಂದ ರಾತ್ರಿ ಸರಿಯಾಗಿ ನಿದ್ರೆ ಬಾರದೆಯೋ, ಅಥವಾ ಪೈಗಳ ಮನೆಯ ಸಮ್ಮಾನ ಊಹಿಸಿಯೋ ಗೊತ್ತಿಲ್ಲ, ಮಹಾಲಯದ ಆ ಒಂದು ದಿನ ಬೆಳಿಗ್ಯೆ ಆರು ಘಂಟೆಗೇ ಎಚ್ಚರವಾಗುತ್ತಿತ್ತು! ಎದ್ದು ಪ್ರಾತಃಕಾಲದ ವಿಧಿ ಮುಗಿಸಿ ಮಿಂದು ಚೊಕ್ಕವಾಗಿ ಚಡ್ಡಿ ಅಂಗಿ ತೊಟ್ಟು, ಅಚ್ಚುಕಟ್ಟಾಗಿ ಎಣ್ಣೆ  ಹಾಕಿ ತಲೆ ಬಾಚಿ, ಹೊರಟು, ಅಮ್ಮ ಮತ್ತು ಹಿರಿಯ ಸಹೋದರರ ಮುಂದೆ ಸಂಭಾವಿತನಂತೆ ಮೆಲ್ಲಮೆಲ್ಲಗೆ ಅಡಿಯಿಟ್ಟು ಕಂಪೌಂಡ್ ಗೇಟು ದಾಟಿದೊಡನೆಯೇ ದಾಪುಗಾಲಿಟ್ಟು ಧಾವಿಸಿ, ಒಂದು ಫರ್ಲಾಂಗ್ ದೂರವಿದ್ದ ಪೈಗಳ ಮನೆಯನ್ನು ಎರಡು ನಿಮಿಷದೊಳಗೆ ಸೇರುತ್ತಿದ್ದೆನು! ಅಣ್ಣ ರಾಧಾಕಾಂತ ನನ್ನ ಹಿಂದೆ ಬರುತ್ತಿದ್ದವ, "ಏಯ್! ಹಾಗೆ ಓಡಬೇಡ. ಸ್ವಲ್ಪ ಮೆಲ್ಲಗೆ ಹೋಗು. ಹೊಟ್ಟೆಗೆ ಹಾಕದವನಂತೆ  ತೋರಿಸಿಕೊಂಡು ಮನೆಯ ಮರ್ಯಾದೆ ತೆಗಿಬೇಡ. ಅನಂತನ ಮನೆಯವರು ದುರಾಸೆ ಎಂದು ತಿಳಿದುಕೊಂಡಾರು ಹೇಸಿಗೆ!" ಎಂದು ನನಗೆ ಜೋರು ಮಾಡುತ್ತಿದ್ದ!  ಅದ್ಯಾವುದನ್ನೂ ಲೆಕ್ಕಿಸೆದ ನಾನು ಓಡಿ ಮೊದಲು ಅವರ ಮನೆ ಸೇರಿ, ಜಗಲಿಯಲ್ಲಿ ಈಸಿ ಚೇಯರ್‍ನಲ್ಲಿ ವಿಶ್ರಮಿಸಿ ನವಭಾರತ ಪತ್ರಿಕೆ ಓದುತ್ತಿದ್ದ ಪೈಗಳ ಸಮೀಪ ಕುಳಿತುಕೊಳ್ಳುತ್ತಿದ್ದೆ.

ಅವರು ಸಪೂರ ಕಣ್ಣುಗಳೆಡೆಯಿಂದ ನನ್ನನ್ನು ದೃಷ್ಟಿಸಿ, ನಸು ನಕ್ಕು ಆತ್ಮೀಯತೆಯಿಂದ "ಹೇಗಿದ್ದಿಯಾ ಮಗೂ? ಒಬ್ಬನೇ ಬಂದಿಯಾ.... ಅಣ್ಣಂದಿರು ಬಂದಿದ್ದಾರೋ?" ಎಂದು ಮಾತನಾಡುವುದನ್ನು ಕೇಳಿ ತಲೆದೂಗಿ, ನನ್ನ ಮೊದ್ದು ಮಾತುಗಳಿಂದ ಉತ್ತರ ನೀಡಿ ಖುಷಿ ಪಟ್ಟುಕೊಳ್ಳುತ್ತಿದ್ದೆ. ಪೈಗಳು ಮಡದಿಯನ್ನು ಗಟ್ಟಿ ಸ್ವರದಿಂದ ಕರೆದು "ಹೌದಾ.....! ತಿಂಡಿ ತಯಾರುಂಟೋ? ನೊಡು ರಜನಿ ಬಂದಿದ್ದಾನೆ! ಅನಂತ, ವಿಜಯಾ, ಶ್ಯಾಮಲ, ಶಾಲಿನಿಯನ್ನು ಹೊರ ಬರಲು ಹೇಳು. ಮಕ್ಕಳು ಒಬ್ಬರೊಂದಿಗೊಬ್ಬರು ಮಾತನಾಡಿ ಆಡಿ ಖುಷಿಯಿಂದಿರಲಿ!" ಎನ್ನುತ್ತಿದ್ದರು. ಆಗ ಅಡುಗೆ ಕೋಣೆಯಿಂದ ಕೀರಲು ಸ್ವರ, "ಸ್ವಲ್ಪ ನಿಲ್ಲಿ ಅಂದ್ರೆ! ಐದು ನಿಮಿಷ ನಿಲ್ಲಿ. ಬಿಸಿ ಬಿಸಿ ಇಡ್ಲಿ ತಯಾರಾಗ್ತಾ ಉಂಟು. ಗಡಿಬಿಡಿ ಮಾಡಿದ್ರೆ....ಅರ್ಧ ಬೆಂದು ಪಿಚಿಪಿಚಿ. ಹಾಂ! ರಜನೀ...ಸ್ವಲ್ಪ ಕೂತುಕೋ ಮಗಾ...ಬಂದೆ, ಆಯ್ತಾ!"

ಕಾಯಲು ತಾಳ್ಮೆ ಇಲ್ಲದಿದ್ದರೂ ದೇಶಾವರಿ ನಗೆ ಬೀರಿ "ಚಿಂತಿಲ್ಲ ಚಿಂತಿಲ್ಲ" ಎನ್ನುತ್ತಿದ್ದೆ.

ಒಮ್ಮೆ, ಹೊಸದಾಗಿ ಬೆಂಗಳೂರಲ್ಲಿ ಕೆನರಾ ಬ್ಯಾಂಕ್‍ನಲ್ಲಿ  ಉದ್ಯೋಗಕ್ಕೆ ಸೇರಿ ಪಿತೃಪಕ್ಷಕ್ಕೆಂದೇ ಊರಿಗೆ ಬಂದ ವೆಂಕಟೇಶ ತನ್ನ ಹೊಸ 'ಹೆಚ್.ಎಂ.ವಿ. ಕ್ಯಾಲಿಪ್ಸೋ' ಗ್ರಾಮೋಫೋನ್ ನನಗೆ ತೋರಿಸಿ, 45 RPM ರೆಕಾರ್ಡ್ ಆಡಿಸಿ, ಲಿಟ್ಲ್ ರಿಚಾರ್ಡ್ ಕಿರುಚಾಡಿ ಕೂಗಿ ಹಾಡುವ 'ಲೂಸಿ' ಪೊಪ್ ಹಾಡನ್ನು ನುಡಿಸಿ ತೋರಿಸಿ, ತೋರು ಬೆರಳಿನಿಂದ ಫಕ್ಕನೇ ಗ್ರಾಮೋಫೋನ್‍ನ ಸೂಜಿಕೈಯನ್ನು ಚಾಣಕ್ಯತೆಯಿಂದ ಮೇಲೆ ಹಾರಿಸಿ, ಹಿಡಿದು ಅದರ ಉಯ್ಯಾಲೆಯಲ್ಲಿ ಮಲಗಿಸುವುದನ್ನು ಕಂಡು ಬೆರಗಾಗಿದ್ದೆ!

ಕೊನೆಗೂ ನೆಲದಲ್ಲಿ ಚಾಪೆ ಹಾಕಿಸಿ ನನ್ನನ್ನು, ನನ್ನ ಅಣ್ಣಂದಿರು ಕಮಲಾಕಾಂತ ಮತ್ತು ರಾಧಾಕಾಂತನನ್ನು ತಮ್ಮ ಮಕ್ಕಳೊಂದಿಗೆ ಕೂರಿಸಿ ನಮ್ಮ ಮುಂದೆ ಪ್ಲೇಟ್ ಇಟ್ಟು ಸಿಹಿ ಅವಲಕ್ಕಿ, ಅದಾಗಲೇ ಬೇಯಿಸಿ ಹಬೆಯಾಡುವ ಬಿಸಿ ಬಿಸಿ ಇಡ್ಲಿ ಬಡಿಸಿ, ನೀರು ಚಟ್ನಿ ಸುರಿದು "ತಿನ್ನಿ ಮಕ್ಕಳೇ, ತಿನ್ನಿ....ಹೊಟ್ಟೆ ತುಂಬಾ ತಿನ್ನಿ,. ದಾಕ್ಷಿಣ್ಯ ಮಾಡಬೇಡಿ..." ಎಂದು ಹೇಳಿ ನಮ್ಮ ಎದುರು ಕುಳಿತು ನಾವು ಗಬಗಬನೇ ತಿನ್ನುವುದನ್ನೇ ದೃಷ್ಟಿಸಿ ಸಂತೃಪ್ತಿಯ ನಸುನಗೆ ಬೀರುತ್ತಿದ್ದಳು ಆ ತಾಯಿ!

"ಇನ್ನೆರಡು ಸನ್ನಣ ತಿನ್ನು! ಎರಡೇ ಎರಡು ತಿಂದರೆ ಎಲ್ಲಿ ಸಾಕು? ನೀವು ಬೆಳೆಯುವ ಪ್ರಾಯದ ಮಕ್ಕಳು. ಗಟ್ಟಿ ತಿನ್ನಬೇಕು" ಎಂದು ಹೇಳುವಾಗ ನಾನು ಮತ್ತು ರಾಧಾಕಾಂತ ಮುಖ ಮುಖ ನೋಡಿ ಅಸಹಾಯಕರಾಗಿ "ಬೇಡ...ನಾವು ತಿನ್ನುವುದೇ ಇಷ್ಟು, ದಾಕ್ಷಿಣ್ಯ ಅಲ್ಲ, ಸಾಕು" ಎನ್ನುತ್ತಿದ್ದೆವು. ಕಾರಣ, ಅವರು ಚಟ್ನಿಗೆ ನಮಗಾಗದ ಒಂದು ವಸ್ತು ಸೇರಿಸಿ ಅರೆಯುತ್ತಿದ್ದರು.

ಅದು ಹಸಿಶುಂಠಿ!

ಹೌದು. ನಮ್ಮಮ್ಮ ಯಾವತ್ತೂ ಚಟ್ನಿಗೆ ಹಸಿಶುಂಠಿ ಬೆರೆಸುತ್ತಿರಲಿಲ್ಲ. ನಮಗೆ ಅಂತಹ ಚಟ್ನಿ ತಿಂದು ಅಭ್ಯಾಸವಿಲ್ಲ ಮಾತ್ರವಲ್ಲ, ಬಿಸಿ ಬಿಸಿ ಸ್ಪಂಜಿನಂತೆ ಮೃದುವಾದ, ಅವರ ಭಾಷೆಯಲ್ಲಿ ಸನ್ನಣ, ಹಾಗೂ ನಮ್ಮ ಅರಿವಿನಲ್ಲಿ ಇಡ್ಲಿ ತಿನ್ನುವ ನಮ್ಮ ಹುಮ್ಮಸ್ಸು ಜರ್ರನೆ ಇಳಿದು ನಾವು ಒಂದು ತರಹ ಕಕ್ಕಾಬಿಕ್ಕಿಯಾಗುತ್ತಿದ್ದೆವು! ಪ್ರತೀ ವರುಷ ಆ ದಿನಕ್ಕೆ ಎದುರು ನೋಡುತ್ತಿದ್ದ ನನಗೆ ಒಂದು ವರ್ಷ ಅವರು ಹಸಿಶುಂಠಿ  ಹಾಕದೇ ಚಟ್ನಿ ಮಾಡುವರೋ ಎಂಬ ಆಸೆ, ನಿರೀಕ್ಷೆ.

ನಾನು ಬೆಳೆದು ಕಾಲೇಜು ಹಂತಕ್ಕೆ ತಲುಪಿ, ಮಹಾಲಯದ ಪಿತೃಪಕ್ಷದಲ್ಲಿ ನಡೆಯುವ ಅವಲಕ್ಕಿ ತಿನ್ನುವ ಕಾರ್ಯಕ್ರಮಕ್ಕೆ ಹೋಗುವುದನ್ನು ನಿಲ್ಲಿಸುವ ವರೆಗೂ ನನ್ನ ನಿರೀಕ್ಷೆ ಸತ್ಯವಾಗಲಿಲ್ಲ! ಅವರು ಚಟ್ನಿಗೆ ಹಸಿಶುಂಠಿ ಹಾಕುವುದು ತಪ್ಪಲಿಲ್ಲ. ವಾಸುದೇವ ಪೈಗಳ ಮನೆ ಮಂದಿಯ ಪ್ರೀತಿ, ಮಮತೆ, ಆದರಗಳಿಂದಲೇ ಹೊಟ್ಟೆ ತುಂಬಿಸಿಕೊಂಡು ಸಂತೃಪ್ತನಾಗುವುದನ್ನು ತಪ್ಪಿಸಿಕೊಳ್ಳಲಾಗಲಿಲ್ಲ.
-------------------------------------------------
ಕೊನೇಯ ಮಾತು:
ಇತ್ತೀಚೆಗೆ ಶಾಲಿನಿಯನ್ನು ಭೇಟಿಯಾಗಿದ್ದೆ. ಹಳೇ ನೆನಪುಗಳನ್ನು ಕೆದಕುವಾಗ ಅವರ ತವರು ಮನೆಯಲ್ಲಿ, ಮಹಾಲಯದಲ್ಲಿ ಅವಲಕ್ಕಿ ತಿನ್ನುವ ಕಾರ್ಯಕ್ರಮದ ಬಗ್ಗೆ ಉಲ್ಲೇಖ ಬಂದಿತ್ತು, ಆದರೆ ಶುಂಠಿ ಬೆರೆಸಿದ ಚಟ್ನಿ ಬಗ್ಗೆ ನಾನು ತುಟಿ ಪಿಟಕ್ಕೆನ್ನಲಿಲ್ಲ. ಇಂದು ಅವರು ಈ ಲೇಖನವನ್ನೋದಿ, ಅವರಮ್ಮ ಚಟ್ನಿಗೆ ಶುಂಠಿ ಬೆರೆಸಲು ಕಾರಣವೇನೆಂದು ತಮ್ಮ ಪುತ್ರಿ ಸಹನಾ ಮುಖಾಂತರ ತಿಳಿಸಿದರು. ಪಿತೃ ಪಕ್ಷದಲ್ಲಿ ಬೆಲ್ಲ ಮತ್ತು ಶುಂಠಿ, ಈ ಎರಡು ಸಾಮಗ್ರಿಗಳು ಅಡುಗೆಯಲ್ಲಿ ಪ್ರಮುಖವಾಗಿ ಬಳಸಬೇಕೆಂಬ ಶಾಸ್ತ್ರವಿರುವುದರಿಂದ ಚಟ್ನಿಗೆ ಶುಂಠಿ ಬೆರೆಸುತ್ತಿದ್ದರೆಂಬ ಸತ್ಯ ನನಗಿಂದು ಮನವರಿಕೆಯಾಯಿತು!

Monday, February 2, 2015

ಒಂದು ನಿಮಿಷ ನಿಲ್ಲಿ!

Pic source: www.youtube.com
’ಒಂದು ನಿಮಿಷ ನಿಲ್ಲಿ’ ಎಂಬುದು ನಮ್ಮ ಕನ್ನಡನಾಡಿನ ದೈನಂದಿಕ ಜೀವನದ ಅವಿಭಾಜ್ಯ ಸಂದೇಶ. ಇದೊಂದು ಅಪ್ಪಣೆ, ಆಜ್ಞೆ ಅಥವಾ ಸೂಚನೆ ಅಲ್ಲದಿದ್ದರೂ ಅನಿರ್ವಾಹ ಪರಿಸ್ಥಿತಿಯಲ್ಲಿ, ಅವಸರದಲ್ಲಿದ್ದವರನ್ನು ಸಮಾಧಾನ ಪಡಿಸಿ ಸುಮ್ಮನೆ ನಿಲ್ಲಿಸುವ ಸಂದೇಶ ವಾಣಿಯಂತೂ ಹೌದು!

ಈ ಒಂದು ನಿಮಿಷದಲ್ಲಿ ಎಷ್ಟು ಕ್ಷಣಗಳು, ಎಷ್ಟು ನಿಮಿಷಗಳು, ಎಷ್ಟು ಘಂಟೆಗಳು, ಎಷ್ಟು ದಿನಗಳು, ವರುಷಗಳಿವೆಯೋ ಆಯಾಯ ಸಂದರ್ಭಕ್ಕನುಸಾರವಾಗಿ ನಾವು  ಅತ್ಯಂತ ಸಹನೆ, ತಾಳ್ಮೆಗಳೊಂದಿಗೆ ಅನಾಯಾಸವಾಗಿ ಕಳೆದು ನಮ್ಮ ಜೀವನವನ್ನು ಸಾರ್ಥಕಗೊಳಿಸುತ್ತೇವೆ!

1990ರ ದಶಕದಲ್ಲಿ ನಾನು ಬ್ಯಾಂಕ್ ಉದ್ಯೋಗಿಯಾಗಿದ್ದಾಗ ಒಂದು ಸೋಮವಾರ ಬೆಳಿಗ್ಯೆ ನಡೆದ ಸಂಗತಿ. ನಾನು ಕ್ಯಾಶಿಯರ್ ಆಗಿ ಪಾವತಿ ಗೂಡಿನಲ್ಲಿ(ಪೇಮೆಂಟ್ ಕೌಂಟರ್) ಇದ್ದೆ. ಸ್ವೀಕೃತಿ ಗೂಡಿನಲ್ಲಿದ್ದ ನನ್ನ ಸಹೋದ್ಯೋಗಿ, ಸುಂದರ ರಾವಣನ ದಾಯಾದಿ, ತನ್ನ ಸುಖವೇ ಪರರ ಸುಖವೆಂದು ನಂಬಿಕೊಂಡಿದ್ದವ, 11:15ರ ಹೊತ್ತಿಗೆ ಹಠಾತ್ ಗೂಡಿನ ಬಾಗಿಲು ಮುಚ್ಚಿ ಹೊರ ಬಂದು ಬ್ಯಾಂಕ್ ಪ್ರವೇಶ ದ್ವಾರವನ್ನೇ ದಿಟ್ಟಿಸುತ್ತ ನಿಂತನು! ಹನುಮಂತನ ಬಾಲದಂತೆ ಬೆಳೆದು ನಿಂತಿದ್ದ ಕ್ಯಾಶ್ ತುಂಬಿಸಲು ಬಂದ ಜನರ ಸಾಲು ಬೆಚ್ಚಿ ಬಿದ್ದು ಸನ್ನೆ ಮೂಲಕ ’ಕ್ಯಾಶ್ ಒಮ್ಮೆ ತಕ್ಕೊಳ್ಳಿ ಮ್ಹಾರಾಯರೇ’ ಎಂದು ಅವನಿಗೆ ಹೇಳಲು ಪ್ರಯತ್ನಿಸಿತು. ಅವನು ವಾರೆ ದೃಷ್ಟಿಯಿಂದಲೂ ಅತ್ತ ನೋಡದೇ ನಿರ್ಲಿಪ್ತನಾಗಿ ಹೇಳಿದನು,

"ಒಂದು ನಿಮಿಷ ನಿಲ್ಲಿ!"

ಆ ಒಂದು ನಿಮಿಷ ಬಿಟ್ಟು ಐದು, ಹತ್ತು, ಹದಿನೈದು ನಿಮಿಷ ಕಳೆದರೂ ಅವನು ಅಲ್ಲೇ ನಿಂತಿದ್ದ ಮತ್ತು ಜನರ ಸಾಲು ಇನ್ನೂ ಉದ್ದ ಬೆಳೆದು ಅದಾಗಲೇ 25-30 ಜನ ಸರತಿ ಸಾಲಿನಲ್ಲಿ ಆಕಳಿಸುತ್ತಾ, ಹಣದ ಚೀಲವನ್ನು ಯಾರಾದರೂ ಲಪಟಾಯಿಸಿಯಾರೇ ಎಂಬ ಭಯದಿಂದ ಕುಂಕುಳಲ್ಲಿ ಇನ್ನೂ ಭದ್ರವಾಗಿ ಅದುಮಿ ಹಿಡಿದು ಬೆರಗಾಗಿ ನೋಡುತ್ತಾ ಇದ್ದಾರೆ!

ಒಬ್ಬ ಧೈರ್ಯದಿಂದ ಮುಂದೆ ಬಂದು ಕೇಳಿದ "ಎಂಥ ಅವಸ್ಥೆ ಮ್ಹಾರ್ರೆ! ನಿಮ್ಮ ಒಂದು ನಿಮಿಷ ಎಂದು 15 ನಿಮಿಷ ಆಯ್ತು. ಬಾಗಿಲು ಎಂಥದು ನೋಡುದು ನೀವು? ಬೀಜಾಗ್ರಿ ಸರಿ ಮಾಡಲಿಕ್ಕೆ ಉಂಟೋ?"

ಕ್ಯಾಶಿಯರ್ ಮಹಾಶಯ: "ಸ್ವಲ್ಪ ನಿಲ್ಲಿ. ಒಂದು ನಿಮಿಷ ನಿಲ್ಲಿ. ಕಾಪಿ ಬರ್ತದೆ!"

ಪ್ರಶ್ನೆ ಕೇಳಿದವ ತುಸು ಉಲ್ಲಾಸದಿಂದ ಅಗಲವಾಗಿ ನಕ್ಕು ಸರತಿಯ ಸಾಲಿಗೆ ಮರಳಿದ. ಹೀಗೆ ಬಂದವರಿಗೆಲ್ಲಾ ಉಚಿತ ಕಾಫಿ ಸೇವೆ ಪ್ರಾರಂಭಿಸಿದ ಬಗ್ಗೆ ಆನಂದ ತುಂದಿಲನಾದಂತೆ ತೋರಿದವ, ಹಿಂದೆ ಮುಂದೆ ನಿಂತವರ ಕಿವಿಯಲ್ಲಿ ಏನೋ ಹೇಳಿ ಮುಗುಳ್ನಕ್ಕ. ಅವರೂ ಮುಖ ತುಂಬಾ ಹರುಷದ ಚಿಹ್ನೆ ತೋರಿಸಿ ಕ್ಯಾಶಿಯರ್ ಮಹಾಶಯನತ್ತ ನೋಡಿ "ಆಗಲಿ ಆಗಲಿ....ಒಂದಲ್ಲ ಹತ್ತು ನಿಮಿಷ ಹೋಗಲಿ...ಬಂದವರಿಗೆಲ್ಲಾ ಕಾಫಿ ಕುಡಿಸುವ ನಿಮ್ಮಂತಹವರು ದಿನಕ್ಕೆ ನೂರರಂತೆ  ಹುಟ್ಟಲಿ!" ಎಂದು ಹರಸಿದರು!

ಸರಿಯಾಗಿ 20 ನಿಮಿಷ ನಂತರ ಗಣೇಶ್ ಪ್ರಸಾದ್ ಹೋಟಲ್ ಹುಡುಗ ಒಂದು ಟ್ರೇ‍ನಲ್ಲಿ ತಿಂಡಿ ಪೊಟ್ಟಣಗಳು ಹಾಗೂ ಫ್ಲಾಸ್ಕ್ ನಲ್ಲಿ ಕಾಫಿ, ಚಹಾ ಹೊತ್ತುಕೊಂಡು ಬಂದು ಕೌಂಟರ್ ಹಿಂಭಾಗ ಇದ್ದ ಮೇಜೊಂದರ ಮೇಲೆ ಕುಕ್ಕಿದನು. ನಮ್ಮ ಕ್ಯಾಶಿಯರ್ ಮಹಾಶಯ ಮತ್ತು ಇನ್ನಿತರ 10-12 ಬ್ಯಾಂಕ್ ಸಿಬ್ಬಂದಿ ಕಾಗೆಗಳಂತೆ ಬುರ್ರನೆ ಹಾರಿ ಅವನ ಮೇಲೆ ಮುಗಿಬಿದ್ದರು!

ಕ್ಯಾಶಯರ್ ಮಹಾಶಯ ಮುಂದಿನ 10 ನಿಮಿಷಗಳು ಗೋಳಿಬಜೆ ಅಗಿದು ಕಾಫಿ ಸೇವಿಸುವ ಸುಖದಲ್ಲಿ ಕಳೆದು, ನಂತರ ಚೊಕ್ಕವಾಗಿ ಸಾಬೂನು ಹಾಕಿ ಕೈ ಮುಖ ತೊಳೆದು, ತಲೆಕೂದಲು ಬಾಚಿ, ಒಂದು ಬೀಡಿ ಸೇದಿ ಕ್ಯಾಶ್ ಕೌಂಟರ್‍ಗೆ ಮರಳುವಾಗಲೇ ಸಾಲಿನಲ್ಲಿ ನಿಂತಿದ್ದ ಹತಾಶ ವ್ಯಕ್ಟಿಗಳಿಗೆ ತಿಳಿದ ಎರಡು ಮುಖ್ಯ ವಿಚಾರಗಳು:

1. ಒಂದು ನಿಮಿಷದಲ್ಲಿ ಸಮಾನ್ಯವಾಗಿ 35-40 ನಿಮಿಷಗಳಿವೆ.
2.  "ಸ್ಕಲ್ಪ ನಿಲ್ಲಿ, ಕಾಪಿ ಬರುತ್ತದೆ" ಎಂಬುದು, ’ಕಾಫಿ ಬರುತ್ತದೆ ತನಗೆ, ಕಾದು ನಿಲ್ಲುವ ಕೆಲಸ ನಿನಗೆ’ ಎಂದರ್ಥ! 

Tuesday, January 13, 2015

ಹೀಗೊಂದು ಕೇಸರಿಭಾತ್ ಪ್ರಸಂಗ!

ಚಿತ್ರ ಕೃಪೆ: en.wikipedia.org 
ಎಂದೆಂದಿಗೂ ಮರೆಯಲಾಗದ ದಿನವದು!

1979 ಜನವರಿ 9ನೇ ತಾರೀಕು. ಹೊಸದಾಗಿ ಬ್ಯಾಂಕ್ ನೌಕರಿ ಸೇರಲು ಪ್ರಥಮ ಬಾರಿಗೆ ಮೈಸೂರಿನಿಂದ ಚಾಮರಾಜನಗರಕ್ಕೆ ಪ್ಯಾಸೆಂಜರ್ ರೈಲುಬಂಡಿಯಲ್ಲಿ ಪ್ರಯಾಣಿಸಿದ ನಾನು, 9:30ಕ್ಕೆ ಚಾಮರಾಜನಗರ ರೈಲು ನಿಲ್ದಾಣ ತಲುಪಿದೆ. ಅದಾಗಲೇ 3-4 ಬ್ಯಾಂಕ್ ನೌಕರರ ಪರಿಚಯವಾಗಿತ್ತು ಪ್ರಯಾಣಿಸುವಾಗ. ಸಂಪತ್ ಕೃಷ್ಣ ಮತ್ತು ಬಂಡೇರಾಯ ನನ್ನ ಜೊತೆ ಅಂಟಿಕೊಂಡು ರೈಲ್ವೇ ಸ್ಟೇಶನ್ ನಿಂದ ಬಜಾರ್ ಬೀದಿ ವರೆಗೆ ನನ್ನನ್ನು ಮುನ್ನಡೆಸಿಕೊಂಡು ಬಂದರು.

"ಟಿಫನ್ ಮಾಡೋಣಾ ಶೆಣೈಯವರೇ?" ಹೋಟೆಲ್ ಆನಂದ್ ಬಳಿ ತಲಪಿದಾಗ ಸಂಪತ್ ಕೃಷ್ಣ ಕೇಳಿದರು. ಹಸಿವೆಯಿಂದ ಕಂಗಾಲಾಗಿದ್ದ ನಾನು ಕೂಡಲೆ ಒಪ್ಪಿದೆ ಹಾಗೂ ನಾವು ಮೂವರು ಹೋಟೆಲ್ ಒಳಗಡೆ ನಡೆದೆವು.

ಸೆಗಣಿ, ಸುಣ್ಣ ಬಳಿದ ಮಣ್ಣಿನ ಗೋಡೆಗಳು, ಗ್ಲಾಸ್ ಹಂಚಿನೆಡೆಯಿಂದ ತೂರಿ ಬಂದ ಸೂರ್ಯನ ಕಿರಣಗಳು, ಹರಕು ಮುರುಕು ಮರದ ಬೆಂಚು ಟೇಬಲ್ ಗಳು, ಅಲ್ಯುಮೀನಿಯಂ ನೀರಿನ ಮಡಕೆ, ಶಿಲೆ ಕಲ್ಲಿನ ನೆಲ....ಅಲ್ಲದೇಪೀಸಾದ ವಾಲುವ ಗೋಪುರವನ್ನು ಹೋಲುವ, 20 ವರ್ಷ ಮಿಕ್ಕಿದ ಎಣ್ಣೆ ಪಸೆ ಹಿಡಿದ ಗಾಜಿನ ಬಾಗಿಲುಗಳು ಹಾಗೂ ಕಿಲುಬು ತಾಗಿದ ಹ್ಯಾಂಡಲ್ ಬೀಜಾಗ್ರಿ ಇದ್ದತೈಲ ಜನಿತ ತಿಂಡಿಶೇಖರಿಸುವ ಕಪಾಟು ಇವಿಷ್ಟು ನನಗೆ ಮೊದಲ ದೃಷ್ಟಿ ಬೀರುವಾಗ ಗೋಚರಕ್ಕೆ ಬಂದ, ಹೋಟೆಲ್ ಆನಂದ್ ಮೇಲ್ಮೈ ಲಕ್ಷಣಗಳು!

ಬಿಳಿ ಧೋತಿ ಉಟ್ಟು ಬಿಳಿ ಶರ್ಟ್ ಹಾಕಿ, ಕೆಂಪು ಪಟ್ಟೆಯ ಬಿಳಿ ಖದ್ದರ್ ಅಂಗವಸ್ತ್ರವನ್ನು ಹೆಗಲ ಮೇಲೆ ಹಾಕಿ, ಕ್ಯಾಶ್ ಕೌಂಟರಿನಲ್ಲಿ ಕುಳಿತು ಕಣ್ಣು ಸಪೂರ ಮಾಡಿ ನನ್ನನ್ನೇ ದೃಷ್ಟಿಸುತ್ತಿರುವ ಸುಮಾರು ಐವತ್ತೈದು ವರ್ಷ ಪ್ರಾಯದ ವ್ಯಕ್ತಿಯೊಬ್ಬರಿಗೆ ನನ್ನ ಪರಿಚಯ ಮಾಡಿ ಕೊಡುತ್ತಾ ಸಂಪತ್ ಕೃಷ್ಣ "ಇವರು ಶೆಣೈ ಅಂತ...ನಿಮ್ಮ ಮಂಗ್ಳೂರು ಕಡೆಯವ್ರು. ಹೊಸದಾಗಿ ಸೇರ್ತಾ ಇದಾರೆ ಬ್ಯಾಂಕ್ ಗೆ. ಇನ್ನು ದಿವ್ಸಾ ಬೆಳಿಗ್ಯೆ ನಿಮ್ ಹೋಟಲ್ ನಲ್ಲಿ ಇವ್ರ ಮೊಕ್ಕಾಂ! ಶೆಣೈ....ಇವ್ರು ಹೋಟಲ್ ಮಾಲಿಕ್ರು ರಾಮಕೃಷ್ಣ ರಾಯರು. ಇವ್ರು ಉಡುಪಿ ಕಡೆಯವ್ರು."

ನಾನಂದೆ "ನಮಸ್ಕಾರ. ನಾನು ಮಂಗಳೂರಿಂದ ಬಂದದ್ದು. ಇವತ್ತು ಕೆಲಸಕ್ಕೆ ಸೇರ್ಲಿಕ್ಕೆ".

ಆಗ ಹೋಟೆಲ್ ಮಾಲಕರ ಇಬ್ಬರು ಮಗಂದಿರು ಎಲ್ಲಿಂದಲೋ ಪ್ರತ್ಯಕ್ಷರಾಗಿ ಮೂವತ್ತೆರಡು ಕಿಸಿದು ನಕ್ಕು, ಕಿರಿಯ ಮಗ ಹೇಳಿದ್ರು "ಶೆಣೈಯವರೇ, ಇದು ನಮ್ಮಣ್ಣ ಮುರಲಿ ಮತ್ತು ನಾನು ಆನಂದ್. ನಮ್ಮ ಮನೆ ಮಾತು ತುಳು ಆದ್ರೂ ನಮಗೆ ತುಳು ಅಷ್ಟು ಚೆನ್ನಾಗಿ ಬರಲ್ಲಾ. ಇಲ್ಲೇ ಹುಟ್ಟಿ ಬೆಳೆದವರು ನೋಡಿ!"

ನಾನು ಪರವಾಗಿಲ್ಲ, ನನಗೆ ಕನ್ನಡ ಚೆನ್ನಾಗಿ ಬರುತ್ತೆ ಎಂದು ಅವರನ್ನು ಸಮಾಧಾನ ಪಡಿಸಿದೆ. ಮತ್ತೆ ತಿನ್ನಲು ಏನು ತಗೋತೀರಾ ಎಂದು ಕೇಳಲು.... "ಬಿಸಿ ಬಿಸಿ ಏನಾದ್ರೂ ಕೊಡಿ. ಈಗ ಜನವರಿ ಚಳಿ... ನನ್ಗೆ ಸ್ವಲ್ಪ ಶೀತ ಜ್ವರ ಬೇರೆ ಉಂಟು!" ಎಂದೆ.

ಆನಂದ್- "ಬಿಸಿ ಬಿಸಿ ಕೇಸ್ರಿ ಭಾತ್ ಮತ್ತು ಇಡ್ಲಿ ಸಾಂಬಾರ್ ಕೊಡೋಣಾ. ಸೆಟ್ ದೋಸೆ ಇದೆ. ದೋಸೆ ರೆಡಿ ಮಾಡ್ಲಿಕ್ಕೆ ಸ್ವಲ್ಪ ಹೊತ್ತಾಗುತ್ತೆ!"

ಆಚೆ ಕ್ಯಾಶ್ ಕೌಂಟರ್ ನಿಂದ ಜೋರಾಗಿ ಅರಚಿದರು ರಾಮಕೃಷ್ಣ ರಾಯರು "....ಯಾರೋ ಅಲ್ಲಿ....ಕೇಸರಿ ಭಾತ್ ಗೆ ಸ್ವಲ್ಪ ತುಪ್ಪ ಹಾಕೋ!"

ಮುಸಿ ಮುಸಿ ನಗುತ್ತಾ ಸಂಪತ್ ಕೃಷ್ಣ ಹಾಗೂ ಬಂಡೇರಾಯ ಪಿಸುಗುಟ್ಟಿದರು "ತುಪ್ಪ ಅಂದ್ರೆ ಬೆಣ್ಣೆ ಕಾಸಿ ಮಾಡಿದ ತುಪ್ಪ ಅಂದ್ಕೋಬೇಡಿ. ಡಾಲ್ಡಾ ಸುರೀತಾರೆ! ನೀವು ಮೊದಲ್ನೇ ಸಾರಿ ಬರೋದ್ರಿಂದ ಸ್ವಲ್ಪ ಸ್ಪೆಶಲ್ ಟ್ರೀಟ್ಮೆಂಟ್. ನಾಳೆ ಏನಾದ್ರೂ ಕೇಸರಿಭಾತ್ ತಕ್ಕೋಂಡ್ರಾ....ತಣ್ಣಗಾದ ಹೆಂಚಿನ್ ತುಂಡು ತಿಂದಂಗಾಯ್ತದೆ ಅಷ್ಟೇ!"

ಅವರು ಅಂದ ಹಾಗೇ, ಕ್ಷಾಮ ಡಾಮರಗಳಿಂದ ಪೀಡಿತ ಉತ್ತರ ಕರ್ನಾಟಕದ ಪ್ರದೇಶ ಗುಳೇದಗುಡದಲ್ಲಿನ ಗದ್ದೆಯ ಒಣ ಮಣ್ಣಿನ ಗಟ್ಟಿಗಳ ಮೇಲೆ, ಬೆಂಗಳೂರು ಬೊಂಬಾಯಿ ವಿಮಾನ ಹಾರುತ್ತಾ ಹಾದು ಹೋಗುವಾಗ ಬಿದ್ದ ನಾಲ್ಕು ಹನಿ ನೀರು ಸುರಿದಂತೆ ಕಾಣಿಸುವ, ಚಂದ್ರಲೋಕದ ಮಣ್ಣಿನ ಬಣ್ಣವನ್ನು ಹೋಲುವ ಏನೋ ವಸ್ತುವನ್ನು, ಅಲ್ಯುಮೀನಿಯಂ ಪ್ಲೇಟ್ ಮೆಲೆ ಪತ್ರಾವಳಿಯ ಎಲೆಯನ್ನು ಇಟ್ಟು ಅದರ ಮೇಲೆ ಪೇರಿಸಿಟ್ಟು, ಕಪ್ಪುಗಟ್ಟಿದ ಮೊಂಡು ಅಲ್ಯುಮೀನಿಯಂ ಚಮಚವನ್ನು ನೆಟ್ಟು ತಂದಿಟ್ಟರು, ಆನಂದ್!

ನಿರಾಶೆಯ ಭಾವದಿಂದ ನನ್ನ ಮುಖವು ಗ್ರೇಟ್ ಡೇನ್ ನಾಯಿಯ ಗಲ್ಲದಂತೆ ಜೋತು ಬಿದ್ದರೂ ಕೈಕೊಟ್ಟು ನೆಟ್ಟಗೆ ನಿಲ್ಲಿಸುವ ಪ್ರಯತ್ನ ಮಾಡುತ್ತಾ, ಆಗಾಗ ಸಂಪತ್ ಕೃಷ್ಣ, ಬಂಡೇರಾಯ, ಮುರಲಿ ಹಾಗೂ ಆನಂದ ಸಹಿತ ರಾಮಕೃಷ್ಣ ರಾಯರು ಮತ್ತವರ ಟೇಬಲ್ ವರೆಸುವ ಮಾಣಿಯ, ಕುದುರೆಗಿಂತ ಸ್ವಲ್ಪ ಕಿರಿದಾದ ಮೂತಿಯನ್ನು ನೋಡುತ್ತಾ, ಉಗುಳು ನುಂಗುತ್ತಾ, ಅಳು ಬಂದರೂ ತಡೆದುಕೊಂಡು, ವಿಷಾದದ ಛಾಯೆಯುಳ್ಳ ಕೃತಕ ಮುಗುಳು ನಗೆ ನಗುತ್ತಾ, ಕೇಸರಿಭಾತ್ ಎಂಬ ಹೆಸರಿನ ಅದ್ಭುತ ಲೋಹ, ಇಂಜಿನ್ ಆಯಿಲ್ ಮಿಶ್ರಿತ ಹಂಚಿನ ಕಾರಖಾನೆಯ ಮಣ್ಣನ್ನು ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದಂತೆ ಮೊಂಡು ಅಲ್ಯುಮೀನಿಯಂ ಚಮಚೆಯ ಸಹಾಯದಿಂದ ತುರುಕಿ, ಗುಳುಂಕರಿಸಿ ನೀರು ಕುಡಿದೆ!


Monday, September 29, 2014

ಕರಡಿ...ಕರಡಿ

Pic courtesy: http://laxmipras.blogspot.in/
ಅರುವತ್ತರ ದಶಕದಲ್ಲಿ ನಾವು ವಾಸವಿದ್ದ ಬಳ್ಳಾಲ್‍ಬಾಗ್‍ನ ’ವೀರ ಭವನ’ ಕಂಪೌಡ್‍ನಲ್ಲಿದ್ದ ಬಾಡಿಗೆ ಮನೆಯ ಮಾಳಿಗೆ ಕೋಣೆಯ ಎರಡು ಕಿಟಿಕಿಗಳು ಮಹಾತ್ಮಾ ಗಾಂಧಿ ರಸ್ತೆಯ ಕಡೆಗಿದ್ದು, ಆಗಿನ ಪಾಲ್ಕೆ ಕೃಷ್ಣಾಚಾರ್ ಹಾಲ್‍ನ(ಈಗಿನ ಕಲ್ಯಾಣ್ ಜುವೆಲ್ಲರ್ಸ್) ಉತ್ತರ ದಕ್ಷಿಣಕ್ಕೆ ಚಾಚಿಕೊಂಡಿರುವ ರಸ್ತೆಯುದ್ದಕ್ಕೂ ಹಾದು ಹೋಗುವ ಜನರು, ವಾಹನಗಳು ಸ್ಪಷ್ಟವಾಗಿ ಕಾಣಿಸುತ್ತಿದ್ದವು.

ದಸರಾ ಸಮಯ. ನಮ್ಮ ಕಂಪೌಂಡಿನಲ್ಲಿ ಹೊಕ್ಕು ಐದು ಪೈಸೆ ಹತ್ತು ಪೈಸೆಗೆ ನಾಲ್ಕಾಣೆಗೆ ತೃಪ್ತಿಪಟ್ಟುಕೊಂಡು ಹೋಗುವ ಪೇಪರ್ ವೇಷ, ಚಕುಬುಕು ಚಟ್ಣಿ, ಪೈಂಟರ್ ವೇಷ, ಸಿದ್ಧಿ ವೇಷ, ಕೊರಗರ ವೇಷ, ಸ್ತ್ರೀ ವೇಷ, ಸಿಂಗಾರ ಪಾಟಿ ವೇಷ, ಅಸ್ತಿಪಂಜರ ವೇಷಗಳಿಗೇನೂ ಕೊರತೆಯಿರಲಿಲ್ಲ! 

ಆಗಿನ ದಿನಗಳಲ್ಲಿ ಸಭ್ಯತೆ ಕಾಪಾಡಿಕೊಳ್ಳುವತ್ತ ಹೆಚ್ಚು ಗಮನ ನೀಡುತ್ತಿದ್ದ ಸ್ವಲ್ಪ ಉನ್ನತ ಮಟ್ಟದವರು, ಹರಕೆ ಹೊತ್ತವರು ಹಾಕುವ ಹುಲಿ, ಕರಡಿ, ಸಿಂಹ, ರಾಧಾಕೃಷ್ಣ, ಅನಾರ್ಕಲಿ(ಬ್ಯಾಂಡ್ ಸಿದ್ಧಿ)ಗಳು ಪರಿಚಯವಿಲ್ಲವರ ಮನೆಯಲ್ಲಿ ಕುಣಿಯುವ ಪದ್ಧತಿಯಿರಲಿಲ್ಲ. ನಾವು ಹೆಚ್ಚಾಗಿ ರಸ್ತೆಯ ಆಚೆ ಇದ್ದ ಲಾಲ್‍ಬಾಗ್ ಸ್ಟೋರ್‍ನ ನಾರಾಯಣ ಶೆಟ್ರ ಕಂಪೌಂಡ್‍ನಲ್ಲಿ, ಅಥವಾ ಅಪರೂಪಕ್ಕೊಮ್ಮೆ ಪಕ್ಕದಲ್ಲಿದ್ದ ಪುಟ್ಟಸ್ವಾಮಿಯವರಲ್ಲಿ ಕುಣಿಯುವ ಅಂತಹ ವೇಷಗಳನ್ನು ಅಥವಾ ನಮ್ಮ ತಂದೆಯವರ ಪರಿಚಯ ಇದ್ದವರು ಮನೆಗೆ ಬಂದು ಕುಣಿಯುವುದನ್ನು ನೋಡಿ ಖುಷಿ ಪಡುತ್ತಿದ್ದೆವು. ಅಂತಹ ವೇಷಗಳಿಗೆ ಆಗಿನ ದಿನಗಳಲ್ಲಿ ಕನಿಷ್ಠ ಒಂದೆರಡು ರೂಪಾಯಿ ಸಂಭಾವನೆ ನೀಡುವುದು ಸಂಪ್ರದಾಯ, ಶಿಷ್ಟಾಚಾರ.

ಒಂದು ರಾತ್ರಿ ಸುಮಾರು 9:45ರ ಸಮಯ. ರಸ್ತೆಯ ಮಿಣುಕು ದೀಪಗಳ ಬೆಳಕಿನಲ್ಲಿ ನಿಶ್ಶಬ್ಧವಾಗಿ ನಡೆದೆು ಹೋಗುತ್ತಿದ್ದ, ಅಸ್ಪಷ್ಟವಾಗಿ ಕಾಣುವ ವೇಷದ ಗುಂಪೊಂದನ್ನು ಮಾಳಿಗೆ ಕೋಣೆಯ ಕಿಟಿಕಿ ಬಳಿ ಕುಳಿತ ನಾನು ಮತ್ತು ನಮ್ಮಣ್ಣ ರಾಧಾಕಾಂತ್ ಕಂಡೆವು. 

ಸುಮ್ಮನೆ ಕೂತು ಆ ದೃಶ್ಯವನ್ನು ವೀಕ್ಷಿಸಬಾರದೇ?

ಇಲ್ಲಾ!

ನಮ್ಮಣ್ಣ ಗಟ್ಟಿ ಸ್ವರದಲ್ಲಿ "ಇದು ಯಾವ ವೇಷ?" ಎಂದು ಕೇಳಿದ.


"ಹಾದಿಯಲ್ಲಿ ಹಾದು ಹೋಗುವ ಹುಲಿಯೇ ನನ್ನನ್ನು ಬಂದು ಹಿಡಿಯೇ..." ಅಂದ ಹಾಗೆ, ಆ ವೇಷದ ಗುಂಪು ಒಮ್ಮೆ ತಲೆಯೆತ್ತಿ ನಮ್ಮತ್ತ ದೃಷ್ಟಿಸಿ "ಕರಡಿ... ಕರಡಿ!" ಎಂದು ಉತ್ತರಿಸಿತು!


ಸ್ವಲ್ಪ ಅಧಿಕ ಪ್ರಸಂಗ ಜಾಸ್ತಿ ಇದ್ದ ನಾವು ಕೂಡಾ ಜೋರಾಗಿ "ಕರಡಿ... ಕರಡಿ" ಎಂದು ಅರಚಿದೆವು!


ತಕ್ಕೋ! ನಮಗೆ ಬೇಕಿತ್ತೇ?

ಕರಡಿ ವೇಷದ ಗುಂಪು ನಮ್ಮ ಮನೆಯತ್ತ ತಿರುಗಿ ಬ್ಯಾಂಡ್ ಬಾರಿಸುತ್ತಾ ಗೇಟ್ ಸರಿಸಿ ಒಳನುಗ್ಗಿತು! ನಾನು ಮತ್ತು ನಮ್ಮಣ್ಣ ಬೆಚ್ಚಿಬಿದ್ದು ಹೌಹಾರಿ ಎದ್ದು ಕೆಳಗೋಡಿ ಹೊರ ಚಾವಡಿಯ ಲೈಟ್ ಆರಿಸಿ ಹಾಲ್‍ನ ಎರಡೂ ಬದಿಯ ಬಾಗಿಲುಗಳನ್ನು ಮುಚ್ಚಿ ಏನೂ ಆಗವರಂತೆ ಒಂದು ಮೂಲೆಯಲ್ಲಿ ಅವಿತು ಕುಳಿತೆವು. ಹಾಲ್‍ನಲ್ಲಿ ಬರೆಯುತ್ತಾ ಕೂತಿದ್ದ ನಮ್ಮ ತಂದೆಯವರು ಬ್ಯಾಂಡ್ ಸದ್ಧು ಕೇಳಿಸಿ ಒಮ್ಮೆ ತಲೆಯೆತ್ತಿ ನಂತರ ಹಾಲ್‍ನ ಬಾಗಿಲುಗಳು ಬಂದ್ ಇದ್ದುದನ್ನು ಕಂಡು, "ಬಹುಷ್ಯಃ ಪಕ್ಕದ ಮನೆಯ ಪುಟ್ಟಸ್ವಾಮಿಯವರಲ್ಲಿ ಬಂದಿರಬೇಕು ವೇಷ" ಎಂದು ಯೋಚಿಸಿ ತಮ್ಮ ಕೆಲಸ ಮುಂದುವರೆಸಿದರು.

ಅತ್ತ ಕರಡಿ ವೇಷದವರು ನಾಲ್ಕೈದು ಸಾರಿ ಬ್ಯಾಂಡ್ ಅರ್ಧರ್ಧ ಬಾರಿಸಿ ಯಾರೂ ಹೊರಬಾರದ್ದನ್ನು ನೋಡಿ ನಿರಾಶೆಯಿಂದ, "ಬಂದ ದಾರಿಗೆ ಸುಂಕವಿಲ್ಲ" ಎಂದುಕೊಂಡು ತಮ್ಮ ಅದೃಷ್ಟವನ್ನು ಹಳಿಯುತ್ತಾ, ನಮ್ಮಿಬ್ಬರಿಗೆ ಹಿಡಿ ಶಾಪವನ್ನು ಹಾಕುತ್ತಾ ಬರಿಗೈಯ್ಯಲ್ಲಿ ವಾಪಸಾದರು!

ನಿಜ ಸಂಗತಿ ಅರಿತ ನಮ್ಮ ತಂದೆಯವರು ನಂತರ ಸಹಸ್ರನಾಮವಲ್ಲದಿದ್ದರೂ, ಅಷ್ಟೋತ್ತರ ಪಾಠವನ್ನು ನಿರರ್ಗಳವಾಗಿ ನಮ್ಮಿಬ್ಬರ ಮೇಲೆ ಪ್ರೋಕ್ಷಿಸಿ ನಮ್ಮನ್ನು ಕೃತಾರ್ಥರನ್ನಾಗಿ ಮಾಡಿದರೆಂದು ಬೇರೆ ಹೇಳಬೇಕಾಗಿಲ್ಲ!

Sunday, June 8, 2014

ಭಯ... ಭಕ್ತಿ... ಕಾಳಜಿ....



ಮೇಲಿನ ಮೂರು ಒಂದೇ ಎನಿಸಬಹುದು. ಆದರೆ, ನನ್ನ ಪ್ರಕಾರ ಇವು ಭಿನ್ನವಾಗಿವೆ.

ಸುಮಾರು 35 ವರ್ಷಗಳ ಹಿಂದಿನ ಮಾತು. ಆಗ ನಾನು ಚಾಮರಾಜನಗರದಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದೆ. ಮೈಸೂರು ನನ್ನ ನೆಲೆ ಹಾಗೂ ದಿನಾ ಬೆಳಿಗ್ಗ್ಯೆ ಸಂಜೆ ಓಡಾಡುವ ಚಾಮರಾಜನಗರ ಪ್ಯಾಸೆಂಜರ್ ರೈಲು ಬಂಡಿ ನನ್ನ ಪ್ರಯಾಣದ ಅನುಕೂಲತೆ.

ಹಲವಾರು ಮಿತ್ರರನ್ನು ಸಂಪಾದಿಸಿದ ನಾನು 'ಕತ್ತಿಗೆ ಗಂಟು ಬೀಳುವ ಸಂಭವವಿದೆ' ಎಂದು ಕೆಲವರು ಮುಂಚಿತವಾಗಿ ಎಚ್ಚರಿಸಿದ್ದರಿಂದ ಹೆಣ್ಣ್ಮಕ್ಕಳಿಂದ ಸ್ವಲ್ಪ ದೂರವಿದ್ದೆ. ಅವರೂ ನನ್ನನ್ನು ಕಂಡರೆ ಹಾವು ಮೆಟ್ಟಿದಂತೆ ಹೆದರಿ ಓಡುತಿದ್ದರು!

ನನ್ನನ್ನು ಎಚ್ಚರಿಸಿದವರೇ ಹೆಣ್ಣ್ಮಕ್ಕಳ ಮಧ್ಯೆ ಕುಳಿತು ಚಕ್ಕಂದವಾಡುತ್ತಾ ಪ್ರಯಾಣಿಸುವುದನ್ನು ಕಂಡ ನಾನು ತುಸು ಅಸೂಯೆ ಪಟ್ಟರೂ, ನನ್ನ ಜಾಗ್ರತೆ ನನಗೆ ಇರಲಿ ಎಂದು ದೂರವಿದ್ದೆ.

ಅದಾಗ್ಯೂ ಕೆಲವರು ಹೆಂಗಳೆಯರು ನನ್ನ ಬಿದಿರಿನ ಬೊಂಬನ್ನು ಹೋಲುವ ದೇಹವನ್ನು ಕಂಡು ನಿರ್ಭೀತರಾಗಿ ಸ್ನೇಹ ಸಂಪಾದಿಸಿ ನಿರರ್ಗಳವಾಗಿ ಮಾತಾಡಿ ಅನ್ಯೋನ್ಯವಾಗಿದ್ದರು!

ನನಗಂತೂ ಕುತೂಹಲ. ಹಲವರು ನನ್ನನ್ನು ಕಂಡು ಭಯ ಪಡುವುದೇಕಂತೆ? ನಾನು ಅಷ್ಟು ಕ್ರೂರಿಯಂತೆ ಕಾಣುತ್ತೇನೆಯೇ?
ಒಂದು ದಿನ ನಂಜನಗೂಡು ರೇಷ್ಮ ಇಲಾಖೆಯಲ್ಲಿರುವ ಸುಧಾ ಎಂಬ ಹೆಣ್ಣನ್ನು ಪಕ್ಕ ಕುಳ್ಳಿರಿಸಿ ಕೇಳಿದೆ, "ಸುಧಾ, ಹುಡುಗಿಯರು ನನ್ನನ್ನು ಕಂಡು ಯಾಕೆ ದೂರ ಸರಿಯುವುದು? ನೀವು ಮತ್ತು ನಿಮ್ಮ ಸಂಗಡಿಗರು ನನ್ನೊಂದಿಗೆ ಹಾಯಾಗಿ ಸ್ನೇಹ ಬೆಳೆಸಿ ಮಾತನಾಡಿಕೊಂಡಿದ್ದೀರಿ ತಾನೆ!"

"ನಿಮ್ಮನ್ನು ಕಂಡ್ರೆ ಹುಡುಗೀರು ಭಯ ಪಡ್ತಾರೆ ಕಣ್ಣ್ರೀ!"

"ಭಯ ಪಡ್ತಾರೆ! ನಾನೇನು ಕ್ರೂರ ಪ್ರಾಣಿಯೇ ಅಥವಾ ಕೊಲೆಗಡುಕನೇ?!!"

ಅಂದಿನಿಂದ ನಾನು ಜನರ ಪ್ರೀತಿ, ವಿಶ್ವಾಸ, ಭಕ್ತಿ, ಕಾಳಜಿ ಇತ್ಯಾದಿಗಳ ಬಗ್ಗೆ ಹೆಚ್ಚು ನಿಗಾ ವಹಿಸಿಕೊಂಡಿದ್ದೇನೆ!