Sunday, November 1, 2015

ಐ ವಾಂಟ್ ಕನ್ನಡಾ

ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ನನ್ನ ನೆನಪಿನ ಪುಟಗಳನ್ನು ಕೆದಕಿ ಈ ಒಂದು ನೈಜ ಅನುಭವವನ್ನು, ಒಂದು ಹಾಸ್ಯಮಯ ಸನ್ನಿವೇಶವನ್ನು ತಮ್ಮೆಲ್ಲರ ಮುಂದಿಡುತ್ತಿದ್ದೇನೆ. ವಿಚಿತ್ರ ಸನ್ನಿವೇಶದಲ್ಲಿ ನಡೆದ ಈ ನೈಜ ಕಥೆಯಲ್ಲಿ ಬರುವ ಸಂಭಾಷಣೆಗಳನ್ನು ಒದಿ ಯಾರೂ ಕನ್ನಡ ಭಾಷೆಯ ಅವಹೇಳನವೆಂದು ಪರಿಗಣಿಸಬಾರದು. ಸ್ವತಃ ಕನ್ನಡಾಭಿಮಾನಿಯಾದ ನಾನು, ಕುಡಿದ ಅಮಲಿನಲ್ಲಿ ಒಬ್ಬರು ಮಾಡಿದ ತಪ್ಪನ್ನು ತಿದ್ದಿ ಅವರನ್ನು ಸರಿದಾರಿಗೆ ತಂದ ಬಗೆಯನ್ನು, ಹಾಗೂ ಎರಡು ಭಾಷೆ, ಎರಡು ಸಂಸ್ಕೃತಿಯಲ್ಲಿ ಬೆಳೆದ ಜನರಲ್ಲಿ ಭಾಷೆಯ ಅಂತರದಿಂದ ದೊಡ್ದ ಅವಾಂತರವಾಗುವುದನ್ನು  ಜಾಣ್ಮೆಯಿಂದ ತಪ್ಪಿಸಿದ ಬಗ್ಗೆ ವಿವರಿಸಿದ್ದೇನೆ. ಕನ್ನಡ ಭಾಷೆಯ ಅಂಧಾಭಿಮಾನ ಸಲ್ಲದು, ವಿಷ್ಲೇಶಣೆ ಅವಶ್ಯ ಎಂದು ಈ ಮೂಲಕ ತಿಳಿಯಪಡಿಸುತ್ತಿದ್ದೇನೆ.
------------------------------------------------------------------------------------------------------------------------------
Pic source: pixabay.com
1979 ಅಕ್ಟೋಬರ್ ಅಥವಾ ನವೆಂಬರ್ ಸಮಯ ಇರಬೇಕು. ದೀಪಾವಳಿ ರಜೆಯಲ್ಲಿ ಮೈಸೂರು ಸುತ್ತಾಡಲು ಪ್ರವಾಸಿಗಳ ಪ್ರವಾಹವೇ ಪ್ರವಾಹ! ನಾನು ಮತ್ತು ನನ್ನ ಇಬ್ಬರು ಆತ್ಮೀಯ ಮಿತ್ರರು ಸುರೇಶ್ ಮತ್ತು ದಯಾನಂದ್ ಇಷ್ಟಪಟ್ಟ ’ಆಶಿರ್ವಾದ್ ಹೋಟಲ್ - ಮೇನಕಾ ಬಾರ್’ ಅದೊಂದು ಶನಿವಾರ ರಾತ್ರಿ 8:00 ಘಂಟೆಗೇ ತುಂಬಿ ತುಳುಕುತ್ತಿತ್ತು.  ದಿನಾ ಕನ್ನಡ ಚಿತ್ರದ ಹಾಡುಗಳನ್ನು ಪದೇ ಪದೇ ಕೇಳಿ ಬೇಸತ್ತ ನಮಗೆ ರೋಸಿ ಹೋಗಿ, ನಾನು ನನ್ನ ಎರಡು ಇಂಗ್ಲಿಷ್ ಹಾಡಿನ ಕ್ಯಾಸೆಟ್‍ಗಳನ್ನು ಮ್ಯಾನೇಜರ್ ಕೈಲಿ ಕೊಟ್ಟೆ.

ನಮಗಂತೂ ಮಾಮೂಲಿ ಗಿರಾಕಿಗಳು ಎಂದು ಬಾರ್ ಕೌಂಟರ್ ಮೂಲೆಯಲ್ಲಿ ಜಾಗ ಕಾದಿರಿಸಿದ ಮ್ಯಾನೇಜರ್ ಶ್ರೀನಿವಾಸ್ ಕನ್ನಡ ಹಾಡು ನಿಲ್ಲಿಸಿ ನನ್ನ ಇಂಗ್ಲಿಷ್ ಹಾಡುಗಳ ಕ್ಯಾಸೆಟ್ ಹಾಕಿ ದೊಡ್ಡ ಧ್ವನಿಯಲ್ಲಿ ’ಡೋನಾ ಸಮ್ಮರ್’ ಹಾಡು ನುಡಿಸಿದ!

ಕೂಡಲೇ ನನ್ನ ಬಲಕ್ಕೆ ಕೂತ ಆಸಾಮಿ ತಟ್ಟನೆ ಎದ್ದು ನಿಂತು ಜೋರಾಗಿ ಕೂಗಿದ "ಐ ವಾಂಟ್ ಕನ್ನಡಾ ಸಾಂಗ್ಸ್! ಐ ವಾಂಟ್ ಕನ್ನಡಾ...!"

"ಅಬೇ ಚುಪ್ ಬೈಟ್ ಬೇ! ಕೌನ್ ಸುನೇಗಾ ತೇರಾ ಕನ್ನಡಾ!" ಮಧ್ಯದ ಟೇಬಲ್ ನಲ್ಲಿ ಕುಳಿತ ಇಬ್ಬರು ಉತ್ತರ ಭಾರತೀಯರು ಗದರಿಸಿದರು!

ನಮ್ಮ ಕನ್ನಡಪ್ರಿಯ ಮಹಾರಾಯ ಅದಾಗಲೇ ಐದನೇ ಪೆಗ್ ಗುಳುಂಕರಿಸಿ ಸರಿಯಾಗಿ ನಿಲ್ಲಲೂ ಮಾತಾಡಲೂ ಆಗದೇ ಮತ್ತೊಮ್ಮೆ ಕ್ಷೀಣ ಸ್ವರದಲ್ಲಿ ಬಡಬಡಿಸಿದ "ಶಟ್ ಅಪ್! ಐ ವಾಂಟ್ ಕನ್ನಡಾ ಮೀನ್ಸ್ ಅರ್ಥಾಗಲ್ವಾ ಅವ್ನಿಗೇ.... ಬೋಸುಡಿ ನನ್ ಮಗ್ನಿಗೇ! ಸುಮ್ಕಿರೋ ಲೋಫರ್ ನನ್ ಮಗ್ನೇ! ಐ ವಾಂಟ್ ಕನ್ನಡಾ..... ಅಣ್ಣಾ... ಶ್ರೀನಿವಾಸಾ.... ಹಾಕಲೋ ಕನ್ನಡಾ ಹಾಡು!"

ನಾರ್ತ್ ಇಂಡಿಯನ್ಸ್ ಜೋರಾಗಿ ಅರಚಿದ್ರು "ಬಾಸ್.... ಲೆಟ್ ಇಟ್ ಪ್ಲೇ. ಡೋಂಟ್ ಲಿಸನ್ ಟು ದೇಟ್ ಈಡಿಯಟ್!"

"ಥ್ಯಾಂಕ್ ಯು ಸರ್. ವೆರಿ ಗುಡ್ ಸೋಂಗ್ಸ್! ಬಿಕೋಸ್ ಓಫ್ ಯೂ, ವೀ ಆರ್ ಸೇವ್ಡ್ ಫ್ರೋಮ್ ಬೋರಿಂಗ್ ಕನ್ನಡಾ ಸೊಂಗ್ಸ್!" ಎಂದು ನನಗೂ ಅಭಿನಂದನೆ ಸಲ್ಲಿಸಿದರು!

ನಮ್ಮ ಪಕ್ಕ ಕುಳಿತ ಆಸಾಮಿ ಹೂಂಕಾರ ಠೇಂಕಾರ ಹಾಕುತ್ತಾ ಬಾಯೊಳಗೇ "ಕನ್ನಡಾ ಕನ್ನಡಾ...." ಎಂದು ಮಣಮಣಿಸುತಿದ್ದ!

ಯಾವುದೋ ದೊಡ್ದ ಕಾಲೇಜ್ ಪ್ರೊಫೆಸರ್ ಉದಯವರ್ಮ ಅಂತೆ. ದಿನಾ ಮೂಗಿನ ವರೇಗೆ ಏರಿಸಿ ನಡೆಯಲೂ ಕಷ್ಟಪಟ್ಟು ಇಬ್ಬರು ಹೊತ್ತುಕೊಂಡು ಹೋಗಿ ಆಟೋರಿಕ್ಶಾದಲ್ಲಿ ಕುಳ್ಳಿರಿಸಿ ಬರುವುದು ಮಾಮೂಲಿ ಕಥೆಯಂತೆ... ಹಾಗಂದ ಶ್ರೀನಿವಾಸ್!

ಹಾಗೇ ನಾನು ಮೆಲ್ಲನೆ ಶ್ರೀನಿವಾಸ್ ಬಳಿ ನಡೆದು ಹೇಳಿದೆ "ಆಣ್ಣಾ....  ಶ್ರೀನಿವಾಸಾ.... ಸಧ್ಯಕ್ಕೆ ಒಂದು ಕನ್ನಡ ಹಾಡು ಹಾಕಪ್ಪಾ... ಅವ್ನಿಗೆ ಸಮಾಧಾನಾ ಆಗ್ಲಿ. ಆ ಮೇಲೆ ತಿರ್ಗಾ ನನ್  ಕ್ಯಾಸೆಟ್ ಹಾಕುವಿಯಂತೆ!"

’ನೂರೀ’ ಫಿಲಮ್ ಹೀರೋ ತರಹ ಕಾಣ್ಬೇಕೆಂದು ಸ್ವಲ್ಪ ದಿನ ಮುಂಚಿತವಾಗಿ ಶೇರ್ವಾನಿ ಸೂಟ್ ಹೊಲಿಸಿ ಮೆರೆಯುತ್ತಿದ್ದ 95 ಕೇಜಿ ತೂಕದ ಟೊಣಪ ಶ್ರೀನಿವಾಸ್ ಮೀಸೆ ತಿರುವುತ್ತ ಅಂದ, "ಡೆಲಿಕೇಟ್ ಸಿಚುವೇಶನ್ ಗುರು! ಎಲ್ಲಾದ್ರೂ ನಿನ್  ಕ್ಯಾಸೆಟ್ ನಿಲ್ಸಿ ಕನ್ನಡಾ ಹಾಡು ಹಾಕಿದ್ರೆ.... ಆ ನಾರ್ತ್ ಇಂಡಿಯನ್ಸ್ ಅಂತೂ ನನ್ನನ್ನಾ ಸೀಳಿ ಕಬಾಬ್ ಮಾಡಿ ಬಿಡ್ತಾರಷ್ಟೆ!"

ನನಗಂತೂ ನುಂಗಲಾರದ ತುತ್ತು! ’ಇತ್ತ ಪುಲಿ ಅತ್ತ ದರಿ’ ಎಂಬಂತಾಯಿತು ಪರಿಸ್ಥಿತಿ. ನಮಗೂ ನನ್ನ ಹಾಡುಗಳನ್ನೇ ಕೇಳಬೇಕೆಂಬ ಹಂಬಲ. ನಾರ್ತ್ ಇಂಡಿಯನ್ಸ್ ನಮ್ಮ ಕಡೆ ಇದ್ದರೂ ಅವರನ್ನು ನಾವಾಗಿ ಸಪೋರ್ಟ್ ಮಾಡೋ ಹಾಗಿಲ್ಲ!

ಫಕ್ಕನೆ ಒಂದು ಐಡಿಯಾ ಫ್ಲೇಶ್ ಆಗಿ, ನಾನು ಪಕ್ಕದವನ ಹೆಗಲಿನ ಮೇಲೆ ಕೈ ಇಟ್ಟು, ಕೂತ್‍ಕೊಂಡು ತಲೆ ಎತ್ತಲು ಕಷ್ಟ ಪಟ್ಟರೂ, ಕೆಂಗಣ್ಣುಗಳಿಂದ ಅತ್ತಿತ್ತ ನೋಡುತ್ತಿದ್ದ ಅವನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿ ಮೆಲ್ಲಗೆ ಹೇಳಿದೆ "ನೋಡಿ ಸ್ವಾಮಿ, ನಿಮಗೆ ಕನ್ನಡ ಹಾಡು ಕೇಳಲು ಇಷ್ಟ ತಾನೇ! ಅದನ್ನು ಸ್ಪಷ್ಟವಾಗಿ, ನನ್ಗೆ ಕನ್ನಡ ಹಾಡು ಬೇಕು ಎಂದು ಹೇಳೋದು ಬಿಟ್ಟು ಇಂಗ್ಲಿಷ್‍ನಲ್ಲಿ ಐ ವಾಂಟ್ ಕನ್ನಡಾ ಸಾಂಗ್ಸ್ ಅಂದ್ರೆ ಕೇಳ್ತಾರಾ ಯಾರಾದ್ರೂ! ನಿಮ್ಗೆ ತಲೆ ಗಿಲೆ ಸರೀಗಿದೆಯೇನ್ರೀ?"

ಅವನು ಒಂದು ಕ್ಷಣ ಬೆಕ್ಕಸ ಬೆರಗಾಗಿ ನನ್ನನ್ನೇ ದೃಷ್ಟಿಸಿ ನೋಡಿ ಗೋಳೋ ಎಂದು ಅಳುತ್ತಾ ಅಂದ, "ಕ್ಷಮಿಸಿ ಸಾರ್....ತಪ್ಪು ಮಾಡಿದೆ! ತಮ್ಮ ಕಾಲಿಗೆ ಬೀಳ್ತೀನಿ ಸಾರ್! ಬೇಜಾರ್ ಮಾಡ್ಕೋಬೇಡಿ ಸಾರ್! ತಾವು ಮಹಾಜ್ಞಾನಿಗಳು! ನನ್ನ ಕಣ್ಣು ತೆರೆಸಿದ ಅಧ್ಬುತ ವ್ಯಕ್ತಿ ಸಾರ್ ನೀವು! ಇಷ್ಟೊಂದು ಮೂರ್ಖನಂತೆ ನಾನು ’ಐ ವಾಂಟ್ ಕನ್ನಡಾ” ಎಂದು ಬಡಬಡಿಸ್ತಿದೀನಲ್ಲಾ.... ಎಕ್ಕಡಾ ತಕ್ಕೊಂಡು ಹೊಡೀರಿ ಸಾರ್ ನಂಗೆ! ತಪ್ಪು ಮಾಡಿದೆ ಸಾರ್... ತಪ್ಪು ಮಾಡಿದೆ! ಈವಾಗ ನೀವು ಏನಂದ್ರೂ ಕೇಳ್ತೀನಿ ಸಾರ್ ನಾನು!".

ನಾನಂದೆ "ನೋಡಿ ಸಾರ್, ಒಂದು ಸಣ್ಣ ತಪ್ಪು ಮಾಡಿದ್ರಿ. ಅದ್ಕೇ ಯಾರೂ ನಿಮ್ಮನ್ನ ಗಣನೆಗೆ ತಕ್ಕೊಳ್ಳಿಲ್ಲಾ. ಇನ್ನಾದ್ರೂ ಕನ್ನಡ ಭಾಷೆಯ ಮೇಲೆ ಅಭಿಮಾನ ಇಟ್ಕೊಂಡು ಶುದ್ಧ ಕನ್ನಡದಲ್ಲೇ ಮಾತನಾಡಿ. ಆವಾಗ ನಿಮಗೆ ಮರ್ಯಾದೆನೂ ಸಿಗುತ್ತೆ, ನಿಮ್ಮ ಮಾತೂ ನಡಿಯುತ್ತೆ!"

ಮುಂದಿನ ಒಂದು ಘಂಟೆ ಇಂಗ್ಲಿಷ್ ಹಾಡುಗಳನ್ನು ಕೇಳಿ ಆನಂದಿಸಿದೆವು ನಾವು. ಕುಡಿದ ಅಮಲಿನಲ್ಲಿ ತೊದಲುತ್ತಾ ಮಾಲುತ್ತಾ ಇಬ್ಬರು ಹುಡುಗರ ಸಪೋರ್ಟ್‍ನಿಂದ ಹೊರ ನಡೆದ ಗ್ರಾಚಾರ್ಯ... ಅಲ್ಲ ಕ್ಷಮಿಸಿ ಪ್ರಾಚಾರ್ಯ ಉದಯವರ್ಮನನ್ನು ನೋಡಿ ಮುಖ ಮುಖ ನೋಡಿ ಹೊಟ್ಟೆ ತುಂಬಾ ನಕ್ಕೆವು!  ಕೊನೆಗೂ ಆತನಿಗೆ ಇಂಗ್ಲಿಷ್ ಹಾಡುಗಳ ಕ್ಯಾಸೆಟ್ ನನ್ನದೆಂದು ಗೊತ್ತೇ ಆಗಲಿಲ್ಲ!

4 comments:

Unknown said...

ಇದನ್ನು ಓದಿದ ಮೇಲೆ ಈ ಕೆಳಗಿನ ಚಟಾಕಿ ನೆನಪಿಗೆ ಬಂತು.

ಹೆಣ್ಣಿನ ತಂದೆ ಡಿ ಜೆ ಗೆ :
" ಮ್ಯುಸಿಕ್ ರಾತ್ರಿ ಹನ್ನೊಂದು ಘಂಟೆ ಗೆ ಮುಗಿಸಿ ಬಿಡಿ. ನಾಕು ಪೆಗ್ ಏರಿದ ಮೇಲೆ ಜನರೇಟರ ಸದ್ದಿಗೂ ಕುಣೇತಾವ್ರೆ ಬೊಳೇಮಕ್ಳು "

Rajanikanth Shenoy, Kudpi said...

ಸರಿಯಾಗಿ ಹೇಳಿದ್ರೀ ಶರತ್ ಕಾಮತ್ ಅವರೇ. ಇಂತಹ ಹಾಸ್ಯ ಚಟಾಕಿಗಳು ಬಹಳಷ್ಟು ಕಂಡು ಬರ್ತಾವೆ ಇತ್ತೀಚಿನ ದಿನಗಳಲ್ಲಿ!

ಅಶೋಕವರ್ಧನ ಜಿಎನ್ said...

ಹುಲಿಮೀಸೆ ಮತ್ತು ಹಂದಿ ಬಾಲ ಹಾಕಿ ಹೆಂಡ ಮಾಡ್ತಾರೆ. ಹಾಗಾಗಿ ಮೊದಮೊದಲು ಬೊಬ್ಬಿಟ್ಟು ಹಾರಾಡಿದವರು ಮತ್ತೆ ಶಾಂತವಾಗಿ ಬಿದ್ದುಕೊಳ್ತಾರೆ ಎಂದು ಕತೆ ಕೇಳಿದ್ದು ನಿಜವಾಯ್ತು. ಪರ್ಸಂಗ ಹಾಸ್ಯಸ್ಫೋಟಕ (ಫನ್-ಡಾಸ್ಟಿಕ್) ಮಾತ್ರವಲ್ಲ ಬೊಂಬಾಟ್ (ಬೊಂಬ್ ಬ್ಲಾಸ್ಟಿಕ್) ಕೂಡಾ ಆಯ್ತು.

Rajanikanth Shenoy, Kudpi said...


ಅಶೋಕವರ್ಧನ ರಾಯರೇ, ತಮ್ಮ ಅನಿಸಿಕೆಗಳನ್ನು ಹಾಗೂ ಅಮೂಲ್ಯ ಸಲಹೆಗಳನ್ನು ಇಲ್ಲಿ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು. ತಮ್ಮಂಥಾ ಹಿರಿಯ ಲೇಖಕರು ಮೆಚ್ಚಿದಲ್ಲಿ ಇನ್ನಷ್ಟು ರಗಳೆ ಬರಿಯುವ ಉತ್ಸಾಹ ಬಂದೇ ಬರುವುದೆಂಬ ನಂಬಿಕೆ ನನ್ನದು.