Wednesday, December 9, 2015

ಮಣ್ಣಗುಡ್ದೆ ದಿಡುಂ

ಎಪ್ಪತ್ತರ ದಶಕದ ಡಿಸೆಂಬರ್ ತಿಂಗಳ ಒಂದು ಬೆಳಿಗ್ಯೆ ನವಭಾರತ ದಿನಪತ್ರಿಕೆಯನ್ನು ಓದುತ್ತಿದ್ದ ನಾನು, ಕೊನೇಯ ಪುಟದಲ್ಲಿ 'ನಾಳೆ ಮಣ್ಣಗುಡ್ದೆಯಲ್ಲಿ ದಿಡುಂ' ಎಂಬ ಶೀರ್ಷಿಕೆಯನ್ನೋದಿ ಹೌಹಾರಿದೆನು!

ಹೌದು. ಪ್ರೊಫ್ ರೀಡರ್‍ಗಳ ಅಲಕ್ಷ್ಯದಿಂದಾಗಿಯೋ ಅಥವಾ ಹೆಚ್ಚಿನ ಹಳೇ ಕೈಗಳು ಮಣಿಪಾಲದಲ್ಲಿ ಹೊಸದಾಗಿ ಪ್ರಾರಂಭವಾದ ಉದಯವಾಣಿ ದಿನಪತ್ರಿಕೆಯತ್ತ ಆಕರ್ಷಿತರಾಗಿ ಅತ್ತ ನೆಗೆದ ಕಾರಣ ಅನುಭವಿಗಳ ಕೊರತೆಯಿಂದಾಗಿಯೋ ಅಂದಿನ ದಿನಗಳಲ್ಲಿ ನವಭಾರತ ಹಲವಾರು ತಪ್ಪುಗಳನ್ನು ಹೊತ್ತುಕೊಂಡು, ಸೋತು ಬಳಲಿ ನಮ್ಮ ಕೈಸೇರುತ್ತಿದ್ದುದಂತೂ ಹೌದು! ನಮಗಂತೂ ನವಭಾರತದಲ್ಲಿ ಪ್ರಕಟವಾಗುತ್ತಿದ್ದ  'ಶಿಂಗಣ್ಣಾ' ವ್ಯಂಗ್ಯಚಿತ್ರ, 'ಅರ್ಥಗರ್ಭಿತ ವಾರ್ತೆಗಳು' ಮತ್ತು ಸಿನೆಮಾ ಟಾಕೀಸುಗಳ ಜಾಹೀರಾತುಗಳನ್ನು ನೋಡದೇ ಬೆಳಗಾಗುತ್ತಿರಲಿಲ್ಲ! ಕ್ರೀಡಾಪುಟದಲ್ಲಿ ಚಂದ್ರಶೇಖರ್ ಚಿತ್ರಕ್ಕೆ ವೆಂಕಟರಾಘವನ್ ಹೆಸರು, 'ಜೋ ಡಾನ್ ಬೇಕರ್ ಆಸ್ ಮಿಚೆಲ್' ಎಂದು ಹಾಕಲು 'ಜೋ ಡಾನ್ ಮಿಚೆಲ್ ಬೇಕರೀಸ್' ಇತ್ಯಾದಿ ತಪ್ಪುಗಳನ್ನು ಕಾಸಿಗೊಂದು ಕೊಸರಿಗೊಂದರಂತೆ ನೀಡಿ, ಪುಕ್ಕಟೆ ಮನೋರಂಜನೆ ನೀಡುವ ದಿನಪತ್ರಿಕೆಯನ್ನು ನಾವು ಅದು ಹೇಗೆ ಓದದೇ ಇರಲು ಸಾಧ್ಯ....ಹೇಳಿ!

ಅಂದ ಹಾಗೆ, ಇದು ಕೇವಲ ನವಭಾರತದ ಬಗ್ಗೆ ಬರೆಯಲು ಉದ್ದೇಶಿಸಿದ ಲೇಖನವೆಂದು ಅನ್ಯಥಾ ಭಾವಿಸಬಾರದು. 'ಮಣ್ಣಗುಡ್ದೆಯಲ್ಲಿ ದಿಡುಂ' ಒಂದು ಉಲ್ಲೇಖ ಅಷ್ಟೇ! ಮಣ್ಣಗುಡ್ದೆ ದಿಂಡು ನಾಳೆ ಅನ್ನುವಾಗ ಇಂದು 'ದಿಡುಂ' ಎಂದು ಗರ್ನಾಲ್ ಸ್ಫೋಟಿಸಿ ನಮ್ಮನ್ನು ಹೌಹಾರಿಸಿದ್ದಕ್ಕಾಗಿ ನಾನು ನವಭಾರತವನ್ನು ಉಲ್ಲೇಖಿಸಬೇಕಾಯಿತು.

ಮಣ್ಣಗುಡ್ದೆ ದಿಂಡಿನ ಸಂದರ್ಭದಲ್ಲಿ ಗರ್ನಾಲು ಸಿಡಿಸುವುದು ಸಾಮಾನ್ಯ. ಸಾಯಂಕಾಲದಿಂದ ರಾತ್ರಿ ವರೇಗೆ ಗಿರ್‍ಗಿಟ್ಲಿಯಂತೆ ಬಲ್ಲಾಳ್‍ಬಾಗ್‍ನಿಂದ ಮಣ್ಣಗುಡ್ದೆಗೆ ಹಾಗೂ ಹಿಂದೆ ಬಂದು ಆಯಾಸವಾಗಿ ನಾವು ಗಾಢ ನಿದ್ರೆಯಲ್ಲಿದ್ದಾಗ ಗರ್ನಾಲಿನ ಶಬ್ಧಕ್ಕೆ ಎಚ್ಚೆತ್ತು ಗಡಿಬಿಡಿಯಿಂದ ಎದ್ದು ಮುಖಕ್ಕೊಂದಿಷ್ಟು ತಣ್ಣೀರೆರಚಿ, ಬೈರಾಸಿನಿಂದ ಒರೆಸಿ, ಹೊರಗೋಡಿ ಕಂಪೌಂಡ್ ಗೋಡೆಯನ್ನೇರಿ ಕುಳಿತು, ಝೈಂ ಝೈಂ ಬ್ಯಾಂಡ್ ವಾದನದ ತಾಳಕ್ಕೆ ತಕ್ಕಂತೆ ಕುಣಿಯುತ್ತಾ ವೈಯ್ಯಾರದಿಂದ ಮೈ ತಿರುಗಿಸುತ್ತಾ ಗಂಭೀರತೆಯ ಮುಖಮುದ್ರೆಯೊಂದಿಗೆ ಸಾಗಿ ಬರುವ ತಟ್ಟಿರಾಯ, ರಾಣಿಯರನ್ನು ಕಂಪೌಂಡ್ ಪಕ್ಕದಿಂದ ಸಾಗುವ ದೃಶ್ಯವನ್ನು ಕಣ್ತುಂಬಾ ಕಾಣುವುದೇ ಒಂದು ಖುಷಿ! ನಂತರ ಬಂಡಿಯನ್ನೇರಿ ವಾಲಗದ ಧ್ವನಿಗೆ ಹಿಂಬಾಲಿಸಿ ಬರುವ ಗ್ರಾಮ ದೇವರ ಮೂರ್ತಿ ಗುರ್ಜಿಯನ್ನೇರಿ ಪೂಜೆಯನ್ನು ಸ್ವೀಕರಿಸುವಾಗ ಮೊಳಗುವ ಕೊಂಬು, ಭಗವತಿ ಕ್ಷೇತ್ರದ  ಗೂನುಬೆನ್ನಿನ ರಾಮ, ಮತ್ತವನ ಮೇಳದ ಚಂಡೆವಾದ್ಯ, ಸಿಡಿಸುವ ಮತಾಪು, ಪಟಾಕಿ ಎಲ್ಲವೂ ಕಣ್ಮುಂದೆ ಇಂದಿಗೂ ಮಾಸದೇ ಉಳಿದಿದೆ, ಕಿವಿಯಲ್ಲಿನ್ನೂ ಮೊಳಗುತ್ತಿದೆ!


ಇನ್ನು 'ಮಣ್ಣಗುಡ್ದೆ ದಿಂಡು' ಅಂದರೇನು, ಎಂದು ತಿಳಿದುಕೊಳ್ಳೋಣ. ಈ 'ಮಣ್ಣಗುಡ್ದೆ ದಿಂಡು' ಅನ್ನುವಂತಹದು ಪ್ರತಿ ವರ್ಷ ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ನಡೆಯುವ ಉತ್ಸವ. ಕನ್ನಡ ಭಾಷೆಯಲ್ಲಿ ದಿಂಡು ಅಂದರೆ ಉತ್ಸವ ಎಂದು ಅರ್ಥವಿದೆ. ಇಲ್ಲಿ ದಿಂಡು ಎಂದರೆ ಗುರ್ಜಿ ಉತ್ಸವ. ಗುರ್ಜಿ ಅನ್ನುವುದು 'ಗುಜ್ಜು' ಅಥವಾ ಮರದ ಕಂಬಗಳನ್ನು ನೆಟ್ಟು ಬಿದಿರಿನ ಮುಕುಟ ಕಟ್ಟಿ ಕೆಂಪು ಬಿಳಿ ಪತಾಕೆಗಳನ್ನು ಸುತ್ತಲೂ ನೇತಾಡಿಸಿ, ಭುಜಕ್ಕಿಷ್ಟು, ಸೊಂಟಕ್ಕಿಷ್ಟು ತರಕಾರಿ ಹಣ್ಣು ಹಂಪಲು ವೈವಿಧ್ಯಗಳನ್ನು ಕಟ್ಟಿ, ಕಂಬಗಳಿಗೆ ಅಡಿಕೆಯ ಮಾಲೆಯನ್ನು ಸುತ್ತಿ, ನಲಿದಾಡುವ, ಓಡಾಡುವ ಬಣ್ಣಬಣ್ಣದ ವಿದ್ಯುದ್ದೀಪಗಳಿಂದ ಅಲಂಕರಿಸಿ ಝಿಗ್ಗನೆ ಮಾರು ದೂರ 'ಮಾರನ ಅರಮನೆಯಂತೆ' ಎದ್ದು ಕಾಣುವಂತೆ ಮಾಡುವ ಮೋಡಿ ನಮ್ಮ ಚಿಕ್ಕಂದಿನಿಂದ ಇಂದಿನ ವರೇಗೆ ವರ್ಷಂಪ್ರತಿ ಬೆಳೆದು ಬಂದು ಇಂದಿಗೂ ಸಾವಿರಾರು ಜನರನ್ನು ಆಕರ್ಷಿಸುತ್ತಿದೆ. ನಮ್ಮ ವಾಸಸ್ಥಾನ ಬಲ್ಲಾಳ್‍ಬಾಗ್ ಹಾಗೂ ಸಮೀಪದ ಮಣ್ಣಗುಡ್ದೆಯಲ್ಲಿ ಮುಖ್ಯವಾಗಿ ನಿರ್ಮಿಸುವ ಗುರ್ಜಿಗಳಲ್ಲದೇ ಮಣ್ಣಗುಡ್ದೆಯಿಂದ ಅಳಕೆಗೆ ಹೋಗುವ ದಾರಿಯಲ್ಲಿ ಕೃಷ್ಣ ಮಠದಲ್ಲಿ, ಒಂದು ಚಿಕ್ಕ ಕಡಲೆಕಾಳಿನ ಗುರ್ಜಿಯನ್ನೂ ನಿರ್ಮಿಸುತ್ತಿದ್ದರು. ಅದರ ವೈಶಿಷ್ಟ್ಯ ಏನೆಂದರೆ, ಅಡಿಕೆಯ ಬದಲು ನೀರಲ್ಲಿ ನೆನೆಸಿದ ಕಡಲೆ ಕಾಳಿನ ಮಾಲೆಯನ್ನು ಗುರ್ಜಿಯ ಕಂಬಗಳಿಗೆ ಸುತ್ತುವುದು. ಉತ್ಸವದ ಮಾರನೇ ದಿನ ಗುರ್ಜಿಗೆ ಕಟ್ಟಿದ ತರಕಾರಿ ಹಣ್ಣುಹಂಪಲುಗಳನ್ನು ಏಲಂ ಹಾಕಿ ಮೂರು ಅಥವಾ ನಾಲ್ಕು ಪಟ್ಟು ಬೆಲೆ ಸಂಗ್ರಹಿಸುತ್ತಾ ಇದ್ದರು. ಆ ಏಲಂ ನೋಡುವುದು ಮತ್ತೊಂದು ಕುತೂಹಲ ನನಗೆ! ವಿಕ್ರತ ಕಾಡು ಅನನಾಸು ತಿನ್ನಲು ಯೋಗ್ಯವೇ ಎಂಬ ಯೋಚನೆ. ಗೇರುಹಣ್ಣಿನಂತೆ ಕಾಣುವ ಸೇಬು ಹಾಗೂ ಅದಕ್ಕೆ ಪೋಣಿಸಿದ ಗೇರುಬೀಜ ಯಾರು ಕೊಳ್ಳುವರೆಂಬ ಕೌತುಕ! 

ಶಾಲೆಗೆ ಹೋಗಲು ಪ್ರಾರಂಭಿಸಿದ ನಂತರ ಮೊದಲು ಅಮ್ಮ ಅಥವಾ ಅಣ್ಣಂದಿರ ಕೈ ಹಿಡಿದು ಮೆಲ್ಲನೆ ಹೆಜ್ಜೆ ಹಾಕುತ್ತಾ ಮಣ್ಣಗುಡ್ದೆಯತ್ತ ನಡೆದು ದಾರಿಯಲ್ಲಿ ಅಲ್ಲಲ್ಲಿ ಐಸ್‍ಕ್ಯಾಂಡಿ ಮಾರುವವರನ್ನು, ಪುಗ್ಗೆ, ಪೀಪಿ, ಟಾಂಟಾಂ, ಬೊಂಬೆಗಳನ್ನು ಮಾರುವವರನ್ನು, ಬೊಂಬಾಯಿ ಮಿಠಾಯಿ, ಬೊಂಬಾಯಿ ಖಿಲೋನಾಗಳನ್ನು, ಚಕ್ರ ತಿರುಗಿಸಿ ಒಂದು ಮುಷ್ಟಿ ನೆಲಕಡಲೆ ಗೆಲ್ಲಬಹುದಾದಂತಹ 'ರಷ್ಯನ್ ರೂಲೇ' ಮಾದರಿಯ ಜೂಜಿನ ಚಕ್ರಗಳನ್ನು, ರಟ್ಟಿನ ದೊಡ್ದ ಬೋರ್ಡಿಗೆ ಬಣ್ಣದ ಕಾಗದ ಸುತ್ತಿದ ಚಿಕ್ಕ ಚಿಕ್ಕ ಪೊಟ್ಟಣಗಳನ್ನು ಅಂಟಿಸಿ ಅವುಗಳೊಳಗೆ ಅದೃಷ್ಟದ ಸಂಖ್ಯೆ ಇರಿಸಿ ಬಹುಮಾನ ಗೆಲ್ಲಿಸುವ ಮಂದಿ, ರಿಂಗ್ ಬಿಸಾಡಿ ಸಾಬೂನು, ಸ್ನೋ, ಆಟಿಕೆ, ಬಿಸ್ಕತ್ತಿನ ಪೊಟ್ಟಣ ಇತ್ಯಾದಿಗಳನ್ನು ಗೆಲ್ಲಬಹುದಾದ ಸ್ಟಾಲು,  ಚರುಮುರಿ, ಮುಳ್ಳುಸೌತೆ, ವಿಮ್‍ಟೋ, ಗೋಲಿ ಸೋಡಾ, ಖರ್ಜೂರ ಮಾರುವವರನ್ನು ತದೇಕಚಿತ್ತನಾಗಿ ದೃಷ್ಟಿಸಿ, ಒಂದು ದಿನ ನಾನೂ ಇವರಂತೆ ರಸ್ತೆ ಬದಿ ಸ್ಟಾಲ್ ಇಟ್ಟು ಒಬ್ಬ ದೊಡ್ದ ವ್ಯಾಪಾರಿ ಆಗುವ ಕನಸು ಕಾಣುತ್ತಿದ್ದೆ!

ನನಗೆ ನೆನಪಿದ್ದಂತೆ, ನಾನು 1962ರಿಂದ ಬಲ್ಲಾಳ್‍ಬಾಗ್ ವೀರ ಭವನದಲ್ಲಿನ ನಮ್ಮ ವಾಸದ ಮನೆಯ ಕಂಪೌಂಡ್ ಗೋಡೆಯ ಮೇಲೇರಿ  ಕುಳಿತು ಬಲ್ಲಾಳ್‍ಬಾಗ್ ವೃತ್ತದಲ್ಲಿ ಹತ್ತು ಸಮಸ್ತರು ಸೇರಿ ನಿರ್ಮಿಸಿ ಪೂಜಿಸುತ್ತಿದ್ದ ಗುರ್ಜಿಯನ್ನು ಕಾಣುತ್ತಿದ್ದೇನೆ. ಈ ಗುರ್ಜಿಯ ಮರಮಟ್ಟುಗಳನ್ನು ಲಾಲ್‍ಬಾಗ್ ಸ್ಟೋರ್ ಮಾಲಿಕ ನಾರಾಯಣ ಶೆಟ್ಟಿಯವರ ಕಟ್ಟಿಗೆ ಡಿಪೋ‍ದ ಅಟ್ಟದಲ್ಲಿ ಕೂಡಿಡುತ್ತಿದ್ದರು. 

ಬಲ್ಲಾಳ್‍ಬಾಗ್‍ನಲ್ಲಿ ಅರುವತ್ತರ ದಶಕದ ಕೊನೇಗೆ ಪ್ರಾರಂಭವಾದ 'ಕೊಡಿಯಾಲ್‍ಬೈಲ್ ಯೂತ್ ಕ್ಲಬ್' ದಿಂಡಿನ ವೇಳೆ ಸಕ್ರಿಯವಾಗಿ ಮನೋರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಿ ಸ್ಥಬ್ದಚಿತ್ರವನ್ನು ಸಜ್ಜುಗೊಳಿಸಿ ಭಾರತ ಮಾತೆಯಂತೆ ವೇಷ ಧರಿಸುವ, ಆರ್ಕೆಸ್ಟ್ರಾ ಜೊತೆ ಮೈಕ್‍ನಲ್ಲಿ ಜೋರಾಗಿ "ಅಜ್ಜಾ ಅಜ್ಜಾ....ಈರೆಗ್ ಕೆಬಿ ಕೇಣುಜ್ಜಾ....." ಎಂದು ತೀಸ್ರಿ ಮಂಜಿಲ್ ಸಿನೆಮಾ ಹಾಡಿನ ರಾಗಕ್ಕೆತುಳುವಿನಲ್ಲಿ ಇಂಪಾಗಿ ಹಾಡುವ ರಾಜ್ ನರೇಶ್, 'ಇಸ್ಕ್ ಇಸ್ಕ್....' ಎಂದು ಕೂಗುತ್ತಾ ಡ್ಯಾನ್ಸ್ ಮಾಡುವ ಪೈಲ್ವಾನ್ ಲೂಯಿಸ್, ಪ್ರಕಾಶ, ರಮೇಶ್ ಆಚಾರಿ, ಜಯ, ಕಾಶಿನಾಥ, ಏಕನಾಥ, ರವಿ ಕುಮಾರ, ಗಣೇಶ ಮತ್ತು ಇತರ ಮಿತ್ರರು ನೀಡಿದ ಪುಕ್ಕಟೆ ಮನರಂಜನೆ ಇಂದಿಗೂ ಮರೆತಿಲ್ಲ ನಾನು.

ಮಣ್ಣಗುಡ್ದೆ ಗುರ್ಜಿಯ ಹಿಂಭಾಗದ ಖಾಲಿ ಸ್ಥಳದಲ್ಲಿ ಮರದ ಕುದುರೆ ಮತ್ತು ತಿರುಗು ತೊಟ್ಟಿಲು ಆಟದ ಸಂತೆ ಒಂದು ವಾರ ಮುಂಚಿತವಾಗಿ ಸ್ಥಾಪನೆಯಾಗಿ, ತೆಂಗಿನ ನಾರು ಸಿಕ್ಕಿಸಿ ತೊಟ್ಟಿಲು ತಿರುಗುವಾಗ ಮಾಡುವ ಕುಯ್ಂ.... ಕುಯ್ಂ.... ಕಿರ್ರ್.... ಕಿರ್ರ್.... ಶಬ್ಧವನ್ನು ಕೇಳಿ, ಎಲ್ಲೋ ಅಪರೂಪಕ್ಕೆ ಜೋಕಾಲಿ ಕಂಬ ಮುರಿದು ಬಿದ್ದು ಕೆಲವರು ಆಸ್ಪತ್ರೆ ಸೇರಿದ ಬಗ್ಗೆ ಕೇಳಿ ತಿಳಿದು ಭಯವಿಹ್ವಲನಾಗಿ ಗಡ ಗಡ ನಡುಗಿ, ನಾನಂತೂ ಜನ್ಮದಲ್ಲಿ ತೊಟ್ಟಿಲಿನಲ್ಲಿ ಕೂತುಕೊಳ್ಳುದಿಲ್ಲ ಎಂದು ಶಪಥ ಹಾಕಿದರೂ, ಎರಡೇ ವರ್ಷದಲ್ಲಿ ಆ ಶಪಥವನ್ನು ಮುರಿದು ಧೈರ್ಯ ತುಂಬಿದ ಅನಂತ, ನವೀನ, ರವಿ ಕುಮಾರ ಅವರೊಂದಿಗೆ ಕೂತು, ನಾಲ್ಕು ಸುತ್ತು ಮೇಲೆ ಕೆಳಗೆ ತಿರುಗಿದಾಗ ತಲೆ ಗಿರ್ರನೆ ತಿರುಗಿ, ಮೂರು ಲೋಕ ಕಂಡಂತಾಗಿ, ಹೊಟ್ಟೆ ತೊಳಸಿ ಬಂದರೂ ನಸು ನಕ್ಕು ನಾನು ಸರಿ ಇದ್ದೇನೆಂದು ತೋರಿಸಲು ಜಂಗ್ಲೀ ಸಿನೆಮದ ಶಮ್ಮಿಕಪೂರ್‍ನಂತೆ ಕುಣಿದು ಕುಪ್ಪಳಿಸಿ, ದೇವ್ ಆನಂದ್  ಶೈಲಿಯಲ್ಲಿ ಅತ್ತಿತ್ತ ಓಲಾಡುತ್ತಾ ನಾಲ್ಕು ಹೆಜ್ಜೆ ಓಡಿ, ತೋಡಿಗೆ ಬೀಳುವುದರಿಂದ ಸ್ವಲ್ಪದರಲ್ಲಿ ಪಾರಾದದ್ದೂ ಇದೆ!

ಸಂತೆಗಳ ಪೈಕಿ,  ಚರುಮುರಿ ಸ್ಟಾಲ್ ನನಗೆ ಮತ್ತು ನನ್ನ ಮಿತ್ರರಿಗೆ ಅತ್ಯಂತ ಇಷ್ಟ. ಹಾಗೇ 1971ರಲ್ಲಿ ಒಂದು ದಿನ ನಾವು ಶ್ರೀನಿವಾಸ ಬಲ್ಲಾಳರ ಮನೆಯಲ್ಲಿ ಸೇರಿ  ನಮ್ಮ ಬ್ಲುಮೂನ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದಿಂಡಿನ ದಿನ ಬಲ್ಲಾಳ್‍ಬಾಗ್ ಸರ್ಕಲ್ ಬಳಿ ಒಂದು ಚರುಮುರಿ, ತಂಪು ಪಾನೀಯ ಸ್ಟಾಲ್ ಹಾಕುವುದು, ಎಂದು ನಿರ್ಧಾರ ಕೈಗೊಂಡೆವು. ಅದಕ್ಕಾಗಿ ಹತ್ತು ಪೈಸೆ ಮುಖ ಬೆಲೆಯ ಲಕ್ಕಿಡಿಪ್ ಟಿಕೆಟ್ ಪ್ರಿಂಟ್ ಮಾಡಿಸಿ ಮಾರಿ 60 ರುಪಾಯಿ ಗಳಿಕೆ ಮಾಡಿದೆವು. ಸ್ಟಾಲ್ ಹೇಗಿರಬೇಕು, ಅದರಲ್ಲಿ ಏನೇನು ಮಾರಬೇಕು, ಯಾರ್ಯಾರು ಸಕ್ರಿಯವಾಗಿ ಪಾಲುಗೊಳ್ಳಬೇಕು, ಹಣ ಸ್ವೀಕರಿಸಲು ಯಾರ್ಯಾರು ಪಾಳಿಯಂತೆ ಕುಳಿತುಕೊಳ್ಳಬೇಕು, ಯಾರ್ಯಾರು ದಾರಿಹೋಕರನ್ನು ಪುಸಲಾಯಿಸಿ ನಮ್ಮಲ್ಲಿ ವ್ಯಾಪಾರ ಮಾಡುವಂತೆ ಕರೆತರಬೇಕು, ಮುಂತಾಗಿ ವಿಚಾರ ವಿಮರ್ಷೆ ಮಾಡಿದೆವು.

ನಮ್ಮ ತಂದೆಯವರಿಗೆ 'ಎಸ್ಸೋ ಗ್ಯಾಸ್' ಭಂಡಾರಿಯವರು ನಿಕಟರಾಗಿದ್ದರು. ಹಾಗೇ ಅವರ ಏಜನ್ಸಿಯಲ್ಲಿ ವಿತರಣೆಗೊಳ್ಳುತ್ತಿದ್ದ ಮಣಿಪಾಲದ ತಂಪು ಪಾನೀಯ 'ಬಾಜಲ್' ರಖಂ ಆಗಿ ತರುವುದೆಂದು ನಿರ್ಧಾರವಾಗಿ, ನನ್ನನ್ನು ಆ ಜವಾಬ್ದಾರಿಯಲ್ಲಿ ನಿಯುಕ್ತಿಗೊಳಿಸಿದರು. ನಾನು ದಿಂಡಿನ ಮುಂಚಿನ ದಿನ ಸಂಪತ್ ಬಲ್ಲಾಳ್ ಜೊತೆಗೆ ಕಾರ್‍ನಲ್ಲಿ ಹೋಗಿ 192 ಬಾಜಲ್ ಬಾಟ್ಲಿಗಳ 8 ಪೆಟ್ಟಿಗೆಗಳನ್ನು ತಂದು ನಮ್ಮ ಕಂಪೌಂಡ್‍ನಲ್ಲಿರಿಸಿದೆನು. ಮಿತ್ರ ರಮೇಶ್ ಕಾಮತ್ ಅಂದ, "ಸೆಂಟ್ರಲ್ ವೇರ್‍ಹೌಸ್ ಸಮೀಪ ಒಂದು ಹೊಸ ಮನೆ ಕೆಲಸ ನಡೆಯುತ್ತಿದೆ. ಅಲ್ಲಿಂದ ಮರದ 'ಗುಜ್ಜು'(ಕಂಬ) ತರುವಾ. ನನಗೆ ಮೇಸ್ತ್ರಿಗಳ ಪರಿಚಯ ಉಂಟು". ಹಾಗೇ ನಾವು ನಾಲ್ಕೈದು ಮಿತ್ರರು ಅಲ್ಲಿಗೆ ನಡೆದು ಒಬ್ಬೊಬ್ಬರು ಎರಡೆರಡು ಗುಜ್ಜುಗಳನ್ನು ಎರಡು ಸಲ ಹೋಗಿ ಹೊತ್ತು ತಂದು ಸ್ಟಾಲ್ ನಿರ್ಮಿಸಿ, ಮೇಲೆ ಹೊದಿಸಲು  ಬಾಲಚಂದ್ರನ  ಮುಖಾಂತರ, ನಾರಾಯಣ ಶೆಟ್ಟರ ಲಾರಿಯ ಟಾರ್ಪಾಲು ತರಿಸಿ ಹಾಕಿ ಕಟ್ಟಿ ಭದ್ರಗೊಳಿಸಿದೆವು. 'ಬ್ಲುಮೂನ್ ಸ್ಟಾಲ್' ಎಂದು ಬರೆದ ಒಂದು ಬಟ್ಟೆಯ ಬ್ಯಾನರ್ ಪೈಂಟ್ ಮಾಡಿಸಿ ತಂದು ಕಟ್ಟಿದೆವು. ನಾಲ್ಕು ಟ್ಯೂಬ್‍ಲೈಟ್ ಹಾಗೂ ಗ್ರಾಮೋಫೋನ್, ಮಣ್ಣಗುಡ್ದೆಯಲ್ಲಿನ 'ಸುವರ್ಣ ಸೌಂಡ್ ಸಿಸ್ಟಮ್'ನಿಂದ ಬಾಡಿಗೆಗೆ ಪಡೆದೆವು. ಎಲ್ಲಿಂದಲೋ ಒಂದು ಐಸ್ ಬಾಕ್ಸ್ ತರಿಸಿ ಮಂಜುಗೆಡ್ದೆ ಹಾಕಿ ಬಾಜಲ್ ಬಾಟ್ಲಿಗಳನ್ನು ಅದರಲ್ಲಿರಿಸಿದೆವು.

ದಿಂಡಿನ ದಿನ ಸಾಯಂಕಾಲ ನಾಲ್ಕು ಗಂಟೆಗೆ ಶುರುವಾಯಿತು, ನಮ್ಮ ಚರುಮುರಿ, ಸೌತೆಕಾಯಿ, ಮಿಕ್ಶ್ಚರ್, ನೆಲಕಡಲೆ, ಬಾಜಲ್ ಸ್ಟಾಲ್! ಸಂಪತ್, ವಿಶ್ವನಾಥ, ಮಹಾವೀರ ಕ್ಯಾಶ್ ಜವಾಬ್ದಾರಿ ತಗೊಂಡು, ನಾನು, ಅನಂತ, ರಮೇಶ, ದೇವೇಂದ್ರ ಚರುಮುರಿ, ಸೌತೆಕಾಯಿ, ತಯಾರಿಸುವ ಕೆಲಸ ವಹಿಸಿಕೊಂಡು, ರಾಜಾರಾಮ, ತಾರಾನಾಥ, ಪ್ರೇಮ್‍ನಾಥ, ಬಾಲಚಂದ್ರ ಮತ್ತಿತರರು ಗಿರಾಕಿಗಳನ್ನು ಓಲೈಸಿ, ಆರ್ಡರ್ ಪಡೆದು ಸಪ್ಲೈ ಮಾಡುವ ಮುತ್ತುವರ್ಜಿಯನ್ನು ವಹಿಸಿಕೊಂಡರು. ಅಂತೂ ನಮ್ಮ ಬ್ಲುಮೂನ್ ಸ್ಟಾಲ್ ಅಂದು ಸಾಯಂಕಾಲದಿಂದ ಮಧ್ಯ ರಾತ್ರಿ ವರೆಗೆ ಚೆನ್ನಾಗಿ ವ್ಯಾಪಾರ ಮಾಡಿತು. ನಮ್ಮ ಮನೆಯವರು ಕಂಪೌಂಡ್ ಗೋಡೆ ಬಳಿ ನಿಂತು ನನ್ನನ್ನು ಸನ್ನೆ ಮಾಡಿ ಕರೆದು ಏನೆಲ್ಲಾ ಐಟಂ ಉಂಟೆಂದು ಕೇಳಿ ಚರುಮುರಿ ಆರ್ಡರ್ ಮಾಡಿದ್ದು, ನಮ್ಮಮ್ಮ "ಸ್ವಲ್ಪ ಉಪ್ಪು ಜಾಸ್ತಿಯಾಯಿತು, ಆದರೂ ಪರವಾಗಿಲ್ಲ" ಎಂದು ಸಮಾಧಾನ ಪಡಿಸಿದ್ದು, 8:00 ಗಂಟೆ ಹೊತ್ತಿಗೆ ಬಾಜಲ್ ಎಲ್ಲಾ ಖಾಲಿ ಆಗಿ ನಾನು ಮತ್ತು ಸಂಪತ್ ಪುನಃ ಭಂಡಾರಿಯವರಲ್ಲಿಗೆ ಹೋಗಿ ಸ್ಟಾಕ್ ತಂದದ್ದು, ಮರೆಯುವಂತಿಲ್ಲ!

ಮಾರನೇ ದಿನ ಎಲ್ಲಾ ಮಿತ್ರರು ಸೇರಿ, ವ್ಯಾಪಾರ ಮಾಡುವ ಪ್ರಥಮ ಅನುಭವದೊಂದಿಗೆ, ಖರ್ಚು ಮತ್ತು ಲಾಭಾಂಶ ಲೆಕ್ಕ ಹಾಕಿದಾಗಲೇ ತಿಳಿದದ್ದು, ನಾವು ಒಂದು ನಯಾಪೈಸೆ ಲಾಭ ಮಾಡಿಲ್ಲವೆಂದು! ಕಾರಣ, ನಮ್ಮ ಆದಾಯ ಅಂದು 90 ರುಪಾಯಿ, ಖರ್ಚು 60 ರುಪಾಯಿ ಮತ್ತು ಬಂದ ಲಾಭಾಂಶ 30 ರುಪಾಯಿ ಎಲ್ಲೋ ಸೋರಿ ಹೋಗಿ ಲೆಕ್ಕ ಸಿಗದೇ ಆದ ಲಾಭ ಅಥವಾ ನಷ್ಟ ಶೂನ್ಯ! ಕ್ಯಾಶ್ ಜವಾಬ್ದಾರಿ ಹೊತ್ತ ಸಂಪತ್, ವಿಶ್ವನಾಥ, ಮಹಾವೀರ ಅಲ್ಲದೇ ರಾತ್ರಿ ಪಾಳಿಯಲ್ಲಿ ಜನಜಂಗುಳಿ ಸೇರಿದಾಗ ಆದ ಗೊಂದಲದಲ್ಲಿ, ಕ್ಯಾಶ್‍ಬಾಕ್ಸ್ ನೋಡಿಕೊಳ್ಳಲು ಕುಳಿತವರು ಇನ್ನ್ಯಾರೋ ಇಬ್ಬರು. ಅವರಿಬ್ಬರ ಹೆಸರು ಇಲ್ಲಿ ಉಲ್ಲೇಖಿಸುವುದು ತರವಲ್ಲ. ಆ ಇಬ್ಬರಲ್ಲಿ ಯಾರು ಆ 30 ರುಪಾಯಿ ಜೇಬಿಗಿಳಿಸಿದ್ದರೆಂಬುದನ್ನು ಕಂಡು ಹಿಡಿಯಲು ಅಂದು ಅವರು ದೇವರಾಣೆಯಿಟ್ಟು ಅಲ್ಲಗೆಳೆದ ಕಾರಣ, ನಂತರ ಅವರಲ್ಲೊಬ್ಬನು ಹಲವು ದಿನ ಸ್ವೇಚ್ಛೆಯಾಗಿ ರಾಜನಂತೆ ದುಡ್ದು ಖರ್ಚು ಮಾಡಿ ಐಷಾರಾಮ ಜೀವನ ನಡೆಸಿದರೂ, ಅವನ ಮೇಲೆ ಆಪಾದನೆ ಹೊರಿಸಲು ಇಂದಿಗೂ ಸಾಧ್ಯವಾಗಿಲ್ಲ! ಆ ನಂತರ ಚರುಮುರಿ ಮಾರುವ, ಅಥವಾ ಇತರ ಯಾವುದೇ ಸ್ಟಾಲ್ ಹಾಕುವ ಪ್ರಯತ್ನವನ್ನು ಬ್ಲುಮೂನ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ನಾವು ಮಾಡಿಲ್ಲ. 14 ವರ್ಷ ಪ್ರಾಯದಲ್ಲಿ,  ಜೀವನದಲ್ಲಿ ಪ್ರಥಮ ಸ್ಟಾಲ್ ಇಟ್ಟು ಚರುಮುರಿ ತಯಾರಿಸಿ, ಸೌತೆಕಾಯಿ ಹೋಳು ಮಾಡಿ ಉಪ್ಪು ಖಾರ ಲಿಂಬೆರಸ ಹಚ್ಚಿ ಕೊಟ್ಟು, ಮಿಕ್ಸ್ಚರ್, ನೆಲಕಡಲೆ ಬಾಜಲ್ ಮಾರುವ ವ್ಯಾಪಾರ ನಡೆಸಿದ ಉಲ್ಲಾಸ, ಹೆಗ್ಗಳಿಕೆ, ಅಭಿಮಾನ, ಹೆಮ್ಮೆ ನನ್ನಲ್ಲಿ ಇಂದಿಗೂ ಬತ್ತಿಲ್ಲ!