Tuesday, January 13, 2015

ಹೀಗೊಂದು ಕೇಸರಿಭಾತ್ ಪ್ರಸಂಗ!

ಚಿತ್ರ ಕೃಪೆ: en.wikipedia.org 
ಎಂದೆಂದಿಗೂ ಮರೆಯಲಾಗದ ದಿನವದು!

1979 ಜನವರಿ 9ನೇ ತಾರೀಕು. ಹೊಸದಾಗಿ ಬ್ಯಾಂಕ್ ನೌಕರಿ ಸೇರಲು ಪ್ರಥಮ ಬಾರಿಗೆ ಮೈಸೂರಿನಿಂದ ಚಾಮರಾಜನಗರಕ್ಕೆ ಪ್ಯಾಸೆಂಜರ್ ರೈಲುಬಂಡಿಯಲ್ಲಿ ಪ್ರಯಾಣಿಸಿದ ನಾನು, 9:30ಕ್ಕೆ ಚಾಮರಾಜನಗರ ರೈಲು ನಿಲ್ದಾಣ ತಲುಪಿದೆ. ಅದಾಗಲೇ 3-4 ಬ್ಯಾಂಕ್ ನೌಕರರ ಪರಿಚಯವಾಗಿತ್ತು ಪ್ರಯಾಣಿಸುವಾಗ. ಸಂಪತ್ ಕೃಷ್ಣ ಮತ್ತು ಬಂಡೇರಾಯ ನನ್ನ ಜೊತೆ ಅಂಟಿಕೊಂಡು ರೈಲ್ವೇ ಸ್ಟೇಶನ್ ನಿಂದ ಬಜಾರ್ ಬೀದಿ ವರೆಗೆ ನನ್ನನ್ನು ಮುನ್ನಡೆಸಿಕೊಂಡು ಬಂದರು.

"ಟಿಫನ್ ಮಾಡೋಣಾ ಶೆಣೈಯವರೇ?" ಹೋಟೆಲ್ ಆನಂದ್ ಬಳಿ ತಲಪಿದಾಗ ಸಂಪತ್ ಕೃಷ್ಣ ಕೇಳಿದರು. ಹಸಿವೆಯಿಂದ ಕಂಗಾಲಾಗಿದ್ದ ನಾನು ಕೂಡಲೆ ಒಪ್ಪಿದೆ ಹಾಗೂ ನಾವು ಮೂವರು ಹೋಟೆಲ್ ಒಳಗಡೆ ನಡೆದೆವು.

ಸೆಗಣಿ, ಸುಣ್ಣ ಬಳಿದ ಮಣ್ಣಿನ ಗೋಡೆಗಳು, ಗ್ಲಾಸ್ ಹಂಚಿನೆಡೆಯಿಂದ ತೂರಿ ಬಂದ ಸೂರ್ಯನ ಕಿರಣಗಳು, ಹರಕು ಮುರುಕು ಮರದ ಬೆಂಚು ಟೇಬಲ್ ಗಳು, ಅಲ್ಯುಮೀನಿಯಂ ನೀರಿನ ಮಡಕೆ, ಶಿಲೆ ಕಲ್ಲಿನ ನೆಲ....ಅಲ್ಲದೇಪೀಸಾದ ವಾಲುವ ಗೋಪುರವನ್ನು ಹೋಲುವ, 20 ವರ್ಷ ಮಿಕ್ಕಿದ ಎಣ್ಣೆ ಪಸೆ ಹಿಡಿದ ಗಾಜಿನ ಬಾಗಿಲುಗಳು ಹಾಗೂ ಕಿಲುಬು ತಾಗಿದ ಹ್ಯಾಂಡಲ್ ಬೀಜಾಗ್ರಿ ಇದ್ದತೈಲ ಜನಿತ ತಿಂಡಿಶೇಖರಿಸುವ ಕಪಾಟು ಇವಿಷ್ಟು ನನಗೆ ಮೊದಲ ದೃಷ್ಟಿ ಬೀರುವಾಗ ಗೋಚರಕ್ಕೆ ಬಂದ, ಹೋಟೆಲ್ ಆನಂದ್ ಮೇಲ್ಮೈ ಲಕ್ಷಣಗಳು!

ಬಿಳಿ ಧೋತಿ ಉಟ್ಟು ಬಿಳಿ ಶರ್ಟ್ ಹಾಕಿ, ಕೆಂಪು ಪಟ್ಟೆಯ ಬಿಳಿ ಖದ್ದರ್ ಅಂಗವಸ್ತ್ರವನ್ನು ಹೆಗಲ ಮೇಲೆ ಹಾಕಿ, ಕ್ಯಾಶ್ ಕೌಂಟರಿನಲ್ಲಿ ಕುಳಿತು ಕಣ್ಣು ಸಪೂರ ಮಾಡಿ ನನ್ನನ್ನೇ ದೃಷ್ಟಿಸುತ್ತಿರುವ ಸುಮಾರು ಐವತ್ತೈದು ವರ್ಷ ಪ್ರಾಯದ ವ್ಯಕ್ತಿಯೊಬ್ಬರಿಗೆ ನನ್ನ ಪರಿಚಯ ಮಾಡಿ ಕೊಡುತ್ತಾ ಸಂಪತ್ ಕೃಷ್ಣ "ಇವರು ಶೆಣೈ ಅಂತ...ನಿಮ್ಮ ಮಂಗ್ಳೂರು ಕಡೆಯವ್ರು. ಹೊಸದಾಗಿ ಸೇರ್ತಾ ಇದಾರೆ ಬ್ಯಾಂಕ್ ಗೆ. ಇನ್ನು ದಿವ್ಸಾ ಬೆಳಿಗ್ಯೆ ನಿಮ್ ಹೋಟಲ್ ನಲ್ಲಿ ಇವ್ರ ಮೊಕ್ಕಾಂ! ಶೆಣೈ....ಇವ್ರು ಹೋಟಲ್ ಮಾಲಿಕ್ರು ರಾಮಕೃಷ್ಣ ರಾಯರು. ಇವ್ರು ಉಡುಪಿ ಕಡೆಯವ್ರು."

ನಾನಂದೆ "ನಮಸ್ಕಾರ. ನಾನು ಮಂಗಳೂರಿಂದ ಬಂದದ್ದು. ಇವತ್ತು ಕೆಲಸಕ್ಕೆ ಸೇರ್ಲಿಕ್ಕೆ".

ಆಗ ಹೋಟೆಲ್ ಮಾಲಕರ ಇಬ್ಬರು ಮಗಂದಿರು ಎಲ್ಲಿಂದಲೋ ಪ್ರತ್ಯಕ್ಷರಾಗಿ ಮೂವತ್ತೆರಡು ಕಿಸಿದು ನಕ್ಕು, ಕಿರಿಯ ಮಗ ಹೇಳಿದ್ರು "ಶೆಣೈಯವರೇ, ಇದು ನಮ್ಮಣ್ಣ ಮುರಲಿ ಮತ್ತು ನಾನು ಆನಂದ್. ನಮ್ಮ ಮನೆ ಮಾತು ತುಳು ಆದ್ರೂ ನಮಗೆ ತುಳು ಅಷ್ಟು ಚೆನ್ನಾಗಿ ಬರಲ್ಲಾ. ಇಲ್ಲೇ ಹುಟ್ಟಿ ಬೆಳೆದವರು ನೋಡಿ!"

ನಾನು ಪರವಾಗಿಲ್ಲ, ನನಗೆ ಕನ್ನಡ ಚೆನ್ನಾಗಿ ಬರುತ್ತೆ ಎಂದು ಅವರನ್ನು ಸಮಾಧಾನ ಪಡಿಸಿದೆ. ಮತ್ತೆ ತಿನ್ನಲು ಏನು ತಗೋತೀರಾ ಎಂದು ಕೇಳಲು.... "ಬಿಸಿ ಬಿಸಿ ಏನಾದ್ರೂ ಕೊಡಿ. ಈಗ ಜನವರಿ ಚಳಿ... ನನ್ಗೆ ಸ್ವಲ್ಪ ಶೀತ ಜ್ವರ ಬೇರೆ ಉಂಟು!" ಎಂದೆ.

ಆನಂದ್- "ಬಿಸಿ ಬಿಸಿ ಕೇಸ್ರಿ ಭಾತ್ ಮತ್ತು ಇಡ್ಲಿ ಸಾಂಬಾರ್ ಕೊಡೋಣಾ. ಸೆಟ್ ದೋಸೆ ಇದೆ. ದೋಸೆ ರೆಡಿ ಮಾಡ್ಲಿಕ್ಕೆ ಸ್ವಲ್ಪ ಹೊತ್ತಾಗುತ್ತೆ!"

ಆಚೆ ಕ್ಯಾಶ್ ಕೌಂಟರ್ ನಿಂದ ಜೋರಾಗಿ ಅರಚಿದರು ರಾಮಕೃಷ್ಣ ರಾಯರು "....ಯಾರೋ ಅಲ್ಲಿ....ಕೇಸರಿ ಭಾತ್ ಗೆ ಸ್ವಲ್ಪ ತುಪ್ಪ ಹಾಕೋ!"

ಮುಸಿ ಮುಸಿ ನಗುತ್ತಾ ಸಂಪತ್ ಕೃಷ್ಣ ಹಾಗೂ ಬಂಡೇರಾಯ ಪಿಸುಗುಟ್ಟಿದರು "ತುಪ್ಪ ಅಂದ್ರೆ ಬೆಣ್ಣೆ ಕಾಸಿ ಮಾಡಿದ ತುಪ್ಪ ಅಂದ್ಕೋಬೇಡಿ. ಡಾಲ್ಡಾ ಸುರೀತಾರೆ! ನೀವು ಮೊದಲ್ನೇ ಸಾರಿ ಬರೋದ್ರಿಂದ ಸ್ವಲ್ಪ ಸ್ಪೆಶಲ್ ಟ್ರೀಟ್ಮೆಂಟ್. ನಾಳೆ ಏನಾದ್ರೂ ಕೇಸರಿಭಾತ್ ತಕ್ಕೋಂಡ್ರಾ....ತಣ್ಣಗಾದ ಹೆಂಚಿನ್ ತುಂಡು ತಿಂದಂಗಾಯ್ತದೆ ಅಷ್ಟೇ!"

ಅವರು ಅಂದ ಹಾಗೇ, ಕ್ಷಾಮ ಡಾಮರಗಳಿಂದ ಪೀಡಿತ ಉತ್ತರ ಕರ್ನಾಟಕದ ಪ್ರದೇಶ ಗುಳೇದಗುಡದಲ್ಲಿನ ಗದ್ದೆಯ ಒಣ ಮಣ್ಣಿನ ಗಟ್ಟಿಗಳ ಮೇಲೆ, ಬೆಂಗಳೂರು ಬೊಂಬಾಯಿ ವಿಮಾನ ಹಾರುತ್ತಾ ಹಾದು ಹೋಗುವಾಗ ಬಿದ್ದ ನಾಲ್ಕು ಹನಿ ನೀರು ಸುರಿದಂತೆ ಕಾಣಿಸುವ, ಚಂದ್ರಲೋಕದ ಮಣ್ಣಿನ ಬಣ್ಣವನ್ನು ಹೋಲುವ ಏನೋ ವಸ್ತುವನ್ನು, ಅಲ್ಯುಮೀನಿಯಂ ಪ್ಲೇಟ್ ಮೆಲೆ ಪತ್ರಾವಳಿಯ ಎಲೆಯನ್ನು ಇಟ್ಟು ಅದರ ಮೇಲೆ ಪೇರಿಸಿಟ್ಟು, ಕಪ್ಪುಗಟ್ಟಿದ ಮೊಂಡು ಅಲ್ಯುಮೀನಿಯಂ ಚಮಚವನ್ನು ನೆಟ್ಟು ತಂದಿಟ್ಟರು, ಆನಂದ್!

ನಿರಾಶೆಯ ಭಾವದಿಂದ ನನ್ನ ಮುಖವು ಗ್ರೇಟ್ ಡೇನ್ ನಾಯಿಯ ಗಲ್ಲದಂತೆ ಜೋತು ಬಿದ್ದರೂ ಕೈಕೊಟ್ಟು ನೆಟ್ಟಗೆ ನಿಲ್ಲಿಸುವ ಪ್ರಯತ್ನ ಮಾಡುತ್ತಾ, ಆಗಾಗ ಸಂಪತ್ ಕೃಷ್ಣ, ಬಂಡೇರಾಯ, ಮುರಲಿ ಹಾಗೂ ಆನಂದ ಸಹಿತ ರಾಮಕೃಷ್ಣ ರಾಯರು ಮತ್ತವರ ಟೇಬಲ್ ವರೆಸುವ ಮಾಣಿಯ, ಕುದುರೆಗಿಂತ ಸ್ವಲ್ಪ ಕಿರಿದಾದ ಮೂತಿಯನ್ನು ನೋಡುತ್ತಾ, ಉಗುಳು ನುಂಗುತ್ತಾ, ಅಳು ಬಂದರೂ ತಡೆದುಕೊಂಡು, ವಿಷಾದದ ಛಾಯೆಯುಳ್ಳ ಕೃತಕ ಮುಗುಳು ನಗೆ ನಗುತ್ತಾ, ಕೇಸರಿಭಾತ್ ಎಂಬ ಹೆಸರಿನ ಅದ್ಭುತ ಲೋಹ, ಇಂಜಿನ್ ಆಯಿಲ್ ಮಿಶ್ರಿತ ಹಂಚಿನ ಕಾರಖಾನೆಯ ಮಣ್ಣನ್ನು ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದಂತೆ ಮೊಂಡು ಅಲ್ಯುಮೀನಿಯಂ ಚಮಚೆಯ ಸಹಾಯದಿಂದ ತುರುಕಿ, ಗುಳುಂಕರಿಸಿ ನೀರು ಕುಡಿದೆ!