Showing posts with label Bank Job. Show all posts
Showing posts with label Bank Job. Show all posts

Monday, February 2, 2015

ಒಂದು ನಿಮಿಷ ನಿಲ್ಲಿ!

Pic source: www.youtube.com
’ಒಂದು ನಿಮಿಷ ನಿಲ್ಲಿ’ ಎಂಬುದು ನಮ್ಮ ಕನ್ನಡನಾಡಿನ ದೈನಂದಿಕ ಜೀವನದ ಅವಿಭಾಜ್ಯ ಸಂದೇಶ. ಇದೊಂದು ಅಪ್ಪಣೆ, ಆಜ್ಞೆ ಅಥವಾ ಸೂಚನೆ ಅಲ್ಲದಿದ್ದರೂ ಅನಿರ್ವಾಹ ಪರಿಸ್ಥಿತಿಯಲ್ಲಿ, ಅವಸರದಲ್ಲಿದ್ದವರನ್ನು ಸಮಾಧಾನ ಪಡಿಸಿ ಸುಮ್ಮನೆ ನಿಲ್ಲಿಸುವ ಸಂದೇಶ ವಾಣಿಯಂತೂ ಹೌದು!

ಈ ಒಂದು ನಿಮಿಷದಲ್ಲಿ ಎಷ್ಟು ಕ್ಷಣಗಳು, ಎಷ್ಟು ನಿಮಿಷಗಳು, ಎಷ್ಟು ಘಂಟೆಗಳು, ಎಷ್ಟು ದಿನಗಳು, ವರುಷಗಳಿವೆಯೋ ಆಯಾಯ ಸಂದರ್ಭಕ್ಕನುಸಾರವಾಗಿ ನಾವು  ಅತ್ಯಂತ ಸಹನೆ, ತಾಳ್ಮೆಗಳೊಂದಿಗೆ ಅನಾಯಾಸವಾಗಿ ಕಳೆದು ನಮ್ಮ ಜೀವನವನ್ನು ಸಾರ್ಥಕಗೊಳಿಸುತ್ತೇವೆ!

1990ರ ದಶಕದಲ್ಲಿ ನಾನು ಬ್ಯಾಂಕ್ ಉದ್ಯೋಗಿಯಾಗಿದ್ದಾಗ ಒಂದು ಸೋಮವಾರ ಬೆಳಿಗ್ಯೆ ನಡೆದ ಸಂಗತಿ. ನಾನು ಕ್ಯಾಶಿಯರ್ ಆಗಿ ಪಾವತಿ ಗೂಡಿನಲ್ಲಿ(ಪೇಮೆಂಟ್ ಕೌಂಟರ್) ಇದ್ದೆ. ಸ್ವೀಕೃತಿ ಗೂಡಿನಲ್ಲಿದ್ದ ನನ್ನ ಸಹೋದ್ಯೋಗಿ, ಸುಂದರ ರಾವಣನ ದಾಯಾದಿ, ತನ್ನ ಸುಖವೇ ಪರರ ಸುಖವೆಂದು ನಂಬಿಕೊಂಡಿದ್ದವ, 11:15ರ ಹೊತ್ತಿಗೆ ಹಠಾತ್ ಗೂಡಿನ ಬಾಗಿಲು ಮುಚ್ಚಿ ಹೊರ ಬಂದು ಬ್ಯಾಂಕ್ ಪ್ರವೇಶ ದ್ವಾರವನ್ನೇ ದಿಟ್ಟಿಸುತ್ತ ನಿಂತನು! ಹನುಮಂತನ ಬಾಲದಂತೆ ಬೆಳೆದು ನಿಂತಿದ್ದ ಕ್ಯಾಶ್ ತುಂಬಿಸಲು ಬಂದ ಜನರ ಸಾಲು ಬೆಚ್ಚಿ ಬಿದ್ದು ಸನ್ನೆ ಮೂಲಕ ’ಕ್ಯಾಶ್ ಒಮ್ಮೆ ತಕ್ಕೊಳ್ಳಿ ಮ್ಹಾರಾಯರೇ’ ಎಂದು ಅವನಿಗೆ ಹೇಳಲು ಪ್ರಯತ್ನಿಸಿತು. ಅವನು ವಾರೆ ದೃಷ್ಟಿಯಿಂದಲೂ ಅತ್ತ ನೋಡದೇ ನಿರ್ಲಿಪ್ತನಾಗಿ ಹೇಳಿದನು,

"ಒಂದು ನಿಮಿಷ ನಿಲ್ಲಿ!"

ಆ ಒಂದು ನಿಮಿಷ ಬಿಟ್ಟು ಐದು, ಹತ್ತು, ಹದಿನೈದು ನಿಮಿಷ ಕಳೆದರೂ ಅವನು ಅಲ್ಲೇ ನಿಂತಿದ್ದ ಮತ್ತು ಜನರ ಸಾಲು ಇನ್ನೂ ಉದ್ದ ಬೆಳೆದು ಅದಾಗಲೇ 25-30 ಜನ ಸರತಿ ಸಾಲಿನಲ್ಲಿ ಆಕಳಿಸುತ್ತಾ, ಹಣದ ಚೀಲವನ್ನು ಯಾರಾದರೂ ಲಪಟಾಯಿಸಿಯಾರೇ ಎಂಬ ಭಯದಿಂದ ಕುಂಕುಳಲ್ಲಿ ಇನ್ನೂ ಭದ್ರವಾಗಿ ಅದುಮಿ ಹಿಡಿದು ಬೆರಗಾಗಿ ನೋಡುತ್ತಾ ಇದ್ದಾರೆ!

ಒಬ್ಬ ಧೈರ್ಯದಿಂದ ಮುಂದೆ ಬಂದು ಕೇಳಿದ "ಎಂಥ ಅವಸ್ಥೆ ಮ್ಹಾರ್ರೆ! ನಿಮ್ಮ ಒಂದು ನಿಮಿಷ ಎಂದು 15 ನಿಮಿಷ ಆಯ್ತು. ಬಾಗಿಲು ಎಂಥದು ನೋಡುದು ನೀವು? ಬೀಜಾಗ್ರಿ ಸರಿ ಮಾಡಲಿಕ್ಕೆ ಉಂಟೋ?"

ಕ್ಯಾಶಿಯರ್ ಮಹಾಶಯ: "ಸ್ವಲ್ಪ ನಿಲ್ಲಿ. ಒಂದು ನಿಮಿಷ ನಿಲ್ಲಿ. ಕಾಪಿ ಬರ್ತದೆ!"

ಪ್ರಶ್ನೆ ಕೇಳಿದವ ತುಸು ಉಲ್ಲಾಸದಿಂದ ಅಗಲವಾಗಿ ನಕ್ಕು ಸರತಿಯ ಸಾಲಿಗೆ ಮರಳಿದ. ಹೀಗೆ ಬಂದವರಿಗೆಲ್ಲಾ ಉಚಿತ ಕಾಫಿ ಸೇವೆ ಪ್ರಾರಂಭಿಸಿದ ಬಗ್ಗೆ ಆನಂದ ತುಂದಿಲನಾದಂತೆ ತೋರಿದವ, ಹಿಂದೆ ಮುಂದೆ ನಿಂತವರ ಕಿವಿಯಲ್ಲಿ ಏನೋ ಹೇಳಿ ಮುಗುಳ್ನಕ್ಕ. ಅವರೂ ಮುಖ ತುಂಬಾ ಹರುಷದ ಚಿಹ್ನೆ ತೋರಿಸಿ ಕ್ಯಾಶಿಯರ್ ಮಹಾಶಯನತ್ತ ನೋಡಿ "ಆಗಲಿ ಆಗಲಿ....ಒಂದಲ್ಲ ಹತ್ತು ನಿಮಿಷ ಹೋಗಲಿ...ಬಂದವರಿಗೆಲ್ಲಾ ಕಾಫಿ ಕುಡಿಸುವ ನಿಮ್ಮಂತಹವರು ದಿನಕ್ಕೆ ನೂರರಂತೆ  ಹುಟ್ಟಲಿ!" ಎಂದು ಹರಸಿದರು!

ಸರಿಯಾಗಿ 20 ನಿಮಿಷ ನಂತರ ಗಣೇಶ್ ಪ್ರಸಾದ್ ಹೋಟಲ್ ಹುಡುಗ ಒಂದು ಟ್ರೇ‍ನಲ್ಲಿ ತಿಂಡಿ ಪೊಟ್ಟಣಗಳು ಹಾಗೂ ಫ್ಲಾಸ್ಕ್ ನಲ್ಲಿ ಕಾಫಿ, ಚಹಾ ಹೊತ್ತುಕೊಂಡು ಬಂದು ಕೌಂಟರ್ ಹಿಂಭಾಗ ಇದ್ದ ಮೇಜೊಂದರ ಮೇಲೆ ಕುಕ್ಕಿದನು. ನಮ್ಮ ಕ್ಯಾಶಿಯರ್ ಮಹಾಶಯ ಮತ್ತು ಇನ್ನಿತರ 10-12 ಬ್ಯಾಂಕ್ ಸಿಬ್ಬಂದಿ ಕಾಗೆಗಳಂತೆ ಬುರ್ರನೆ ಹಾರಿ ಅವನ ಮೇಲೆ ಮುಗಿಬಿದ್ದರು!

ಕ್ಯಾಶಯರ್ ಮಹಾಶಯ ಮುಂದಿನ 10 ನಿಮಿಷಗಳು ಗೋಳಿಬಜೆ ಅಗಿದು ಕಾಫಿ ಸೇವಿಸುವ ಸುಖದಲ್ಲಿ ಕಳೆದು, ನಂತರ ಚೊಕ್ಕವಾಗಿ ಸಾಬೂನು ಹಾಕಿ ಕೈ ಮುಖ ತೊಳೆದು, ತಲೆಕೂದಲು ಬಾಚಿ, ಒಂದು ಬೀಡಿ ಸೇದಿ ಕ್ಯಾಶ್ ಕೌಂಟರ್‍ಗೆ ಮರಳುವಾಗಲೇ ಸಾಲಿನಲ್ಲಿ ನಿಂತಿದ್ದ ಹತಾಶ ವ್ಯಕ್ಟಿಗಳಿಗೆ ತಿಳಿದ ಎರಡು ಮುಖ್ಯ ವಿಚಾರಗಳು:

1. ಒಂದು ನಿಮಿಷದಲ್ಲಿ ಸಮಾನ್ಯವಾಗಿ 35-40 ನಿಮಿಷಗಳಿವೆ.
2.  "ಸ್ಕಲ್ಪ ನಿಲ್ಲಿ, ಕಾಪಿ ಬರುತ್ತದೆ" ಎಂಬುದು, ’ಕಾಫಿ ಬರುತ್ತದೆ ತನಗೆ, ಕಾದು ನಿಲ್ಲುವ ಕೆಲಸ ನಿನಗೆ’ ಎಂದರ್ಥ! 

Tuesday, January 13, 2015

ಹೀಗೊಂದು ಕೇಸರಿಭಾತ್ ಪ್ರಸಂಗ!

ಚಿತ್ರ ಕೃಪೆ: en.wikipedia.org 
ಎಂದೆಂದಿಗೂ ಮರೆಯಲಾಗದ ದಿನವದು!

1979 ಜನವರಿ 9ನೇ ತಾರೀಕು. ಹೊಸದಾಗಿ ಬ್ಯಾಂಕ್ ನೌಕರಿ ಸೇರಲು ಪ್ರಥಮ ಬಾರಿಗೆ ಮೈಸೂರಿನಿಂದ ಚಾಮರಾಜನಗರಕ್ಕೆ ಪ್ಯಾಸೆಂಜರ್ ರೈಲುಬಂಡಿಯಲ್ಲಿ ಪ್ರಯಾಣಿಸಿದ ನಾನು, 9:30ಕ್ಕೆ ಚಾಮರಾಜನಗರ ರೈಲು ನಿಲ್ದಾಣ ತಲುಪಿದೆ. ಅದಾಗಲೇ 3-4 ಬ್ಯಾಂಕ್ ನೌಕರರ ಪರಿಚಯವಾಗಿತ್ತು ಪ್ರಯಾಣಿಸುವಾಗ. ಸಂಪತ್ ಕೃಷ್ಣ ಮತ್ತು ಬಂಡೇರಾಯ ನನ್ನ ಜೊತೆ ಅಂಟಿಕೊಂಡು ರೈಲ್ವೇ ಸ್ಟೇಶನ್ ನಿಂದ ಬಜಾರ್ ಬೀದಿ ವರೆಗೆ ನನ್ನನ್ನು ಮುನ್ನಡೆಸಿಕೊಂಡು ಬಂದರು.

"ಟಿಫನ್ ಮಾಡೋಣಾ ಶೆಣೈಯವರೇ?" ಹೋಟೆಲ್ ಆನಂದ್ ಬಳಿ ತಲಪಿದಾಗ ಸಂಪತ್ ಕೃಷ್ಣ ಕೇಳಿದರು. ಹಸಿವೆಯಿಂದ ಕಂಗಾಲಾಗಿದ್ದ ನಾನು ಕೂಡಲೆ ಒಪ್ಪಿದೆ ಹಾಗೂ ನಾವು ಮೂವರು ಹೋಟೆಲ್ ಒಳಗಡೆ ನಡೆದೆವು.

ಸೆಗಣಿ, ಸುಣ್ಣ ಬಳಿದ ಮಣ್ಣಿನ ಗೋಡೆಗಳು, ಗ್ಲಾಸ್ ಹಂಚಿನೆಡೆಯಿಂದ ತೂರಿ ಬಂದ ಸೂರ್ಯನ ಕಿರಣಗಳು, ಹರಕು ಮುರುಕು ಮರದ ಬೆಂಚು ಟೇಬಲ್ ಗಳು, ಅಲ್ಯುಮೀನಿಯಂ ನೀರಿನ ಮಡಕೆ, ಶಿಲೆ ಕಲ್ಲಿನ ನೆಲ....ಅಲ್ಲದೇ ’ಪೀಸಾದ ವಾಲುವ ಗೋಪುರ’ವನ್ನು ಹೋಲುವ, 20 ವರ್ಷ ಮಿಕ್ಕಿದ ಎಣ್ಣೆ ಪಸೆ ಹಿಡಿದ ಗಾಜಿನ ಬಾಗಿಲುಗಳು ಹಾಗೂ ಕಿಲುಬು ತಾಗಿದ ಹ್ಯಾಂಡಲ್ ಬೀಜಾಗ್ರಿ ಇದ್ದ ’ತೈಲ ಜನಿತ ತಿಂಡಿ’ ಶೇಖರಿಸುವ ಕಪಾಟು ಇವಿಷ್ಟು ನನಗೆ ಮೊದಲ ದೃಷ್ಟಿ ಬೀರುವಾಗ ಗೋಚರಕ್ಕೆ ಬಂದ, ಹೋಟೆಲ್ ಆನಂದ್ ನ ಮೇಲ್ಮೈ ಲಕ್ಷಣಗಳು!

ಬಿಳಿ ಧೋತಿ ಉಟ್ಟು ಬಿಳಿ ಶರ್ಟ್ ಹಾಕಿ, ಕೆಂಪು ಪಟ್ಟೆಯ ಬಿಳಿ ಖದ್ದರ್ ಅಂಗವಸ್ತ್ರವನ್ನು ಹೆಗಲ ಮೇಲೆ ಹಾಕಿ, ಕ್ಯಾಶ್ ಕೌಂಟರಿನಲ್ಲಿ ಕುಳಿತು ಕಣ್ಣು ಸಪೂರ ಮಾಡಿ ನನ್ನನ್ನೇ ದೃಷ್ಟಿಸುತ್ತಿರುವ ಸುಮಾರು ಐವತ್ತೈದು ವರ್ಷ ಪ್ರಾಯದ ವ್ಯಕ್ತಿಯೊಬ್ಬರಿಗೆ ನನ್ನ ಪರಿಚಯ ಮಾಡಿ ಕೊಡುತ್ತಾ ಸಂಪತ್ ಕೃಷ್ಣ "ಇವರು ಶೆಣೈ ಅಂತ...ನಿಮ್ಮ ಮಂಗ್ಳೂರು ಕಡೆಯವ್ರು. ಹೊಸದಾಗಿ ಸೇರ್ತಾ ಇದಾರೆ ಬ್ಯಾಂಕ್ ಗೆ. ಇನ್ನು ದಿವ್ಸಾ ಬೆಳಿಗ್ಯೆ ನಿಮ್ ಹೋಟಲ್ ನಲ್ಲಿ ಇವ್ರ ಮೊಕ್ಕಾಂ! ಶೆಣೈ....ಇವ್ರು ಹೋಟಲ್ ಮಾಲಿಕ್ರು ರಾಮಕೃಷ್ಣ ರಾಯರು. ಇವ್ರು ಉಡುಪಿ ಕಡೆಯವ್ರು."

ನಾನಂದೆ "ನಮಸ್ಕಾರ. ನಾನು ಮಂಗಳೂರಿಂದ ಬಂದದ್ದು. ಇವತ್ತು ಕೆಲಸಕ್ಕೆ ಸೇರ್ಲಿಕ್ಕೆ".

ಆಗ ಹೋಟೆಲ್ ಮಾಲಕರ ಇಬ್ಬರು ಮಗಂದಿರು ಎಲ್ಲಿಂದಲೋ ಪ್ರತ್ಯಕ್ಷರಾಗಿ ಮೂವತ್ತೆರಡು ಕಿಸಿದು ನಕ್ಕು, ಕಿರಿಯ ಮಗ ಹೇಳಿದ್ರು "ಶೆಣೈಯವರೇ, ಇದು ನಮ್ಮಣ್ಣ ಮುರಲಿ ಮತ್ತು ನಾನು ಆನಂದ್. ನಮ್ಮ ಮನೆ ಮಾತು ತುಳು ಆದ್ರೂ ನಮಗೆ ತುಳು ಅಷ್ಟು ಚೆನ್ನಾಗಿ ಬರಲ್ಲಾ. ಇಲ್ಲೇ ಹುಟ್ಟಿ ಬೆಳೆದವರು ನೋಡಿ!"

ನಾನು ಪರವಾಗಿಲ್ಲ, ನನಗೆ ಕನ್ನಡ ಚೆನ್ನಾಗಿ ಬರುತ್ತೆ ಎಂದು ಅವರನ್ನು ಸಮಾಧಾನ ಪಡಿಸಿದೆ. ಮತ್ತೆ ತಿನ್ನಲು ಏನು ತಗೋತೀರಾ ಎಂದು ಕೇಳಲು.... "ಬಿಸಿ ಬಿಸಿ ಏನಾದ್ರೂ ಕೊಡಿ. ಈಗ ಜನವರಿ ಚಳಿ... ನನ್ಗೆ ಸ್ವಲ್ಪ ಶೀತ ಜ್ವರ ಬೇರೆ ಉಂಟು!" ಎಂದೆ.

ಆನಂದ್- "ಬಿಸಿ ಬಿಸಿ ಕೇಸ್ರಿ ಭಾತ್ ಮತ್ತು ಇಡ್ಲಿ ಸಾಂಬಾರ್ ಕೊಡೋಣಾ. ಸೆಟ್ ದೋಸೆ ಇದೆ. ದೋಸೆ ರೆಡಿ ಮಾಡ್ಲಿಕ್ಕೆ ಸ್ವಲ್ಪ ಹೊತ್ತಾಗುತ್ತೆ!"

ಆಚೆ ಕ್ಯಾಶ್ ಕೌಂಟರ್ ನಿಂದ ಜೋರಾಗಿ ಅರಚಿದರು ರಾಮಕೃಷ್ಣ ರಾಯರು "ಏ....ಯಾರೋ ಅಲ್ಲಿ....ಕೇಸರಿ ಭಾತ್ ಗೆ ಸ್ವಲ್ಪ ತುಪ್ಪ ಹಾಕೋ!"

ಮುಸಿ ಮುಸಿ ನಗುತ್ತಾ ಸಂಪತ್ ಕೃಷ್ಣ ಹಾಗೂ ಬಂಡೇರಾಯ ಪಿಸುಗುಟ್ಟಿದರು "ತುಪ್ಪ ಅಂದ್ರೆ ಬೆಣ್ಣೆ ಕಾಸಿ ಮಾಡಿದ ತುಪ್ಪ ಅಂದ್ಕೋಬೇಡಿ. ಡಾಲ್ಡಾ ಸುರೀತಾರೆ! ನೀವು ಮೊದಲ್ನೇ ಸಾರಿ ಬರೋದ್ರಿಂದ ಸ್ವಲ್ಪ ಸ್ಪೆಶಲ್ ಟ್ರೀಟ್ಮೆಂಟ್. ನಾಳೆ ಏನಾದ್ರೂ ಕೇಸರಿಭಾತ್ ತಕ್ಕೋಂಡ್ರಾ....ತಣ್ಣಗಾದ ಹೆಂಚಿನ್ ತುಂಡು ತಿಂದಂಗಾಯ್ತದೆ ಅಷ್ಟೇ!"

ಅವರು ಅಂದ ಹಾಗೇ, ಕ್ಷಾಮ ಡಾಮರಗಳಿಂದ ಪೀಡಿತ ಉತ್ತರ ಕರ್ನಾಟಕದ ಪ್ರದೇಶ ಗುಳೇದಗುಡದಲ್ಲಿನ ಗದ್ದೆಯ ಒಣ ಮಣ್ಣಿನ ಗಟ್ಟಿಗಳ ಮೇಲೆ, ಬೆಂಗಳೂರು ಬೊಂಬಾಯಿ ವಿಮಾನ ಹಾರುತ್ತಾ ಹಾದು ಹೋಗುವಾಗ ಬಿದ್ದ ನಾಲ್ಕು ಹನಿ ನೀರು ಸುರಿದಂತೆ ಕಾಣಿಸುವ, ಚಂದ್ರಲೋಕದ ಮಣ್ಣಿನ ಬಣ್ಣವನ್ನು ಹೋಲುವ ಏನೋ ವಸ್ತುವನ್ನು, ಅಲ್ಯುಮೀನಿಯಂ ಪ್ಲೇಟ್ ಮೆಲೆ ಪತ್ರಾವಳಿಯ ಎಲೆಯನ್ನು ಇಟ್ಟು ಅದರ ಮೇಲೆ ಪೇರಿಸಿಟ್ಟು, ಕಪ್ಪುಗಟ್ಟಿದ ಮೊಂಡು ಅಲ್ಯುಮೀನಿಯಂ ಚಮಚವನ್ನು ನೆಟ್ಟು ತಂದಿಟ್ಟರು, ಆನಂದ್!

ನಿರಾಶೆಯ ಭಾವದಿಂದ ನನ್ನ ಮುಖವು ಗ್ರೇಟ್ ಡೇನ್ ನಾಯಿಯ ಗಲ್ಲದಂತೆ ಜೋತು ಬಿದ್ದರೂ ಕೈಕೊಟ್ಟು ನೆಟ್ಟಗೆ ನಿಲ್ಲಿಸುವ ಪ್ರಯತ್ನ ಮಾಡುತ್ತಾ, ಆಗಾಗ ಸಂಪತ್ ಕೃಷ್ಣ, ಬಂಡೇರಾಯ, ಮುರಲಿ ಹಾಗೂ ಆನಂದ ಸಹಿತ ರಾಮಕೃಷ್ಣ ರಾಯರು ಮತ್ತವರ ಟೇಬಲ್ ವರೆಸುವ ಮಾಣಿಯ, ಕುದುರೆಗಿಂತ ಸ್ವಲ್ಪ ಕಿರಿದಾದ ಮೂತಿಯನ್ನು ನೋಡುತ್ತಾ, ಉಗುಳು ನುಂಗುತ್ತಾ, ಅಳು ಬಂದರೂ ತಡೆದುಕೊಂಡು, ವಿಷಾದದ ಛಾಯೆಯುಳ್ಳ ಕೃತಕ ಮುಗುಳು ನಗೆ ನಗುತ್ತಾ, ಕೇಸರಿಭಾತ್ ಎಂಬ ಹೆಸರಿನ ಆ ಅದ್ಭುತ ಲೋಹ, ಇಂಜಿನ್ ಆಯಿಲ್ ಮಿಶ್ರಿತ ಹಂಚಿನ ಕಾರಖಾನೆಯ ಮಣ್ಣನ್ನು ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದಂತೆ ಮೊಂಡು ಅಲ್ಯುಮೀನಿಯಂ ಚಮಚೆಯ ಸಹಾಯದಿಂದ ತುರುಕಿ, ಗುಳುಂಕರಿಸಿ ನೀರು ಕುಡಿದೆ!