Pic source: www.pixabay.com |
ತಲೆ ಬರಹ ನೋಡಿ, "ಮಹಾಲಯಕ್ಕೂ,
ಪಿತೃಪಕ್ಷಕ್ಕೂ, ಹಸಿ ಶುಂಠಿಗೂ ಅದೆತ್ತಣ ಸಂಬಂಧವೈಯ್ಯಾ?"
ಎಂದು ಯೋಚಿಸಿ
ತಲೆ ಸ್ವಲ್ಪ
ಗಿರ್ರೆನ್ನಬಹುದು. ಆದರೆ ಮಹಾಲಯ, ಪಿತೃಪಕ್ಷ ಮತ್ತು
ಅವಲಕ್ಕಿ ತಿನ್ನೋಣ,
ಇವು ಮೂರು
ನಮ್ಮ ಗೌಡ
ಸಾರಸ್ವತ ಬ್ರಾಹ್ಮಣ
ಸಮುದಾಯದಲ್ಲಿ ಒಂದರೊಂದಿಗೊಂದು ಬೆಸೆದು, ಆ ಆಚರಣೆಗಳು
ಅನಾದಿ ಕಾಲದಿಂದ
ಆಸ್ತಿಕರ ದೃಷ್ಟಿಯಲ್ಲಿ
ಅಪ್ಯಾಯಮಾನವಾಗಿವೆ. ಹಸಿಶುಂಠಿ ಯಾಕೆ ಇಲ್ಲಿ ಸೇರಿಕೊಂಡಿತು
ಅನ್ನುವ ಬಗ್ಗೆ
ಚಿಕ್ಕಂದಿನಲ್ಲಿ ನಡೆದ ವಿಷಯವನ್ನು ಹೇಳಿದರೆ ಆಗದೇ?
ಸರಿ, ಓದಿ.
ಮಹಾಲಯ, ಪಿತೃಪಕ್ಷಾಚರಣೆಗಳು ಗೊತ್ತಿಲ್ಲದ ನನಗೆ ಚಿಕ್ಕಂದಿನಲ್ಲಿ ಅವಲಕ್ಕಿ
ತಿನ್ನುವುದರಲ್ಲಿ ಆಸಕ್ತಿ ತುಸು ಜಾಸ್ತಿ. ಯಾಕಂದರೆ
ಕಂಠಪೂರ್ತಿ ತಿಂಡಿ
ತಿಂದ ಅನುಭವ
ಸಿಗಲು ಅವಲಕ್ಕಿಯಂತಹ
ಉಪಹಾರ ಬೇರೊಂದಿಲ್ಲ.
ನಡೆದಾಡಿ ಊರಿಡೀ
ಸುತ್ತುವ, ಆಟವಾಡಿ
ದಣಿದು ಬಳಲಿ
ಹಸಿವ ಜೀವಕ್ಕೆ
ಬೆಲ್ಲ, ತೆಂಗಿನ
ತುರಿಯೊಂದಿಗೆ ಚಿಟಿಕೆ ಏಲಕ್ಕಿ ಪುಡಿ ಸೇರಿಸಿ
ಅವಲಕ್ಕಿಯೊಂದಿಗೆ ಬೆರೆಸಿ ತಿನ್ನಲು ಅತೀವ ಆನಂದ.
'ಸಿಹಿ' ಎಂದರೆ
'ಅವಲಕ್ಕಿ' ಅನ್ನುವುದು
ಗೌಡ ಸಾರಸ್ವತ
ಬ್ರಾಹ್ಮಣ ಕುಟುಂಬಗಳಲ್ಲಿ
ಸಾಮಾನ್ಯ, ಆ
ದಿನಗಳಲ್ಲಿ!
ನಮ್ಮ ನೆರೆಕರೆಯ ವಾಸುದೇವ
ಪೈಗಳ ಮಕ್ಕಳು,
ಮಿತ್ರರಾದ ವೇಣುಗೋಪಾಲ,
ವೆಂಕಟೇಶ ಮತ್ತು
ಅನಂತ ನಮ್ಮ
ಮನೆಗೆ ಆಟವಾಡಲು
ಬರುತ್ತಿದ್ದರು. ಹಾಗೇ ಅವರ ಮನೆಗೆ ನಾವೂ
ಆಡಲು ಹೋಗುತ್ತಿದ್ದೆವು. ಆ
ಸಂಬಂಧದಿಂದಾಗಿ ನಮ್ಮ ಕುಟುಂಬಕ್ಕೆ ಅವರ ಕುಟುಂಬ ಸಮೀಪವಾಗಿ, ಮಹಾಲಯದ ಪಿತೃಪಕ್ಷದಲ್ಲಿ
ಅವರ ಹಿರಿಯರ
ಪ್ರೇತಾತ್ಮವನ್ನು ಸಂತುಷ್ಟಿಗೊಳಿಸಲು ಚಿಕ್ಕ ಮಕ್ಕಳನ್ನು ಮನೆಗೆ
ಆಹ್ವಾನಿಸಿ ಸಿಹಿ
ಅವಲಕ್ಕಿ ಹಾಗೂ
ಇತರ ಭಕ್ಷ್ಯಗಳನ್ನು
ಬೇಕೆನಿಸುವಷ್ಟು ತಿನಿಸಿ ಕಳಿಸುವ ಸಂಪ್ರದಾಯವನ್ನು, ಅಷ್ಟೇನೂ
ಸ್ಥಿತಿವಂತರಲ್ಲದಿದ್ದರೂ ಅವರು ನಡೆಸಿಕೊಂಡು
ಬಂದಿದ್ದರು.
ನಾನಂತೂ ತುದಿಗಾಲಲ್ಲಿ ಆ
ದಿನದ ನಿರೀಕ್ಷೆ
ಮಾಡಿ ಕಾದಿರುತ್ತಿದ್ದೆನು,
ಬರೇ ಆ
ತಿಂಡಿಗಾಗಿ ಮಾತ್ರವಲ್ಲ,
ಪೈಗಳ ಮನೆಯಲ್ಲಿ
ನನಗೆ ಸಿಗುತ್ತಿದ್ದ
ಆದರ, ಮಮತೆಗಳಿಗಾಗಿಯೂ
ಹೌದು! ಅವರ
ಮಾತುಗಳಲ್ಲಿ ಕಪಟವಿರುತ್ತಿರಲಿಲ್ಲ. ನೇರವಾದ ನಡೆ ನುಡಿ
ಹೊಂದಿದ್ದ ತಂದೆ,
ತಾಯಿ ಮತ್ತು
6 ಮಂದಿ ಮಕ್ಕಳು
ನನ್ನನ್ನು ತಮ್ಮ
ಕುಟುಂಬದವನಂತೇ ಪ್ರೀತಿಸುತ್ತಿದ್ದರು. ಅವಲಕ್ಕಿ
ತಿನ್ನುವ ದಿನ
ಹತ್ತಿರ ಬಂದಂತೆ
ಅನಂತ, ವೆಂಕಟೇಶ, ವಿಜಯಾ, ಶ್ಯಾಮಲ, ಶಾಲಿನಿ
ಶಾಲೆಯಲ್ಲಿ, ದಾರಿಯಲ್ಲಿ
ಭೇಟಿಯಾದಾಗ, ಆಡುವಾಗ, ಪದೇ ಪದೇ ನನ್ನನ್ನು
ನೆನಪಿಸಿ "ಖಂಡಿತ ಬರ್ತಿಯಲ್ಲ! ಮರಿಬೇಡಾ....!" ಎನ್ನುತ್ತಿದ್ದರು. ಎರಡು ದಿನ ಮುಂಚೆ
ಅವರಮ್ಮ ನಮ್ಮಲ್ಲಿಗೆ
ಬಂದು, ನಮ್ಮಮ್ಮನನ್ನು
ಮುಖತಃ ಭೇಟಿಯಾಗಿ,
ನಮ್ಮನ್ನು ಮಕ್ಕಳನ್ನು
ಅವಲಕ್ಕಿ ತಿನ್ನುವ
ಕಾರ್ಯಕ್ರಮಕ್ಕೆ ಕಳುಹಿಸಿ ಕೊಡಲು ವಿನಂತಿಸುತ್ತಿದ್ದರು.
ಯಾವತ್ತೂ ಬೆಳಿಗ್ಯೆ ಬೇಗ
ಎದ್ದು ಅಭ್ಯಾಸವಿರದ
ನನಗೆ, ಬೇಗ
ಏಳಬೇಕೆಂಬ ಕಾಳಜಿಯಿಂದ ರಾತ್ರಿ
ಸರಿಯಾಗಿ ನಿದ್ರೆ
ಬಾರದೆಯೋ, ಅಥವಾ
ಪೈಗಳ ಮನೆಯ
ಸಮ್ಮಾನ ಊಹಿಸಿಯೋ
ಗೊತ್ತಿಲ್ಲ, ಮಹಾಲಯದ ಆ ಒಂದು ದಿನ ಬೆಳಿಗ್ಯೆ
ಆರು ಘಂಟೆಗೇ
ಎಚ್ಚರವಾಗುತ್ತಿತ್ತು! ಎದ್ದು ಪ್ರಾತಃಕಾಲದ
ವಿಧಿ ಮುಗಿಸಿ
ಮಿಂದು ಚೊಕ್ಕವಾಗಿ
ಚಡ್ಡಿ ಅಂಗಿ
ತೊಟ್ಟು, ಅಚ್ಚುಕಟ್ಟಾಗಿ
ಎಣ್ಣೆ
ಹಾಕಿ ತಲೆ ಬಾಚಿ, ಹೊರಟು, ಅಮ್ಮ
ಮತ್ತು ಹಿರಿಯ
ಸಹೋದರರ ಮುಂದೆ
ಸಂಭಾವಿತನಂತೆ ಮೆಲ್ಲಮೆಲ್ಲಗೆ ಅಡಿಯಿಟ್ಟು ಕಂಪೌಂಡ್ ಗೇಟು
ದಾಟಿದೊಡನೆಯೇ ದಾಪುಗಾಲಿಟ್ಟು ಧಾವಿಸಿ, ಒಂದು ಫರ್ಲಾಂಗ್
ದೂರವಿದ್ದ ಪೈಗಳ
ಮನೆಯನ್ನು ಎರಡು
ನಿಮಿಷದೊಳಗೆ ಸೇರುತ್ತಿದ್ದೆನು! ಅಣ್ಣ ರಾಧಾಕಾಂತ ನನ್ನ
ಹಿಂದೆ ಬರುತ್ತಿದ್ದವ,
"ಏಯ್! ಹಾಗೆ ಓಡಬೇಡ. ಸ್ವಲ್ಪ ಮೆಲ್ಲಗೆ
ಹೋಗು. ಹೊಟ್ಟೆಗೆ
ಹಾಕದವನಂತೆ ತೋರಿಸಿಕೊಂಡು
ಮನೆಯ ಮರ್ಯಾದೆ
ತೆಗಿಬೇಡ. ಅನಂತನ
ಮನೆಯವರು ದುರಾಸೆ
ಎಂದು ತಿಳಿದುಕೊಂಡಾರು
ಹೇಸಿಗೆ!" ಎಂದು ನನಗೆ ಜೋರು
ಮಾಡುತ್ತಿದ್ದ! ಅದ್ಯಾವುದನ್ನೂ
ಲೆಕ್ಕಿಸೆದ ನಾನು
ಓಡಿ ಮೊದಲು
ಅವರ ಮನೆ
ಸೇರಿ, ಜಗಲಿಯಲ್ಲಿ ಈಸಿ ಚೇಯರ್‍ನಲ್ಲಿ
ವಿಶ್ರಮಿಸಿ ನವಭಾರತ
ಪತ್ರಿಕೆ ಓದುತ್ತಿದ್ದ
ಪೈಗಳ ಸಮೀಪ
ಕುಳಿತುಕೊಳ್ಳುತ್ತಿದ್ದೆ.
ಅವರು ಸಪೂರ ಕಣ್ಣುಗಳೆಡೆಯಿಂದ
ನನ್ನನ್ನು ದೃಷ್ಟಿಸಿ,
ನಸು ನಕ್ಕು
ಆತ್ಮೀಯತೆಯಿಂದ "ಹೇಗಿದ್ದಿಯಾ ಮಗೂ?
ಒಬ್ಬನೇ ಬಂದಿಯಾ.... ಅಣ್ಣಂದಿರು ಬಂದಿದ್ದಾರೋ?"
ಎಂದು ಮಾತನಾಡುವುದನ್ನು
ಕೇಳಿ ತಲೆದೂಗಿ,
ನನ್ನ ಮೊದ್ದು
ಮಾತುಗಳಿಂದ ಉತ್ತರ
ನೀಡಿ ಖುಷಿ
ಪಟ್ಟುಕೊಳ್ಳುತ್ತಿದ್ದೆ. ಪೈಗಳು ಮಡದಿಯನ್ನು
ಗಟ್ಟಿ ಸ್ವರದಿಂದ
ಕರೆದು "ಹೌದಾ.....! ತಿಂಡಿ ತಯಾರುಂಟೋ? ನೊಡು
ರಜನಿ ಬಂದಿದ್ದಾನೆ!
ಅನಂತ, ವಿಜಯಾ, ಶ್ಯಾಮಲ,
ಶಾಲಿನಿಯನ್ನು ಹೊರ ಬರಲು ಹೇಳು. ಮಕ್ಕಳು
ಒಬ್ಬರೊಂದಿಗೊಬ್ಬರು ಮಾತನಾಡಿ ಆಡಿ ಖುಷಿಯಿಂದಿರಲಿ!" ಎನ್ನುತ್ತಿದ್ದರು. ಆಗ ಅಡುಗೆ ಕೋಣೆಯಿಂದ
ಕೀರಲು ಸ್ವರ,
"ಸ್ವಲ್ಪ ನಿಲ್ಲಿ ಅಂದ್ರೆ! ಐದು ನಿಮಿಷ
ನಿಲ್ಲಿ. ಬಿಸಿ
ಬಿಸಿ ಇಡ್ಲಿ
ತಯಾರಾಗ್ತಾ ಉಂಟು.
ಗಡಿಬಿಡಿ ಮಾಡಿದ್ರೆ....ಅರ್ಧ ಬೆಂದು
ಪಿಚಿಪಿಚಿ. ಹಾಂ!
ರಜನೀ...ಸ್ವಲ್ಪ
ಕೂತುಕೋ ಮಗಾ...ಬಂದೆ, ಆಯ್ತಾ!"
ಕಾಯಲು ತಾಳ್ಮೆ ಇಲ್ಲದಿದ್ದರೂ
ದೇಶಾವರಿ ನಗೆ
ಬೀರಿ "ಚಿಂತಿಲ್ಲ ಚಿಂತಿಲ್ಲ" ಎನ್ನುತ್ತಿದ್ದೆ.
ಒಮ್ಮೆ, ಹೊಸದಾಗಿ ಬೆಂಗಳೂರಲ್ಲಿ ಕೆನರಾ
ಬ್ಯಾಂಕ್‍ನಲ್ಲಿ ಉದ್ಯೋಗಕ್ಕೆ
ಸೇರಿ ಪಿತೃಪಕ್ಷಕ್ಕೆಂದೇ
ಊರಿಗೆ ಬಂದ
ವೆಂಕಟೇಶ ತನ್ನ
ಹೊಸ 'ಹೆಚ್.ಎಂ.ವಿ. ಕ್ಯಾಲಿಪ್ಸೋ' ಗ್ರಾಮೋಫೋನ್ ನನಗೆ
ತೋರಿಸಿ, 45 RPM ರೆಕಾರ್ಡ್ ಆಡಿಸಿ, ಲಿಟ್ಲ್ ರಿಚಾರ್ಡ್
ಕಿರುಚಾಡಿ ಕೂಗಿ
ಹಾಡುವ 'ಲೂಸಿ' ಪೊಪ್ ಹಾಡನ್ನು ನುಡಿಸಿ ತೋರಿಸಿ,
ತೋರು ಬೆರಳಿನಿಂದ
ಫಕ್ಕನೇ ಗ್ರಾಮೋಫೋನ್‍ನ
ಸೂಜಿಕೈಯನ್ನು
ಚಾಣಕ್ಯತೆಯಿಂದ ಮೇಲೆ ಹಾರಿಸಿ, ಹಿಡಿದು ಅದರ
ಉಯ್ಯಾಲೆಯಲ್ಲಿ ಮಲಗಿಸುವುದನ್ನು ಕಂಡು ಬೆರಗಾಗಿದ್ದೆ!
ಕೊನೆಗೂ ನೆಲದಲ್ಲಿ ಚಾಪೆ
ಹಾಕಿಸಿ ನನ್ನನ್ನು,
ನನ್ನ ಅಣ್ಣಂದಿರು ಕಮಲಾಕಾಂತ ಮತ್ತು
ರಾಧಾಕಾಂತನನ್ನು ತಮ್ಮ ಮಕ್ಕಳೊಂದಿಗೆ ಕೂರಿಸಿ ನಮ್ಮ
ಮುಂದೆ ಪ್ಲೇಟ್
ಇಟ್ಟು ಸಿಹಿ
ಅವಲಕ್ಕಿ, ಅದಾಗಲೇ
ಬೇಯಿಸಿ ಹಬೆಯಾಡುವ
ಬಿಸಿ ಬಿಸಿ
ಇಡ್ಲಿ ಬಡಿಸಿ,
ನೀರು ಚಟ್ನಿ
ಸುರಿದು "ತಿನ್ನಿ ಮಕ್ಕಳೇ, ತಿನ್ನಿ....ಹೊಟ್ಟೆ ತುಂಬಾ
ತಿನ್ನಿ,. ದಾಕ್ಷಿಣ್ಯ
ಮಾಡಬೇಡಿ..." ಎಂದು ಹೇಳಿ ನಮ್ಮ ಎದುರು
ಕುಳಿತು ನಾವು
ಗಬಗಬನೇ ತಿನ್ನುವುದನ್ನೇ
ದೃಷ್ಟಿಸಿ ಸಂತೃಪ್ತಿಯ
ನಸುನಗೆ ಬೀರುತ್ತಿದ್ದಳು
ಆ ತಾಯಿ!
"ಇನ್ನೆರಡು ಸನ್ನಣ
ತಿನ್ನು! ಎರಡೇ
ಎರಡು ತಿಂದರೆ
ಎಲ್ಲಿ ಸಾಕು?
ನೀವು ಬೆಳೆಯುವ
ಪ್ರಾಯದ ಮಕ್ಕಳು.
ಗಟ್ಟಿ ತಿನ್ನಬೇಕು"
ಎಂದು ಹೇಳುವಾಗ
ನಾನು ಮತ್ತು
ರಾಧಾಕಾಂತ ಮುಖ
ಮುಖ ನೋಡಿ
ಅಸಹಾಯಕರಾಗಿ "ಬೇಡ...ನಾವು ತಿನ್ನುವುದೇ ಇಷ್ಟು,
ದಾಕ್ಷಿಣ್ಯ ಅಲ್ಲ,
ಸಾಕು" ಎನ್ನುತ್ತಿದ್ದೆವು. ಕಾರಣ, ಅವರು ಚಟ್ನಿಗೆ
ನಮಗಾಗದ ಒಂದು
ವಸ್ತು ಸೇರಿಸಿ
ಅರೆಯುತ್ತಿದ್ದರು.
ಅದು ಹಸಿಶುಂಠಿ!
ಹೌದು. ನಮ್ಮಮ್ಮ ಯಾವತ್ತೂ ಚಟ್ನಿಗೆ ಹಸಿಶುಂಠಿ ಬೆರೆಸುತ್ತಿರಲಿಲ್ಲ. ನಮಗೆ ಅಂತಹ ಚಟ್ನಿ ತಿಂದು ಅಭ್ಯಾಸವಿಲ್ಲ ಮಾತ್ರವಲ್ಲ, ಬಿಸಿ ಬಿಸಿ ಸ್ಪಂಜಿನಂತೆ ಮೃದುವಾದ, ಅವರ ಭಾಷೆಯಲ್ಲಿ ಸನ್ನಣ, ಹಾಗೂ ನಮ್ಮ ಅರಿವಿನಲ್ಲಿ ಇಡ್ಲಿ ತಿನ್ನುವ ನಮ್ಮ ಹುಮ್ಮಸ್ಸು ಜರ್ರನೆ ಇಳಿದು ನಾವು ಒಂದು ತರಹ ಕಕ್ಕಾಬಿಕ್ಕಿಯಾಗುತ್ತಿದ್ದೆವು! ಪ್ರತೀ ವರುಷ ಆ ದಿನಕ್ಕೆ ಎದುರು ನೋಡುತ್ತಿದ್ದ ನನಗೆ ಒಂದು ವರ್ಷ ಅವರು ಹಸಿಶುಂಠಿ ಹಾಕದೇ ಚಟ್ನಿ ಮಾಡುವರೋ ಎಂಬ ಆಸೆ, ನಿರೀಕ್ಷೆ.
ಅದು ಹಸಿಶುಂಠಿ!
ಹೌದು. ನಮ್ಮಮ್ಮ ಯಾವತ್ತೂ ಚಟ್ನಿಗೆ ಹಸಿಶುಂಠಿ ಬೆರೆಸುತ್ತಿರಲಿಲ್ಲ. ನಮಗೆ ಅಂತಹ ಚಟ್ನಿ ತಿಂದು ಅಭ್ಯಾಸವಿಲ್ಲ ಮಾತ್ರವಲ್ಲ, ಬಿಸಿ ಬಿಸಿ ಸ್ಪಂಜಿನಂತೆ ಮೃದುವಾದ, ಅವರ ಭಾಷೆಯಲ್ಲಿ ಸನ್ನಣ, ಹಾಗೂ ನಮ್ಮ ಅರಿವಿನಲ್ಲಿ ಇಡ್ಲಿ ತಿನ್ನುವ ನಮ್ಮ ಹುಮ್ಮಸ್ಸು ಜರ್ರನೆ ಇಳಿದು ನಾವು ಒಂದು ತರಹ ಕಕ್ಕಾಬಿಕ್ಕಿಯಾಗುತ್ತಿದ್ದೆವು! ಪ್ರತೀ ವರುಷ ಆ ದಿನಕ್ಕೆ ಎದುರು ನೋಡುತ್ತಿದ್ದ ನನಗೆ ಒಂದು ವರ್ಷ ಅವರು ಹಸಿಶುಂಠಿ ಹಾಕದೇ ಚಟ್ನಿ ಮಾಡುವರೋ ಎಂಬ ಆಸೆ, ನಿರೀಕ್ಷೆ.
ನಾನು ಬೆಳೆದು ಕಾಲೇಜು
ಹಂತಕ್ಕೆ ತಲುಪಿ,
ಮಹಾಲಯದ ಪಿತೃಪಕ್ಷದಲ್ಲಿ
ನಡೆಯುವ ಅವಲಕ್ಕಿ
ತಿನ್ನುವ ಕಾರ್ಯಕ್ರಮಕ್ಕೆ
ಹೋಗುವುದನ್ನು ನಿಲ್ಲಿಸುವ ವರೆಗೂ ನನ್ನ ನಿರೀಕ್ಷೆ
ಸತ್ಯವಾಗಲಿಲ್ಲ! ಅವರು ಚಟ್ನಿಗೆ ಹಸಿಶುಂಠಿ ಹಾಕುವುದು ತಪ್ಪಲಿಲ್ಲ. ವಾಸುದೇವ ಪೈಗಳ ಮನೆ ಮಂದಿಯ ಪ್ರೀತಿ,
ಮಮತೆ, ಆದರಗಳಿಂದಲೇ
ಹೊಟ್ಟೆ ತುಂಬಿಸಿಕೊಂಡು
ಸಂತೃಪ್ತನಾಗುವುದನ್ನು ತಪ್ಪಿಸಿಕೊಳ್ಳಲಾಗಲಿಲ್ಲ.
-------------------------------------------------
ಕೊನೇಯ ಮಾತು:
ಇತ್ತೀಚೆಗೆ ಶಾಲಿನಿಯನ್ನು ಭೇಟಿಯಾಗಿದ್ದೆ. ಹಳೇ ನೆನಪುಗಳನ್ನು ಕೆದಕುವಾಗ ಅವರ ತವರು ಮನೆಯಲ್ಲಿ, ಮಹಾಲಯದಲ್ಲಿ ಅವಲಕ್ಕಿ ತಿನ್ನುವ ಕಾರ್ಯಕ್ರಮದ ಬಗ್ಗೆ ಉಲ್ಲೇಖ ಬಂದಿತ್ತು, ಆದರೆ ಶುಂಠಿ ಬೆರೆಸಿದ ಚಟ್ನಿ ಬಗ್ಗೆ ನಾನು ತುಟಿ ಪಿಟಕ್ಕೆನ್ನಲಿಲ್ಲ. ಇಂದು ಅವರು ಈ ಲೇಖನವನ್ನೋದಿ, ಅವರಮ್ಮ ಚಟ್ನಿಗೆ ಶುಂಠಿ ಬೆರೆಸಲು ಕಾರಣವೇನೆಂದು ತಮ್ಮ ಪುತ್ರಿ ಸಹನಾ ಮುಖಾಂತರ ತಿಳಿಸಿದರು. ಪಿತೃ ಪಕ್ಷದಲ್ಲಿ ಬೆಲ್ಲ ಮತ್ತು ಶುಂಠಿ, ಈ ಎರಡು ಸಾಮಗ್ರಿಗಳು ಅಡುಗೆಯಲ್ಲಿ ಪ್ರಮುಖವಾಗಿ ಬಳಸಬೇಕೆಂಬ ಶಾಸ್ತ್ರವಿರುವುದರಿಂದ ಚಟ್ನಿಗೆ ಶುಂಠಿ ಬೆರೆಸುತ್ತಿದ್ದರೆಂಬ ಸತ್ಯ ನನಗಿಂದು ಮನವರಿಕೆಯಾಯಿತು!
-------------------------------------------------
ಕೊನೇಯ ಮಾತು:
ಇತ್ತೀಚೆಗೆ ಶಾಲಿನಿಯನ್ನು ಭೇಟಿಯಾಗಿದ್ದೆ. ಹಳೇ ನೆನಪುಗಳನ್ನು ಕೆದಕುವಾಗ ಅವರ ತವರು ಮನೆಯಲ್ಲಿ, ಮಹಾಲಯದಲ್ಲಿ ಅವಲಕ್ಕಿ ತಿನ್ನುವ ಕಾರ್ಯಕ್ರಮದ ಬಗ್ಗೆ ಉಲ್ಲೇಖ ಬಂದಿತ್ತು, ಆದರೆ ಶುಂಠಿ ಬೆರೆಸಿದ ಚಟ್ನಿ ಬಗ್ಗೆ ನಾನು ತುಟಿ ಪಿಟಕ್ಕೆನ್ನಲಿಲ್ಲ. ಇಂದು ಅವರು ಈ ಲೇಖನವನ್ನೋದಿ, ಅವರಮ್ಮ ಚಟ್ನಿಗೆ ಶುಂಠಿ ಬೆರೆಸಲು ಕಾರಣವೇನೆಂದು ತಮ್ಮ ಪುತ್ರಿ ಸಹನಾ ಮುಖಾಂತರ ತಿಳಿಸಿದರು. ಪಿತೃ ಪಕ್ಷದಲ್ಲಿ ಬೆಲ್ಲ ಮತ್ತು ಶುಂಠಿ, ಈ ಎರಡು ಸಾಮಗ್ರಿಗಳು ಅಡುಗೆಯಲ್ಲಿ ಪ್ರಮುಖವಾಗಿ ಬಳಸಬೇಕೆಂಬ ಶಾಸ್ತ್ರವಿರುವುದರಿಂದ ಚಟ್ನಿಗೆ ಶುಂಠಿ ಬೆರೆಸುತ್ತಿದ್ದರೆಂಬ ಸತ್ಯ ನನಗಿಂದು ಮನವರಿಕೆಯಾಯಿತು!
No comments:
Post a Comment