Thursday, October 22, 2015

"ತಿಕ್ಕಿನಾತ್ ಪೆಜ್ಜುಗಾ"(ಸಿಕ್ಕಿದಷ್ಟು ಹೆಕ್ಕುವಾ)

Pic source: www.ajeyarao.com
"ತಿಕ್ಕಿನಾತ್ ಪೆಜ್ಜುಗಾ"(ಸಿಕ್ಕಿದಷ್ಟು ಹೆಕ್ಕುವಾ), ಇದು ದಸರಾ ಹಬ್ಬದ ಕೊನೇಯ ದಿನ ಆಡಿ ಆಡಿ ಬೆವತು, ಸೋತು, ಬಣ್ಣ ಕಳಚಿ, ಕಳೆಗುಂದಿದ ಹುಲಿ ವೇಷಗಳು ಬತ್ತಲೆ ಮೈದೋರಿ ಮನೆ ಮನೆ ಹೊಕ್ಕು ಕುಣಿಯುವಾಗ, ಚಿಕ್ಕಂದಿನಲ್ಲಿ ನಾವು ಹೇಳುವ ಮಾತು.

ಹರಕೆ ಹೊತ್ತ ಹುಲಿ ವೇಷಧಾರಿಗಳು ಸಾಮಾನ್ಯವಾಗಿ ಅಪರಿಚಿತ ಮನೆಗಳಲ್ಲಿ ಹೊಕ್ಕುವುದಿಲ್ಲ. ಅವರು ಸ್ವಾಭಿಮಾನಿಗಳು ಮಾತ್ರವಲ್ಲ, ಚಿಕ್ಕಾಸು ಪುಡಿಗಾಸು ಲೆಕ್ಕಿಸದೇ ಆದರಾಭಿಮಾನಗಳಿಂದ ಕೊಟ್ಟ  ದುಡ್ದನ್ನು ಕಾಣಿಕೆಯೆಂದೇ ಭಾವಿಸಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಂಡಂತಹವರು. ಅಂತಹ ವೇಷಗಳಿಗೆ ನಾವು ಮನಸ್ಪೂರ್ವಕವಾಗಿ ಅರುವತ್ತರ ದಶಕದ ಆಗಿನ ದಿನಗಳಲ್ಲಿ 25 ರೂಪಾಯಿಗಿಂತ ಕಡಿಮೆ ಕೊಟ್ಟದ್ದಿಲ್ಲ.

ಆದರೆ ದುಡ್ಡಿಗಾಗಿಯೇ ಬಣ್ಣ ಬಳಿದು ಶಾರದಾ ಪ್ರತಿಷ್ಠೆಯ ದಿನಕ್ಕಿಂತ ಎರಡು ದಿನ ಮೊದಲು ಹೊರಟು, ಅಂದು ಬಳಿದ ಬಣ್ಣ ಬಿಸಿಲು ಬೆವರಿನಿಂದ ಕಳಚಿಕೊಂಡು, ಮಾಸಿ ಉದುರಿ ಬರಿ ಮೈ ಕಾಣಿಸಿದರೂ ಮತ್ತೆ ಬಣ್ಣ ಬಳಿಯಲು ಖರ್ಚು ಮಾಡುವ ಧನಶಕ್ತಿ ಇಲ್ಲದ ಅಥವಾ ಸೌಂದರ್ಯಪ್ರಜ್ಞೆ ಸಾಲದ ಹುಲಿಗಳು "ತಿಕ್ಕಿನಾತ್ ಪೆಜ್ಜುಗಾ" ಎಂದು ಒಕ್ಕೊರಲಿನಿಂದ ಘೋಷಿಸಿ, ಕಂಡವರ ಮನೆ ಹಿತ್ತಲು ಪ್ರವೇಶಿಸಿ, ಬೊಗಳುವ ನಾಯಿ, ತೆಗಳುವ ಮನೆಯೊಡೆಯನನ್ನೂ ಲೆಕ್ಕಿಸದೇ, ಒಂದೇ ಸಮನೆ ಮೈಮೇಲೆ ಭೂತ ಬಂದವರಂತೆ ಕುಣಿದು, ನಂತರ ಬ್ಯಾಂಡ್ ಬಡಿಯುವವರನ್ನು ಸ್ವಲ್ಪ ಸುಮ್ಮನಾಗುವಂತೆ ಹೇಳಿ, ಮನೆ ಬಾಗಿಲು ಮುಚ್ಚಿ ಬಚ್ಚಲು ಮನೆಯಲ್ಲಿ ಅವಿತು ಕುಳಿತ ಮನೆ ಮಂದಿ ಹುಲಿ ವೇಷ ಆಗಲೇ ಮೂರು ಮನೆ ದಾಟಿ ಮುಂದೆ ಹೋಯಿತೆಂಬ ನಂಬಿಕೆಯಿಂದ ಮೆಲ್ಲನೇ ಹೊರ ಬಂದು, ಕತ್ತು ಉದ್ದ ಮಾಡಿ ಕಿಟಿಕಿಯಿಂದ ಇಣುಕಿ ಪಿಳಿಪಿಳಿ ನೋಡುವಾಗ ಬಾಗಿಲಿನ ಚಿಲಕ ಜೋರಾಗಿ ಬಡೆದು, ಅಥವಾ ಕಾಲ್‍ಬೆಲ್‍ನ ಗುಂಡಿ ಅದುಮಿ ಹೊರ ಬರುವಂತೆ ಮಾಡಿ, ರುಪಾಯಿ, ಎರಡು ರುಪಾಯಿ ಸಿಕ್ಕರೂ ಬೇಸರಿಸದೇ ತಮ್ಮ ಅದೃಷ್ಟವನ್ನು ನೆನೆದು ಕೇಕೆ ಹಾಕಿ ಕುಣಿಯುತ್ತಾ ಚೇಳು ಬಗ್ಗಿ ಬಾಯಿಯಿಂದ ದುಡ್ದನ್ನು ಎತ್ತಿ ಚೀಲಕ್ಕಿಳಿಸಿ, ಪಕ್ಕದ ಮನೆಯತ್ತ ತೆರಳುವುದು ಅವರ ಕಾರ್ಯ ವೈಖರಿ! ಆದರೆ, ಅವರ ಕುಣಿತವಾಗಲಿ, ಬ್ಯಾಂಡ್ ಬಡಿತವಾಗಲಿ ಸಾಮಾನ್ಯವಲ್ಲ. ಅದು ಪರಿಪೂರ್ಣತೆಯಿಂದ ಕೂಡಿದ ಅಂಗಸಾಧನೆ!

ಅಂತಹ ಹುಲಿ ವೇಷಗಳು ಕಾರ್ ಸ್ಟ್ರೀಟ್, ಮಂಗಳಾದೇವಿ ಅಥವಾ ಕುದ್ರೋಳಿ ಉತ್ಸವಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದೇ ಮೂಗಿನ ವರೆಗೆ ಶರಾಬು ಏರಿಸಿ, ಯಾವುದಾದರೂ ಸಾರಾಯಿ ಗಡಂಗಿನ ಪಕ್ಕದ ಫುಟ್‍ಪಾತ್‍ನಲ್ಲಿ, ತೋಡಿನಲ್ಲಿ ಹಾಯಾಗಿ ಬಿದ್ದುಕೊಂಡಿದ್ದು, ಮಾರನೇ ದಿನ ಬೆಳಿಗ್ಯೆ ಬಿಸ್ಕುಟ್ ಅಂಬಡೆಯಂತಹ ಕೆಂಪು ಕಣ್ಣುಗಳಿಂದ ಅತ್ತಿತ್ತ ನೋಡುತ್ತಾ, ತೂರಾಡುತ್ತಾ ಒಬ್ಬೊಬ್ಬರೇ ಮನೆಯತ್ತ ತೆರಳುವುದು ಸಾಮಾನ್ಯ ದೃಶ್ಯ.

ಅಂತಹ ವೇಷಗಳು ಇಂದು ನೋಡ ಸಿಗುವುದಿಲ್ಲ. ದಸರಾ ವೇಷ ಹಾಕುವವರೇ ಕಮ್ಮಿ ಅನ್ನಬಹುದಾದ ಇಂದಿನ ಹೈಟೆಕ್ ಪ್ರಪಂಚದಲ್ಲಿ, ನರಿ, ಕೋತಿ, ಕೋಡಂಗಿಯಂತೆ ವಿಚಿತ್ರ ಬಟ್ಟೆ ತೊಟ್ಟ ತುಂಡು ಕರಡಿ, ಸಿಂಹ ವೇಷಗಳು, ತಾರಕವಾಗಿ ಢೋಲು ಬಾರಿಸುತ್ತಾ, ತಾಳ ತಪ್ಪಿ ನಲಿಯುತ್ತಾ ಅಂಗಡಿ ಅಂಗಡಿ, ಮನೆ ಮನೆ ಸುತ್ತುವುದು ಕಂಡರೆ....ಅದು "ತಿಕ್ಕಿನಾತ್ ಪೆಜ್ಜುಗಾ" ಎಂದು ಅಪ್ಪಟ ತುಳು ಭಾಷೆಯಲ್ಲಿ ಅನ್ನುವ ನಮ್ಮೂರಿನವರಲ್ಲ, ಬದಲಾಗಿ "ಕೊಟ್ಟವ ಕೋಡಂಗಿ, ಈಸ್ಕೊಂಡವ ಈರಭದ್ರ" ಎಂದು ನಂಬಿದ ಉತ್ತರ ಕರ್ನಾಟಕದಿಂದ ಕೆಲಸವನ್ನರಸಿ ವಲಸೆ ಬಂದ ಬಡ ಕಾರ್ಮಿಕರು!

No comments: