Pic courtesy: http://laxmipras.blogspot.in/ |
ದಸರಾ ಸಮಯ. ನಮ್ಮ ಕಂಪೌಂಡಿನಲ್ಲಿ ಹೊಕ್ಕು ಐದು ಪೈಸೆ ಹತ್ತು ಪೈಸೆಗೆ ನಾಲ್ಕಾಣೆಗೆ ತೃಪ್ತಿಪಟ್ಟುಕೊಂಡು ಹೋಗುವ ಪೇಪರ್ ವೇಷ, ಚಕುಬುಕು ಚಟ್ಣಿ, ಪೈಂಟರ್ ವೇಷ, ಸಿದ್ಧಿ ವೇಷ, ಕೊರಗರ ವೇಷ, ಸ್ತ್ರೀ ವೇಷ, ಸಿಂಗಾರ ಪಾಟಿ ವೇಷ, ಅಸ್ತಿಪಂಜರ ವೇಷಗಳಿಗೇನೂ ಕೊರತೆಯಿರಲಿಲ್ಲ!
ಆಗಿನ ದಿನಗಳಲ್ಲಿ ಸಭ್ಯತೆ ಕಾಪಾಡಿಕೊಳ್ಳುವತ್ತ ಹೆಚ್ಚು ಗಮನ ನೀಡುತ್ತಿದ್ದ ಸ್ವಲ್ಪ ಉನ್ನತ ಮಟ್ಟದವರು, ಹರಕೆ ಹೊತ್ತವರು ಹಾಕುವ ಹುಲಿ, ಕರಡಿ, ಸಿಂಹ, ರಾಧಾಕೃಷ್ಣ, ಅನಾರ್ಕಲಿ(ಬ್ಯಾಂಡ್ ಸಿದ್ಧಿ)ಗಳು ಪರಿಚಯವಿಲ್ಲವರ ಮನೆಯಲ್ಲಿ ಕುಣಿಯುವ ಪದ್ಧತಿಯಿರಲಿಲ್ಲ. ನಾವು ಹೆಚ್ಚಾಗಿ ರಸ್ತೆಯ ಆಚೆ ಇದ್ದ ಲಾಲ್‍ಬಾಗ್ ಸ್ಟೋರ್‍ನ ನಾರಾಯಣ ಶೆಟ್ರ ಕಂಪೌಂಡ್‍ನಲ್ಲಿ, ಅಥವಾ ಅಪರೂಪಕ್ಕೊಮ್ಮೆ ಪಕ್ಕದಲ್ಲಿದ್ದ ಪುಟ್ಟಸ್ವಾಮಿಯವರಲ್ಲಿ ಕುಣಿಯುವ ಅಂತಹ ವೇಷಗಳನ್ನು ಅಥವಾ ನಮ್ಮ ತಂದೆಯವರ ಪರಿಚಯ ಇದ್ದವರು ಮನೆಗೆ ಬಂದು ಕುಣಿಯುವುದನ್ನು ನೋಡಿ ಖುಷಿ ಪಡುತ್ತಿದ್ದೆವು. ಅಂತಹ ವೇಷಗಳಿಗೆ ಆಗಿನ ದಿನಗಳಲ್ಲಿ ಕನಿಷ್ಠ ಒಂದೆರಡು ರೂಪಾಯಿ ಸಂಭಾವನೆ ನೀಡುವುದು ಸಂಪ್ರದಾಯ, ಶಿಷ್ಟಾಚಾರ.
ಒಂದು ರಾತ್ರಿ ಸುಮಾರು 9:45ರ ಸಮಯ. ರಸ್ತೆಯ ಮಿಣುಕು ದೀಪಗಳ ಬೆಳಕಿನಲ್ಲಿ ನಿಶ್ಶಬ್ಧವಾಗಿ ನಡೆದೆು ಹೋಗುತ್ತಿದ್ದ, ಅಸ್ಪಷ್ಟವಾಗಿ ಕಾಣುವ ವೇಷದ ಗುಂಪೊಂದನ್ನು ಮಾಳಿಗೆ ಕೋಣೆಯ ಕಿಟಿಕಿ ಬಳಿ ಕುಳಿತ ನಾನು ಮತ್ತು ನಮ್ಮಣ್ಣ ರಾಧಾಕಾಂತ್ ಕಂಡೆವು.
ಸುಮ್ಮನೆ ಕೂತು ಆ ದೃಶ್ಯವನ್ನು ವೀಕ್ಷಿಸಬಾರದೇ?
ಇಲ್ಲಾ!
ನಮ್ಮಣ್ಣ ಗಟ್ಟಿ ಸ್ವರದಲ್ಲಿ "ಇದು ಯಾವ ವೇಷ?" ಎಂದು ಕೇಳಿದ.
"ಹಾದಿಯಲ್ಲಿ ಹಾದು ಹೋಗುವ ಹುಲಿಯೇ ನನ್ನನ್ನು ಬಂದು ಹಿಡಿಯೇ..." ಅಂದ ಹಾಗೆ, ಆ ವೇಷದ ಗುಂಪು ಒಮ್ಮೆ ತಲೆಯೆತ್ತಿ ನಮ್ಮತ್ತ ದೃಷ್ಟಿಸಿ "ಕರಡಿ... ಕರಡಿ!" ಎಂದು ಉತ್ತರಿಸಿತು!
ಸ್ವಲ್ಪ ಅಧಿಕ ಪ್ರಸಂಗ ಜಾಸ್ತಿ ಇದ್ದ ನಾವು ಕೂಡಾ ಜೋರಾಗಿ "ಕರಡಿ... ಕರಡಿ" ಎಂದು ಅರಚಿದೆವು!
ತಕ್ಕೋ! ನಮಗೆ ಬೇಕಿತ್ತೇ?
ಕರಡಿ ವೇಷದ ಗುಂಪು ನಮ್ಮ ಮನೆಯತ್ತ ತಿರುಗಿ ಬ್ಯಾಂಡ್ ಬಾರಿಸುತ್ತಾ ಗೇಟ್ ಸರಿಸಿ ಒಳನುಗ್ಗಿತು! ನಾನು ಮತ್ತು ನಮ್ಮಣ್ಣ ಬೆಚ್ಚಿಬಿದ್ದು ಹೌಹಾರಿ ಎದ್ದು ಕೆಳಗೋಡಿ ಹೊರ ಚಾವಡಿಯ ಲೈಟ್ ಆರಿಸಿ ಹಾಲ್‍ನ ಎರಡೂ ಬದಿಯ ಬಾಗಿಲುಗಳನ್ನು ಮುಚ್ಚಿ ಏನೂ ಆಗವರಂತೆ ಒಂದು ಮೂಲೆಯಲ್ಲಿ ಅವಿತು ಕುಳಿತೆವು. ಹಾಲ್‍ನಲ್ಲಿ ಬರೆಯುತ್ತಾ ಕೂತಿದ್ದ ನಮ್ಮ ತಂದೆಯವರು ಬ್ಯಾಂಡ್ ಸದ್ಧು ಕೇಳಿಸಿ ಒಮ್ಮೆ ತಲೆಯೆತ್ತಿ ನಂತರ ಹಾಲ್‍ನ ಬಾಗಿಲುಗಳು ಬಂದ್ ಇದ್ದುದನ್ನು ಕಂಡು, "ಬಹುಷ್ಯಃ ಪಕ್ಕದ ಮನೆಯ ಪುಟ್ಟಸ್ವಾಮಿಯವರಲ್ಲಿ ಬಂದಿರಬೇಕು ವೇಷ" ಎಂದು ಯೋಚಿಸಿ ತಮ್ಮ ಕೆಲಸ ಮುಂದುವರೆಸಿದರು.
ಅತ್ತ ಕರಡಿ ವೇಷದವರು ನಾಲ್ಕೈದು ಸಾರಿ ಬ್ಯಾಂಡ್ ಅರ್ಧರ್ಧ ಬಾರಿಸಿ ಯಾರೂ ಹೊರಬಾರದ್ದನ್ನು ನೋಡಿ ನಿರಾಶೆಯಿಂದ, "ಬಂದ ದಾರಿಗೆ ಸುಂಕವಿಲ್ಲ" ಎಂದುಕೊಂಡು ತಮ್ಮ ಅದೃಷ್ಟವನ್ನು ಹಳಿಯುತ್ತಾ, ನಮ್ಮಿಬ್ಬರಿಗೆ ಹಿಡಿ ಶಾಪವನ್ನು ಹಾಕುತ್ತಾ ಬರಿಗೈಯ್ಯಲ್ಲಿ ವಾಪಸಾದರು!
ನಿಜ ಸಂಗತಿ ಅರಿತ ನಮ್ಮ ತಂದೆಯವರು ನಂತರ ಸಹಸ್ರನಾಮವಲ್ಲದಿದ್ದರೂ, ಅಷ್ಟೋತ್ತರ ಪಾಠವನ್ನು ನಿರರ್ಗಳವಾಗಿ ನಮ್ಮಿಬ್ಬರ ಮೇಲೆ ಪ್ರೋಕ್ಷಿಸಿ ನಮ್ಮನ್ನು ಕೃತಾರ್ಥರನ್ನಾಗಿ ಮಾಡಿದರೆಂದು ಬೇರೆ ಹೇಳಬೇಕಾಗಿಲ್ಲ!