ಚಿತ್ರ ಕೃಪೆ: https://commons.wikimedia.org/ |
ಉಲ್ಲೇಖನೀಯ ನಾಟಕ ಮಂಡಳಿಗಳೆಂದರೆ, ಉಡುಪಿಯ "ರಂಗಭೂಮಿ(ರಿ)", ಕುಂದಾಪುರದ "ರೂಪರಂಗ" ಮತ್ತು ಪೆರ್ಡೂರಿನ "ಕಲಾ ಸೇವಾ ಮಂಡಳಿ". ಅದರಲ್ಲಿ ಸಾಮಾಜಿಕ ನಾಟಕದಲ್ಲಿ ರಂಗಭೂಮಿ ಮತ್ತು ರೂಪರಂಗ ನಡುವೆ ತೀವ್ರ ಪೈಪೋಟಿ ನಡೆದು ಕೊನೆಗೆ ರಂಗಭೂಮಿ ಪ್ರಥಮ ಬಹುಮಾನ, ಮತ್ತು ರೂಪರಂಗ ದ್ವಿತೀಯ ಬಹುಮಾನ ಪಡೆದವು. ರಂಗಭೂಮಿಯ ಕಲಾವಿದರಾದ ಆನಂದ ಗಾಣಿಗ ಮುಖ್ಯ ಪಾತ್ರದಲ್ಲಿ ಹಾಗೂ "ಶೋಭಾ" ಹೆಸರಿನ ಸ್ತ್ರೀಪಾತ್ರದಲ್ಲಿ ಶ್ರೀನಿವಾಸ ಶೆಟ್ಟಿಗಾರ್ ಅದ್ಭುತ ನಟನಾ ಕೌಶಲ್ಯ ಮೆರೆದು ಮಿಂಚಿದ ನೆನಪು ಇಂದಿಗೂ ಮಾಸಿಲ್ಲ. ಅಂತೂ ನಮ್ಮ ತಂದೆಯವರ ಸಾರಥ್ಯದಲ್ಲಿ ನಾಟಕ ಸಪ್ತಾಹ ಯಶಸ್ವಿಯಾಗಿ ನೆರವೇರಿತು.
ನಾನು ಮತ್ತು ನಮ್ಮ ನೆರೆಮನೆಯ ಆಪ್ತಮಿತ್ರ ಮಹಾವೀರ ಎಲ್ಲಾ ಏಳು ನಾಟಕಗಳನ್ನು, ನಮ್ಮಮ್ಮ, ನಮ್ಮಣ್ಣಂದಿರಾದ ಕಮಲಾಕಾಂತ ಮತ್ತು ರಾಧಾಕಾಂತ ಹೆಚ್ಚಿನ ನಾಟಕಗಳನ್ನು ವೀಕ್ಷಿಸಿದೆವು. ತಂದೆಯವರ ಸ್ಥಾನಮಾನಗಳಿಂದಾಗಿ ನಮಗೆ ಗಣ್ಯ ವ್ಯಕ್ತಿಗಳೊಂದಿಗೆ ಕುಳಿತು ನಾಟಕ ವೀಕ್ಷಿಸಲು ಉಚಿತ ಪಾಸ್ ಇತ್ತು. ಸಾಯಂಕಾಲ ಸುಮಾರು ಆರೂವರೆ ಗಂಟೆಗೆ ಪ್ರಾರಂಭವಾದ ನಾಟಕಗಳು ಒಂಬತ್ತೂವರೆ ಗಂಟೆಗೆ ಮುಕ್ತಾಯಗೊಳ್ಳುತ್ತಿದ್ದುವು. ನಡುವಿರಾಮ ವೇಳೆ ತಂದೆಯವರು ನಮ್ಮನ್ನು ಹೊರಗೆ ಅಡ್ಡರಸ್ತೆಯಲ್ಲಿದ್ದ ಅಂಗಡಿಗೆ ಕರೆದುಕೊಂಡು ಹೋಗಿ ತಿನ್ನಲು ಚಕ್ಕುಲಿ, ಮಸಾಲೆ ಕಡಲೆ, ಪೆಪ್ಪರ್ಮಿಂಟ್ ಇತ್ಯಾದಿ, ಮತ್ತು ಕುಡಿಯಲು ವಿಮ್ಟೋ, ಗೋಲ್ಡ್ಸ್ಪಾಟ್ ಅಥವಾ ಬಿಕ್ಕೋಲಾ ಕೊಡಿಸುತ್ತಿದ್ದರು.
ಆ ನಾಟಕ ಸಪ್ತಾಹದಲ್ಲಿ ನಡೆದ ವಿನೋದಮಯ, ಸ್ವಾರಸ್ಯಕರ ಘಟನೆಗಳು ನನ್ನ ನೆನಪಿಗೆ ಬರುತ್ತಿವೆ. ಉತ್ತರ ಕರ್ನಾಟಕದ ಯಾವುದೋ ಒಂದು ಹೊಸ ನಾಟಕ ಕಂಪನಿ ಅದರಲ್ಲಿ ಭಾಗವಹಿಸಿ ಐತಿಹಾಸಿಕ ನಾಟಕವೊಂದನ್ನು ಪ್ರಸ್ತುತ ಪಡಿಸಿತ್ತು. ನಾಟಕದ ಮಧ್ಯೆ ಯುದ್ಧ ದೃಶ್ಯವೊಂದಿತ್ತು. ಎರಡು ಪ್ರಾಂತ್ಯದ ಅರಸರು ಮತ್ತವರ ಸೈನ್ಯ ಕಾದಾಡಿ ಕಾದಾಡಿ ಸೇನಾಪತಿಯೊಬ್ಬ ಈಟಿ ಎದೆಯೊಳಗೆ ಹೊಕ್ಕು ಸತ್ತು ಬಿದ್ದ. ಆತ ಅಂಗಾತ ಬಿದ್ದುಕೊಂಡಿದ್ದು, ಈಟಿ ಆತನ ಎದೆಯ ಮೇಲೆ ಒರಗಿತ್ತು. ಸತ್ತಂತೆ ಬಿದ್ದುಕೊಂಡಿದ್ದರೂ ಆ ನಟ ಉಸಿರಾಡುವಾಗ ಈಟಿ ಮೇಲೆ ಕೆಳಗೆ ಹೋಗುತ್ತಿದ್ದ ದೃಶ್ಯ ನನ್ನ ಕಣ್ಣಿಗೆ ಬೀಳದೇ ಹೋಗಲಿಲ್ಲ! ನಾನು ಪಕ್ಕ ಕೂತ ಮಹಾವೀರನ ಕಿವಿಯಲ್ಲಿ ಪಿಸುಮಾತಿನಲ್ಲಿ ಹೇಳಿದೆ, "ನೋಡು ಮಹಾವೀರಾ, ಅವ ಸತ್ತ ಹಾಗೆ ನಟನೆ ಮಾಡಿದ್ರೂ ಈಟಿ ಮೇಲೆ ಕೆಳಗೆ ಹೋಗ್ತಾ ಉಂಟು! ದಮ್ಮು ಕಟ್ಟಿ ಬಿದ್ದುಕೊಳ್ಳಲಿಕ್ಕೆ ಕಷ್ಟ ಪಡ್ತಾ ಇದ್ದಾನೆ ಪಾಪ!"
ಅಂತಹ ಸನ್ನಿವೇಶಗಳನ್ನು ಸೂಕ್ಷ್ಮವಾಗಿ ಗಮನಿಸುವ ಅಭ್ಯಾಸ ನನಗಿದ್ದ ಕಾರಣ ಅದು ಕೂಡಲೇ ನನ್ನ ಕಣ್ಣಿಗೆ ಬಿದ್ದು, ಮಹಾವೀರನೂ ಅದನ್ನು ಗಮನಿಸಿದ. ಇಬ್ಬರೂ ಮುಸಿಮುಸಿ ನಗಲು, ನನ್ನ ಪಕ್ಕ ಕುಳಿತ ಕನ್ನಡ ವಿಧ್ವಾಂಸ ಎಸ್.ವಿ. ಪರಮೇಶ್ವರ ಭಟ್ಟರು ನಮ್ಮ ನಗು ಕಂಡು ಕುತೂಹಲದಿಂದ ರಂಗಮಂಚದತ್ತ ಗಮನಿಸಿದರು. ಅವರಿಗೂ ಗೊತ್ತಾಯ್ತು ನಾವ್ಯಾಕೆ ನಕ್ಕೆವೆಂದು!
ಅವರು ನಸುನಗುತ್ತಾ ಪ್ರತಿಕ್ರಿಯೆ ವ್ಯಕ್ತಪಡಿಸಿದರು, "ಓ ಈಟಿ ಅಲುಗಾಡತ್ತಲ್ವಾ! ಪಾಪ ಅವ್ನಿಗೇನು ಗೊತ್ತು, ಮಕ್ಕಳಿಗೂ ನಟನೆಯ ಬಗ್ಗೆ ಇರುವ ಕಾಳಜಿ ಬಗ್ಗೆ! ಪರವಾಗಿಲ್ಲ ನೀವಿಬ್ರು. ಇಷ್ಟು ಚಿಕ್ಕ ವಯಸ್ಸಿನಲ್ಲೇ ಅಷ್ಟೊಂದು ಒಳ್ಳೆಯ ನಾಟಕ ವಿಮರ್ಶಕರಾಗಿದ್ದೀರಾ!"
ಪರಮೇಶ್ವರ ಭಟ್ಟರಂತಹ ಮಹಾನ್ ವಿಧ್ವಾಂಸರು ನಮ್ಮ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ನನಗೆ ಜೀವನದಲ್ಲಿ ಅತೀವ ಹೆಮ್ಮೆ ಹಾಗೂ ತೃಪ್ತಿ ತಂದು ಕೊಟ್ಟ ವಿಷಯವೂ ಹೌದು.
ಆದರೆ, ವಿಷಯ ಅಲ್ಲಿಗೆ ನಿಲ್ಲಲಿಲ್ಲ. ಕೊನೇಯದಕ್ಕಿಂತ ಮುಂಚಿನ ದೃಶ್ಯ. ಸುಮಾರು 10 ನಿಮಿಷಗಳ ದೀರ್ಘ ಕಾದಾಟ ನಡೆದು ಒಬ್ಬ ಅರಸ ಸಾಯುತ್ತಾನೆ, ಮತ್ತು ವಿಜಯೀ ಪಡೆ ಜೈಜೈಕಾರ ಹಾಕುತ್ತಾ ರಣರಂಗದಿಂದ ಸಾಗುವಾಗ ಪರದೆ ಕೆಳೆಗಿಳಿಯುತ್ತದೆ.
ಪರದೆ ಕೆಳೆಗಿಳಿಯಿತೇನೋ ಸರಿ, ಆದರೆ ಸತ್ತು ಬಿದ್ದ ಅರಸ ಅರ್ಧ ಪರದೆಯ ಒಳಗೆ, ಅರ್ಧ ಹೊರಗುಳಿದು, ಮುಜುಗರ ಸೃಷ್ಟಿಸಿ, ಮುಂದಿನ ದೃಶ್ಯ ಹೇಗೆ ಪ್ರಾರಂಭಿಸಬೇಕೆಂಬುದೇ ದಿಗ್ದರ್ಶಕರಿಗೊಂದು ದೊಡ್ದ ತಲೆನೋವಾಗಿ ಪರಿಣಿಮಿಸಿರಬಹುದು!
ಎರಡು ನಿಮಿಷ ಏನೂ ಆಗಲಿಲ್ಲ. ಅರಸ ಬಿದ್ದುಕೊಂಡಲ್ಲೇ ಇದ್ದ, ಪರದೆಯೂ ಆತನ ಮೇಲೊರಗಿ ಮುಚ್ಚಿದಂತೆಯೇ ಇತ್ತು. ಸಂಗೀತಗಾರರು ಒಂದೇ ಸವನೆ ಜೋರಾಗಿ ಹಾರ್ಮೋನಿಯಮ್ ತಬಲಾ ಬಾರಿಸುತ್ತಾ ಇದ್ದರು. ಸತ್ತವನು ಎದ್ದು ಬದಿಗೆ ಹೋಗಲು ಸಾಧ್ಯವೇ? ಪರದೆಯನ್ನು ಈಚೆ ಸರಿಸಲೂ ಸಾಧ್ಯವಿಲ್ಲವೆಂಬ ಸಂದಿಗ್ಧ ಪರಿಸ್ಥಿತಿ! ಕೊನೆಗೆ ಯಾರೋ ನೆಪಥ್ಯ ಪಿಸುಮಾತಾಡಿದ್ದು ಮೈಕ್ನಲ್ಲಿ ಅಸ್ಪಷ್ಟವಾಗಿ ಕೇಳಿಸಿತು. ಪರದೆ ತುಸು ಮೇಲೆ ಸರಿಯಿತು.
ನಮಗೆಲ್ಲಾ ಕುತೂಹಲ, ಆತ ಆಚೆ ಬದಿ ಹೇಗೆ ಸರಿಯುತ್ತಾನೆಂದು. ನಾವಿಬ್ಬರೂ ಎದ್ದು ನಿಂತು ಆತನನ್ನೇ ದೃಷ್ಟಿಸಿದೆವು. ಹಲವಾರು ಸಭಿಕರೂ ಆಸನದ ಅಂಚಿನಲ್ಲಿ ಕುಳಿತು ತದೇಕಚಿತ್ತದಿಂದ ನೋಡುತ್ತಾ ಇದ್ದರು.
ಸತ್ತ ಅರಸನು ಫಕ್ಕನೇ ಚಲಿಸಿ, ಮೆಲ್ಲನೇ ಗುಡುಗುಡುಸಿ ಉರುಳಿಕೊಂಡು, ಪರದೆಯಡಿಯಿಂದ ತೂರಿಕೊಂಡು ಆಚೆ ಬದಿ ಸೇರುವಾಗ ಪರದೆ ಪೂರ್ತಿ ಕೆಳಗಿಳಿದು ಸಭಿಕರೆಲ್ಲಾ ಜೋರಾಗಿ ಚಪ್ಪಾಳೆ ತಟ್ಟುತ್ತಾ ಕೇಕೆ ಹಾಕಿ ಬಿದ್ದು ಬಿದ್ದು ನಕ್ಕರು!