Mijar Annappa - Pic courtesy: ajekar.blogspot.com |
1975ರಲ್ಲಿ ಮಂಗಳೂರಿನ ಪುರಭವನದಲ್ಲಿ
ಕರ್ನಾಟಕ ಯಕ್ಷಗಾನ ಮಂಡಳಿಯ ಪ್ರಸಂಗವೊಂದು ಏರ್ಪಟ್ಟಿತ್ತು. ಆಗ ಮುಂದುವರೆದ ಮಳೆಗಾಲವಾದ ಕಾರಣ ಟೆಂಟ್
ಬಯಲಾಟ ಎಲ್ಲೂ ನಡೆಯುತ್ತಿರಲಿಲ್ಲ.
ಪ್ರಸಂಗದ ಹೆಸರು ’ಅತಿಕಾಯ ಮಕರಾಕ್ಷ ಇಂದ್ರಜಿತು ಮಹಿರಾವಣ ಕಾಳಗ’.
ಅದಕ್ಕೂ ಮುಂಚೆ ನಮ್ಮಣ್ಣಂದಿರು ನೆಹರು ಮೈದಾನಿನಲ್ಲಿ ರಾತ್ರಿ ಹಗಲು ನಡೆಯುತ್ತಿದ್ದ ಆಟಗಳಿಗೆ ತಪ್ಪದೇ ಹೋಗುತ್ತಿದ್ದು, ಕರ್ನಾಟಕ ಯಕ್ಷಗಾನ ಮೇಳದ ಅತೀ ಪ್ರಸಿದ್ಧ ಪ್ರಸಂಗ ’ನಳ ದಮಯಂತಿ’, ಕಾರ್ಕೋಟಕ ಸರ್ಪ ಬೆಂಕಿಯಲ್ಲಿ ಉರಿಯುವ ದೃಶ್ಯದ ಬಗ್ಗೆ, ಹಾಸ್ಯಗಾರ ಮಿಜಾರ್ ಅಣ್ಣಪ್ಪ ಅವರ ತಿಳಿ ಹಾಸ್ಯದ ಬಗ್ಗೆ ಸಾಕಷ್ಟು ವರ್ಣನೆ ಮಾಡಿ ನನ್ನ ತಲೆಕೆಡಿಸಿದ್ದರು. ಯಕ್ಷಗಾನ ನೋಡುವ ಆಸೆ ಪಟ್ಟ ನನ್ನನ್ನೂ ಒಮ್ಮೆ ತಮ್ಮ ಜೊತೆಗೆ ಕರೆದೊಯ್ದು, ನಾನು ಅರ್ಧ ಘಂಟೆಯೊಳೆಗೆ ನಿದ್ರೆಗೆ ಜಾರಿದ್ದನ್ನು ಕಂಡು, ಇನ್ನೆಂದೂ ಈ ತೂಕಡಿಕೆ ತಿಮ್ಮಪ್ಪ ತಮ್ಮನನ್ನು ತಮ್ಮೊಂದಿಗೆ ಕರೆದೊಯ್ಯಲಾರೆವೆಂಬ ಶಪಥವನ್ನೂ ಕೈಗೊಂಡಿದ್ದರು!
ಅಲ್ಲಲ್ಲಿ ಉತ್ಸವ ಸಮಾರಂಭಗಳಲ್ಲಿ,
ಶೇಣಿ ಗೋಪಾಲಕೃಷ್ಣ ಭಟ್ ಮುಂತಾದವರ ಹವ್ಯಾಸಿ ಬಳಗಗಳು ಆಡುವ ಪ್ರಸಂಗಗಳನ್ನು ಕಂಡು, ಯಕ್ಷಗಾನದ ಹುಚ್ಚು
ಬೆಳೆಸಿಕೊಂಡ ನನಗೆ, ಮಿತ್ರರಾದ ಗಣೇಶ್, ಪುಂಡಲೀಕ ಮತ್ತು ನಾಗೇಶ್ ಜೊತೆಗಿದ್ದುದು ಇನ್ನೂ ಹೆಚ್ಚಿನ
ಹುಮ್ಮಸ್ಸು ಬರಲು ಪ್ರೇರೇಪಣೆ ನೀಡಿತ್ತು. 2 ರೂಪಾಯಿಯ ಟಿಕೆಟ್ ಕೊಂಡುಕೊಂಡ ನಾವು ರಾತ್ರಿ ಸರಿಯಾಗಿ
9:30ಕ್ಕೆ ಪುರಭವನದ ಮಾಳಿಗೆಯಲ್ಲಿ ಕೂತು ಪ್ರಸಂಗವನ್ನು ವೀಕ್ಷಿಸಲು ಎದುರು ನೋಡಿದೆವು.
ನಾನಂತೂ ಆಟವನ್ನು ಪ್ರಾರಂಭದಿಂದ ಅರ್ಧದ
ವರೆಗೆ ಅತಿಯಾದ ಕುತೂಹಲದಿಂದ ವೀಕ್ಷಿಸಿದೆ, ಪಾತ್ರಧಾರಿಗಳ ವೇಷಭೂಷಣಗಳು, ಕುಣಿದಾಟ, ಹಾರಾಟ, ಹಾವಭಾವ,
ಭಂಗಿಗಳು, ಚಂಡೆ ಮೃದಂಗಗಳ ಬಡಿತ, ಭಾಗವತರ ಹಾಡುಗಾರಿಕೆ, ತಾಳ, ಸ್ತ್ರೀ ಪಾತ್ರಧಾರಿಗಳ ಮೋಡಿ, ಅಭಿನಯದಲ್ಲಿ
ನೈಜತೆ ಕಂಡು ವಿಸ್ಮಯಗೊಂಡೆ!
ಮಧ್ಯರಾತ್ರಿ 12:00ಕ್ಕೆ ಸರಿಯಾಗಿ
ಅರ್ಧ ಸಮಯದ ವೇಳೆ ಹೊರಗೆ ಹೋಗಿ ತಿಂಡಿ ಕಾಪಿ ಚಹಾ ಮಾರುವ ಗಾಡಿಯ ಬಳಿ ಹೋಗಿ ತಣ್ಣನೆಯ ಬಿಸ್ಕುಟಂಬಡೆ,
ಗೋಳಿಬಜೆ, ಬನ್ಸ್ ತಿಂದು ಕಾಪಿ ಕುಡಿದು, ಮೂತ್ರಶಂಕೆ ನಿವಾರಿಸಿ, ಮರಳಿ ಬಂದು ಕೂತೆವು. ಆಗಲೇ ಅರ್ಧಕ್ಕರ್ಧ
ಜನ ಮನೆಗೆ ಹೋಗಿಯಾಗಿತ್ತು. ಕೆಲವರು ಜೋರಾಗಿ ಗೊರಕೆ ಹೊಡೆಯುತ್ತಾ ಎದುರಿನ ಸೀಟಿನ ಬೆನ್ನಿಗೆ ಕಾಲು
ಚಾಚಿ ಗಟ್ಟಿ ನಿದ್ರೆಗೆ ಜಾರಿದ್ದರು!
ನಾವಂತೂ ಚೂರೂ ಕಣ್ಣಿನ ರೆಪ್ಪೆ ಮಿಟುಕಿಸದೇ
ಮುಂದಿನ ದೃಶ್ಯಗಳನ್ನೆದುರು ನೋಡುತ್ತಾ ಇದ್ದೆವು. ಕಥೆ ಸಂಭಾಷಣೆ ಹೆಚ್ಚು ತಲೆಗೆ ಹೊಕ್ಕದಿದ್ದರೂ,
ವೇಷಗಳ ಮೋಡಿ ನೋಡುವ ಉತ್ಸಾಹ ನಮ್ಮಲ್ಲಿತ್ತು. ಹೆಚ್ಚಾಗಿ, ಅರ್ಧ ಸಮಯದ ನಂತರ ಬರುವ ಮಿಜಾರ್ ಅಣ್ಣಪ್ಪ
ಮತ್ತಿತರ ಹಾಸ್ಯಗಾರರನ್ನು ನೋಡುವ ಕುತೂಹಲ ನಮ್ಮನ್ನು ಎಚ್ಚರವಾಗಿರಿಸಿತ್ತು! ಒಂದು ಗಂಟೆ ಕಳೆದರೂ ಹಾಸ್ಯಗಾರರು ಬರುವ ಲಕ್ಷಣ ಕಾಣಲಿಲ್ಲ. ಆಗಾಗ್ಯೆ
ನಡು ನಡುವೆ ಬಂದು ಸಣ್ಣಪುಟ್ಟ ಸಂಭಾಷಣೆ ಮಾತಾಡಿ
ಹೋದರೂ ನಿರಂತರ ಅರ್ಧ ಘಂಟೆ ಹಾಸ್ಯ ಮಾತಾಡುವ, ಜನರ ನಿದ್ರೆ ಎದ್ದೋಡಿಸುವ ಕಾರ್ಯ ಮಾತ್ರ ಶುರುವಾಗಲಿಲ್ಲ.
ಕಾದು ಕಾದು ನಾವೂ ಆಕಳಿಸಲು, ತೂಕಡಿಸಲು,
ನಿದ್ರೆಗೆ ಜಾರಲು, ಫಕ್ಕನೆ ಚಂಡೆಯ ಸದ್ದಿಗೆ ಎಚ್ಚರವಾಗಲು, ಹಾಗೇ ’ಅತಿಕಾಯ ಮಕರಾಕ್ಷ ಇಂದ್ರಜಿತು
ಮಹಿರಾವಣ ಕಾಳಗ’ ನೋಡುತ್ತಾ
ನೋಡುತ್ತಾ ನಿದ್ರೆಯೊಂದಿಗೆ ನಮ್ಮ ಕಾಳಗವೂ ಪ್ರಾರಂಭವಾಯಿತೆನ್ನಿ! ನಡುವೆ ಎಲ್ಲಾದರೂ ನಾವು ಗಾಢ ನಿದ್ರೆಯಲ್ಲಿದ್ದಾಗ
ಹಾಸ್ಯಗಾರರ ಪಾತ್ರ ತಪ್ಪಿ ಹೋಗುವುದೆಂಬ ದುಗುಡ! ಕೊನೆಗೆ ಗಣೇಶ್ ಒಂದು ಉಪಾಯ ಕಂಡುಕೊಂಡನು. ನಾವು ನಾಲ್ಕು ಮಂದಿಯ ಪೈಕಿ ಒಬ್ಬೊಬ್ಬರು ಪಾಳಿಯಂತೆ ಅರ್ಧರ್ಧ ಗಂಟೆ ಎಚ್ಚರ ಕುಳಿತು ಹಾಸ್ಯಗಾರರ ಪ್ರವೇಶವಾದ
ತಕ್ಷಣ ಇತರರನ್ನು ಎಚ್ಚರಿಸಬೇಕು!
ಅಂತೂ ಸುಮಾರು 2:30ಕ್ಕೆ ಹಾಸ್ಯಗಾರರ
ಪ್ರವೇಶವಾಯಿತು! ಸುಗ್ರೀವ ಪಾತ್ರದಲ್ಲಿ ಮಿಜಾರ್ ಅಣ್ಣಪ್ಪ, ಮತ್ತು ಹನುಮಂತ ಪಾತ್ರದಲ್ಲಿ ಯಾರೋ ಇನ್ನೊಬ್ಬರು ಇದ್ದರು. ಸುಳ್ಳಾಗಲಿಲ್ಲ, ನಮ್ಮೆಣಿಕೆ. ಶುರುವಾಯಿತು ಅವ್ಯಾಹತ ಹಾಸ್ಯ!
ಅವರಿಬ್ಬರು ಪೆದ್ದು ಪೆದ್ದಾಗಿ ಏನೇನೋ
ಮಾತಾಡುವುದನ್ನು ಕಂಡ ಸಭಿಕರೆಲ್ಲಾ ಹೊಟ್ಟೆ ಹುಣ್ಣಾಗುವಂತೆ ಬಿದ್ದು ಬಿದ್ದು ನಗುತ್ತಿದ್ದರು. ಗಣೇಶ್,
ಪುಂಡಲೀಕ ಹಾಗೂ ನಾಗೇಶ್ ನಕ್ಕು ನಕ್ಕು ಅವರ ಕಣ್ಣಿಂದ
ನೀರು ಬಸಬಸ ಧಾರಾಕಾರವಾಗಿ ಹರಿಯುತ್ತಿತ್ತು. ನಾನೂ
ದಾಕ್ಷಿಣ್ಯಕ್ಕಾಗಿ ಜೋರಾಗಿ ನಕ್ಕಂತೆ ಅಭಿನಯಿಸಿದೆನು. ಆ ಹಾಸ್ಯ ಅತೀ ಬಾಲಿಶವಾಗಿದ್ದು, ನನ್ನ
ಪ್ರಾಯಕ್ಕೆ ಮೀರಿ ಹಾಸ್ಯ ಪ್ರಜ್ಞೆ ಹೊಂದಿದ್ದ ನನಗೆ, ನನ್ನ ನಿರೀಕ್ಷೆಗಿಂತ ಕಳಪೆ ಹಾಸ್ಯವದೆಂದು ಸ್ವಲ್ಪ
ನಿರಾಶೆ!
ಅವರಿಬ್ಬರ ಮಧ್ಯೆ ನಡೆದ ಸಂಭಾಷಣೆಯಲ್ಲಿ
ನನಗೆ ನೆನಪಿದ್ದದ್ದು ಒಂದೇ ಸಾಲು. ಅದು ಸುಗ್ರೀವನ ಪಾತ್ರಧಾರಿ ಮಿಜಾರ್ ಅಣ್ಣಪ್ಪ ಹೇಳುವ ವಾಕ್ಯ.
"ಅಣುಮಂತ ಅಣುಮಂತ, ನಾವು ಒಂದು
ಸಂಗತಿ ಮಾಡುವನಾ....?"
ಅದು ಮಂಗಳೂರಿನ ತುಳು ಭಾಷೆಯಲ್ಲಿ ಮಾತನಾಡಿದಂತೆ
ಭಾಸವಾಗುವ ಮೋಡಿಯಲ್ಲಿತ್ತು. ಆ ವಾಕ್ಯವನ್ನು ಸುಮಾರು 20-25 ಸಲ ಪುನರುಚ್ಛರಿಸಿದ ಮಿಜಾರ್ ಅಣ್ಣಪ್ಪ
ಸಭಿಕರನ್ನು ನಗೆಯ ಅಲೆಯಲ್ಲಿ ತೇಲಾಡಿಸುತ್ತಿದ್ದರು! ನನಗೆ ಅದು ಚಿಕ್ಕ ಶಾಲಾ ಮಕ್ಕಳು ಆಡುವ
ಮಾತಿನಂತೆ ಕಂಡು ಬಂದು, ಅಂತಹ ಹಾಸ್ಯ ಹೆಚ್ಚಿನ ಹುರುಪು ಉತ್ಸಾಹ ನೀಡಲಿಲ್ಲ! ಆದರೂ ಮಿಜಾರ್ ಅಣ್ಣಪ್ಪ, ಅವರ ತಿಳಿಯಾದ, ದೊರಗಾದ ಹಾಸ್ಯದ ಮೂಲಕ ಸಮೂಹ ಸನ್ನಿ ಸೃಷ್ಟಿ ಮಾಡುವುದರಲ್ಲಿ ಸಫಲರಾದದ್ದನ್ನು ಕಂಡು ಬೆರಗಾದೆ!
ಸ್ಥಿತಪ್ರಜ್ಞನಂತೆ ನಿಟ್ಟುಸಿರು ಬಿಡುತ್ತಾ
ದಿಟ್ಟ ದೃಷ್ಟಿಯಿಂದ ಪುರಭವನದ ಗಡಿಯಾರವನ್ನೊಮ್ಮೆ, ಕೈಗೆ ಕಟ್ಟಿದ್ದ ಹೆನ್ರಿ ಸ್ಯಾಂಡೋಝ್ ವಾಚನ್ನೊಮ್ಮೆ
ಆಗಾಗ್ಯೆ ನೋಡುತ್ತಾ ನಾನು, ಉಳಿದ ಆ ಅರ್ಧ ಘಂಟೆ ಸಮಯವನ್ನು ಹೇಗಾದರೂ ಕಳೆದೆನೆನ್ನಿ!
ಸರಿ ಸುಮಾರು 3:00 ಗಂಟೆಗೆ ಹೊರ ಬಂದ
ನಾವು ಗಣೇಶನ ಸ್ಕೂಟರ್ ಮತ್ತು ನಮ್ಮಣ್ಣನ ಯೆಜ್‍ದಿ ಬೈಕನ್ನು ಸ್ಟಾರ್ಟ್ ಮಾಡಿ ಮನೆ ಕಡೆ ಹೊರಟೆವು.
ದಾರಿಯುದ್ದಕ್ಕೂ ಗಣೇಶ ಮತ್ತು ಪುಂಡಲೀಕ ಗಟ್ಟಿ ಸ್ವರದಿಂದ "ಅಣುಮಂತ ಅಣುಮಂತ, ನಾವು ಒಂದು ಸಂಗತಿ
ಮಾಡುವನಾ....?" ಎಂದು ಉದ್ಗಾರ ಮಾಡುತ್ತಾ ಇದ್ದರು!
ಮನೆಗೆ ಬಂದು ಮಲಗಿದ ನನಗೆ, ಅದೇ ವಾಕ್ಯ
ತಲೆಯಲ್ಲಿ ಸುತ್ತಿ ಸುತ್ತಿ, ಅಲ್ಲಿಗೇ ಮೂರ್ಛೆ ಹೋದಂತೆ ಗಾಢ ನಿದ್ರೆಗೆ ಜಾರಿದೆನು.
ಮರುದಿನ ಬೆಳಿಗ್ಯೆ ನಮ್ಮಣ್ಣ ಕಮಲಾಕಾಂತ
ಕೇಳಿದ "ಹೇಗಿತ್ತು ಆಟ? ಮಿಜಾರ್ ಅಣ್ಣಪ್ಪ ಡಯಾಲಾಗು ಸೂಪರ್ ಅಲ್ವಾ?"
ನಾನು ನಿರ್ವಿಕಾರವಾಗಿ, ಗಂಭೀರ ಮುಖಭಾವದಿಂದ
ಮಿಜಾರ್ ಅಣ್ಣಪ್ಪರಂತೆ ಸ್ವರ ಮಾಡಿ ಹೇಳಿದೆ -
"ಅಣುಮಂತ ಅಣುಮಂತ, ನಾವು ಒಂದು
ಸಂಗತಿ ಮಾಡುವನಾ....?"
ಕಮಲಾಕಾಂತ ಮನೆಯ ಛಾವಣಿ ಹಾರಿ ಹೋಗುವಂತೆ
ಬಿದ್ದು ಬಿದ್ದು ನಕ್ಕನು, ಮತ್ತು ಮುಂದಿನ ಮೂರು ದಿನ ಅದೇ ವಾಕ್ಯವನ್ನು ಮತ್ತೆ ಮತ್ತೆ ಹೇಳುತ್ತಾ
ನನ್ನನ್ನು ನಗಿಸುವ ಯತ್ನದಲ್ಲಿ ಮಗ್ನನಾದನು. ದಾಕ್ಷಿಣ್ಯಕ್ಕಾಗಿ ನಕ್ಕಂತೆ ಅಭಿನಯಿಸುವ ಕಲೆ ನನಗೆ
ಅದಾಗಲೇ ಕರಗತವಾಗಿತ್ತು, ಹಾಗೆ ಕಮಲಾಕಾಂತನ ಪರಿಶ್ರಮ ವ್ಯರ್ಥವಾಗಲಿಲ್ಲ, ಹಾಗೂ ಯಕ್ಷಗಾನದ ಪರಿಪೂರ್ಣ
ಹಾಸ್ಯ ಪಾತ್ರಧಾರಿಯನ್ನು ನೋಡುವ ನನ್ನ ಅನ್ವೇಷಣೆ ಹಾಗೂ ಹಂಬಲ ಅಲ್ಲಿಗೆ ಮುಗಿಯಿತು!