Monday, February 2, 2015

ಒಂದು ನಿಮಿಷ ನಿಲ್ಲಿ!

Pic source: www.youtube.com
’ಒಂದು ನಿಮಿಷ ನಿಲ್ಲಿ’ ಎಂಬುದು ನಮ್ಮ ಕನ್ನಡನಾಡಿನ ದೈನಂದಿಕ ಜೀವನದ ಅವಿಭಾಜ್ಯ ಸಂದೇಶ. ಇದೊಂದು ಅಪ್ಪಣೆ, ಆಜ್ಞೆ ಅಥವಾ ಸೂಚನೆ ಅಲ್ಲದಿದ್ದರೂ ಅನಿರ್ವಾಹ ಪರಿಸ್ಥಿತಿಯಲ್ಲಿ, ಅವಸರದಲ್ಲಿದ್ದವರನ್ನು ಸಮಾಧಾನ ಪಡಿಸಿ ಸುಮ್ಮನೆ ನಿಲ್ಲಿಸುವ ಸಂದೇಶ ವಾಣಿಯಂತೂ ಹೌದು!

ಈ ಒಂದು ನಿಮಿಷದಲ್ಲಿ ಎಷ್ಟು ಕ್ಷಣಗಳು, ಎಷ್ಟು ನಿಮಿಷಗಳು, ಎಷ್ಟು ಘಂಟೆಗಳು, ಎಷ್ಟು ದಿನಗಳು, ವರುಷಗಳಿವೆಯೋ ಆಯಾಯ ಸಂದರ್ಭಕ್ಕನುಸಾರವಾಗಿ ನಾವು  ಅತ್ಯಂತ ಸಹನೆ, ತಾಳ್ಮೆಗಳೊಂದಿಗೆ ಅನಾಯಾಸವಾಗಿ ಕಳೆದು ನಮ್ಮ ಜೀವನವನ್ನು ಸಾರ್ಥಕಗೊಳಿಸುತ್ತೇವೆ!

1990ರ ದಶಕದಲ್ಲಿ ನಾನು ಬ್ಯಾಂಕ್ ಉದ್ಯೋಗಿಯಾಗಿದ್ದಾಗ ಒಂದು ಸೋಮವಾರ ಬೆಳಿಗ್ಯೆ ನಡೆದ ಸಂಗತಿ. ನಾನು ಕ್ಯಾಶಿಯರ್ ಆಗಿ ಪಾವತಿ ಗೂಡಿನಲ್ಲಿ(ಪೇಮೆಂಟ್ ಕೌಂಟರ್) ಇದ್ದೆ. ಸ್ವೀಕೃತಿ ಗೂಡಿನಲ್ಲಿದ್ದ ನನ್ನ ಸಹೋದ್ಯೋಗಿ, ಸುಂದರ ರಾವಣನ ದಾಯಾದಿ, ತನ್ನ ಸುಖವೇ ಪರರ ಸುಖವೆಂದು ನಂಬಿಕೊಂಡಿದ್ದವ, 11:15ರ ಹೊತ್ತಿಗೆ ಹಠಾತ್ ಗೂಡಿನ ಬಾಗಿಲು ಮುಚ್ಚಿ ಹೊರ ಬಂದು ಬ್ಯಾಂಕ್ ಪ್ರವೇಶ ದ್ವಾರವನ್ನೇ ದಿಟ್ಟಿಸುತ್ತ ನಿಂತನು! ಹನುಮಂತನ ಬಾಲದಂತೆ ಬೆಳೆದು ನಿಂತಿದ್ದ ಕ್ಯಾಶ್ ತುಂಬಿಸಲು ಬಂದ ಜನರ ಸಾಲು ಬೆಚ್ಚಿ ಬಿದ್ದು ಸನ್ನೆ ಮೂಲಕ ’ಕ್ಯಾಶ್ ಒಮ್ಮೆ ತಕ್ಕೊಳ್ಳಿ ಮ್ಹಾರಾಯರೇ’ ಎಂದು ಅವನಿಗೆ ಹೇಳಲು ಪ್ರಯತ್ನಿಸಿತು. ಅವನು ವಾರೆ ದೃಷ್ಟಿಯಿಂದಲೂ ಅತ್ತ ನೋಡದೇ ನಿರ್ಲಿಪ್ತನಾಗಿ ಹೇಳಿದನು,

"ಒಂದು ನಿಮಿಷ ನಿಲ್ಲಿ!"

ಆ ಒಂದು ನಿಮಿಷ ಬಿಟ್ಟು ಐದು, ಹತ್ತು, ಹದಿನೈದು ನಿಮಿಷ ಕಳೆದರೂ ಅವನು ಅಲ್ಲೇ ನಿಂತಿದ್ದ ಮತ್ತು ಜನರ ಸಾಲು ಇನ್ನೂ ಉದ್ದ ಬೆಳೆದು ಅದಾಗಲೇ 25-30 ಜನ ಸರತಿ ಸಾಲಿನಲ್ಲಿ ಆಕಳಿಸುತ್ತಾ, ಹಣದ ಚೀಲವನ್ನು ಯಾರಾದರೂ ಲಪಟಾಯಿಸಿಯಾರೇ ಎಂಬ ಭಯದಿಂದ ಕುಂಕುಳಲ್ಲಿ ಇನ್ನೂ ಭದ್ರವಾಗಿ ಅದುಮಿ ಹಿಡಿದು ಬೆರಗಾಗಿ ನೋಡುತ್ತಾ ಇದ್ದಾರೆ!

ಒಬ್ಬ ಧೈರ್ಯದಿಂದ ಮುಂದೆ ಬಂದು ಕೇಳಿದ "ಎಂಥ ಅವಸ್ಥೆ ಮ್ಹಾರ್ರೆ! ನಿಮ್ಮ ಒಂದು ನಿಮಿಷ ಎಂದು 15 ನಿಮಿಷ ಆಯ್ತು. ಬಾಗಿಲು ಎಂಥದು ನೋಡುದು ನೀವು? ಬೀಜಾಗ್ರಿ ಸರಿ ಮಾಡಲಿಕ್ಕೆ ಉಂಟೋ?"

ಕ್ಯಾಶಿಯರ್ ಮಹಾಶಯ: "ಸ್ವಲ್ಪ ನಿಲ್ಲಿ. ಒಂದು ನಿಮಿಷ ನಿಲ್ಲಿ. ಕಾಪಿ ಬರ್ತದೆ!"

ಪ್ರಶ್ನೆ ಕೇಳಿದವ ತುಸು ಉಲ್ಲಾಸದಿಂದ ಅಗಲವಾಗಿ ನಕ್ಕು ಸರತಿಯ ಸಾಲಿಗೆ ಮರಳಿದ. ಹೀಗೆ ಬಂದವರಿಗೆಲ್ಲಾ ಉಚಿತ ಕಾಫಿ ಸೇವೆ ಪ್ರಾರಂಭಿಸಿದ ಬಗ್ಗೆ ಆನಂದ ತುಂದಿಲನಾದಂತೆ ತೋರಿದವ, ಹಿಂದೆ ಮುಂದೆ ನಿಂತವರ ಕಿವಿಯಲ್ಲಿ ಏನೋ ಹೇಳಿ ಮುಗುಳ್ನಕ್ಕ. ಅವರೂ ಮುಖ ತುಂಬಾ ಹರುಷದ ಚಿಹ್ನೆ ತೋರಿಸಿ ಕ್ಯಾಶಿಯರ್ ಮಹಾಶಯನತ್ತ ನೋಡಿ "ಆಗಲಿ ಆಗಲಿ....ಒಂದಲ್ಲ ಹತ್ತು ನಿಮಿಷ ಹೋಗಲಿ...ಬಂದವರಿಗೆಲ್ಲಾ ಕಾಫಿ ಕುಡಿಸುವ ನಿಮ್ಮಂತಹವರು ದಿನಕ್ಕೆ ನೂರರಂತೆ  ಹುಟ್ಟಲಿ!" ಎಂದು ಹರಸಿದರು!

ಸರಿಯಾಗಿ 20 ನಿಮಿಷ ನಂತರ ಗಣೇಶ್ ಪ್ರಸಾದ್ ಹೋಟಲ್ ಹುಡುಗ ಒಂದು ಟ್ರೇ‍ನಲ್ಲಿ ತಿಂಡಿ ಪೊಟ್ಟಣಗಳು ಹಾಗೂ ಫ್ಲಾಸ್ಕ್ ನಲ್ಲಿ ಕಾಫಿ, ಚಹಾ ಹೊತ್ತುಕೊಂಡು ಬಂದು ಕೌಂಟರ್ ಹಿಂಭಾಗ ಇದ್ದ ಮೇಜೊಂದರ ಮೇಲೆ ಕುಕ್ಕಿದನು. ನಮ್ಮ ಕ್ಯಾಶಿಯರ್ ಮಹಾಶಯ ಮತ್ತು ಇನ್ನಿತರ 10-12 ಬ್ಯಾಂಕ್ ಸಿಬ್ಬಂದಿ ಕಾಗೆಗಳಂತೆ ಬುರ್ರನೆ ಹಾರಿ ಅವನ ಮೇಲೆ ಮುಗಿಬಿದ್ದರು!

ಕ್ಯಾಶಯರ್ ಮಹಾಶಯ ಮುಂದಿನ 10 ನಿಮಿಷಗಳು ಗೋಳಿಬಜೆ ಅಗಿದು ಕಾಫಿ ಸೇವಿಸುವ ಸುಖದಲ್ಲಿ ಕಳೆದು, ನಂತರ ಚೊಕ್ಕವಾಗಿ ಸಾಬೂನು ಹಾಕಿ ಕೈ ಮುಖ ತೊಳೆದು, ತಲೆಕೂದಲು ಬಾಚಿ, ಒಂದು ಬೀಡಿ ಸೇದಿ ಕ್ಯಾಶ್ ಕೌಂಟರ್‍ಗೆ ಮರಳುವಾಗಲೇ ಸಾಲಿನಲ್ಲಿ ನಿಂತಿದ್ದ ಹತಾಶ ವ್ಯಕ್ಟಿಗಳಿಗೆ ತಿಳಿದ ಎರಡು ಮುಖ್ಯ ವಿಚಾರಗಳು:

1. ಒಂದು ನಿಮಿಷದಲ್ಲಿ ಸಮಾನ್ಯವಾಗಿ 35-40 ನಿಮಿಷಗಳಿವೆ.
2.  "ಸ್ಕಲ್ಪ ನಿಲ್ಲಿ, ಕಾಪಿ ಬರುತ್ತದೆ" ಎಂಬುದು, ’ಕಾಫಿ ಬರುತ್ತದೆ ತನಗೆ, ಕಾದು ನಿಲ್ಲುವ ಕೆಲಸ ನಿನಗೆ’ ಎಂದರ್ಥ!